

ಕೊಳ್ಳೇಗಾಲ: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾದವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದಿಂದ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಬಸ್ ನಿಲ್ದಾಣ ಸಮೀಪವಿರುವ ಗಣೇಶ ದೇವಾಲಯ ಮುಂಭಾಗ ನೂರಾರು ಸಂಖ್ಯೆಯಲ್ಲಿ ಸಮಾವೇಶಗೊಂಡ ಮಹಾಸಭಾ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಡಾ.ವಿಷ್ಣುವರ್ಧನ್, ಡಾ.ರಾಜ್‌ಕುಮಾರ್ ರಸ್ತೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ಸಾಗಿ ಎಡಿಬಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೊಲೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಟ ದರ್ಶನ್, ಪವಿತ್ರಾಗೌಡ ಹಾಗೂ ಸಹಚರರಿಗೆ ಜೀವಾವಧಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ ಬಳಿಕ ಪ್ರತಿಭಟನಾಕಾರರು ತಾಲೂಕು ಕಚೇರಿ ತಲುಪಿದರು.
ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಲೋಕೇಶ್ ಮಾತನಾಡಿ, ಲಿಂಗಾಯತ ಸಮಾಜದ ಮೇಲೆ ರಾಜ್ಯದಲ್ಲಿ ಮೇಲಿಂದ ಮೇಲೆ ಹಲ್ಲೆ, ಕೊಲೆ ದಬ್ಬಾಳಿಕೆ ಹೆಚ್ಚಾಗುತ್ತಿದೆ. ರೇಣುಕಸ್ವಾಮಿ ಹತ್ಯೆ ಪ್ರಕರಣದ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆಯಾಗಬೇಕು. ಸಂತ್ರಸ್ತರಿಗೆ ಸರ್ಕಾರದಿಂದ 1 ಕೋಟಿ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲಪುರ ನಂದೀಶ್ ಮಾತನಾಡಿ, ನಟ ದರ್ಶನ್ ಅವರ ದೌರ್ಜನ್ಯ ಒಂದಾದಾಗಿ ಬಯಲಾಗುತ್ತಿದೆ. ಇವತ್ತು ಎಲ್ಲ ಸಮಾಜಗಳು ಒಗ್ಗಟ್ಟಾಗಿ ಹೋರಾಟ ಮಾಡುವ ಪರಿಸ್ಥಿತಿ ಇದೆ. ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸೀಗಬೇಕಾದರೆ ನಟ ದರ್ಶನ್‌ಗೆ ಗಲ್ಲು ಶಿಕ್ಷೆ ನೀಡಬೇಕು. ದರ್ಶನ್ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತ ಕುಟುಂಬಕ್ಕೆ ನೀಡಬೇಕೆಂದು ಆಗ್ರಹಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ಮಂಜುಳಾ ಪ್ರತಿಭಟನಾಕಾರರ ಮನವಿ ಪತ್ರ ಸ್ವೀಕರಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ನಿರ್ದೇಶಕರಾದ ಮಲ್ಲಿಕಾರ್ಜುನಸ್ವಾಮಿ ಜಿನಕನಹಳ್ಳಿ, ಮಹೇಶ್ ಉಗನಿಯ, ಶಿವಸ್ವಾಮಿ ಕಾಮಗೆರೆ, ಪಾಳ್ಯ ರಘು, ಸುಂದರಪ್ಪ, ಟಗರಪುರ ಮಹದೆವಸ್ವಾಮಿ, ಆಲಹಳ್ಳಿ ಪುಟ್ಟಪ್ಪ, ಕುಂತೂರು ನಂಜುಂಡಸ್ವಾಮಿ ಮುಖಂಡರಾದ ತಿಮ್ಮರಾಜೀಪುರ ಪುಟ್ಟಣ್ಣ, ಚೆಲುವನಹಳ್ಳಿ ಬಸವಣ್ಣ, ಯುಪಿಎಸ್ ಮಹದೇವಸ್ವಾಮಿ, ಅಚ್ಗಾಲ್ ಮಹದೇವಸ್ವಾಮಿ, ಷಣ್ಮುಗಸ್ವಾಮಿ, ಮಾರ್ಕೆಟ್ ನಂಜಪ್ಪ, ವೀರಭದ್ರಸ್ವಾಮಿ, ಬಸವರಾಜು ಬಸಪ್ಪನದೊಡ್ಡಿ, ಅಣಗಳ್ಳಿ ಬಸವರಾಜು, ಸೋಮಣ್ಣ ಉಪ್ಪಾರ್, ನರಸಿಂಹ, ರಮೇಶ್ ಇತರರು ಇದ್ದರು.
19ಕೆಜಿಎಲ್-1