

ಮುಂಡಗೋಡ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯಲ್ಲಿ ನಡೆದ ಜೈನ ಸಮುದಾಯದ ಕಾಮಕುಮಾರನಂದಿ ಮುನಿಮಹಾರಾಜರ ಹತ್ಯೆಯಾಗಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಹೇಳಿದರು.
ಪಟ್ಟಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸನ್ಯಾಸಿಗಳು ಎಂದರೆ ಎಲ್ಲವನ್ನು ತ್ಯಾಗ ಮಾಡಿ ಸಮಾಜವೇ ನಮ್ಮ ತಂದೆ-ತಾಯಿ ಎಂದು ನಂಬಿದವರು. ಸಮಾಜ ಅವರನ್ನು ಮಕ್ಕಳಂತೆ ಕಾಣಬೇಕಿತ್ತು. ಆದರೆ, ಅವರನ್ನು ಕ್ರೂರವಾಗಿ ಹತ್ಯೆ ಮಾಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದದಂತಾಗಿದೆ. ಜೈನ ಮುನಿ ಹತ್ಯೆಗೈದವರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು. ಇನ್ಮುಂದೆ ಇಂತಹ ಘಟನೆಗಳು ಜರುಗದಂತೆ ಮುಂಜಾಗ್ರತೆ ವಹಿಸಬೇಕು ಎಂದರು.
ಸಾಧನಾ ಸಂಸ್ಥೆಯ ಮುಖ್ಯಸ್ಥೆ ಡಾ. ಇಸಬೆಲ್ಲ ಝೆವಿಯರ್ ಮಾತನಾಡಿ, ಗುರುಶಿಷ್ಯರ ಸಂಬಂಧವು ತನ್ನದೆಯಾದ ಮಹತ್ವ ಹೊಂದಿದೆ. ಸ್ವಾಮೀಜಿಯವರು ನಂಬಿದವರೇ ಮೋಸ ಮಾಡಿರುವುದು ಬೇಸರದ ಸಂಗತಿ. ಸನ್ಯಾಸಿಗಳ ಮೇಲೆ ನಡೆಸಿರುವ ಇಂತಹ ಕ್ರೂರ ಹತ್ಯೆಯನ್ನು ನಾವು ಖಂಡಿಸುತ್ತೇವೆ ಎಂದರು.
ನಂತರ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಶಂಕರ ಗೌಡಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ವಿ.ಎಸ್. ಕೊಣಸಾಲಿ, ಎಸ್.ಕೆ. ಕೊಳೂರ, ಎಸ್.ಬಿ. ಹೂಗಾರ, ಎಸ್.ವಿ. ಐಹೊಳೆ, ಆರ್.ಜೆ. ಬೆಳ್ಳೆನವರ, ಬಿ.ಕೆ. ಪಾಟೀಲ, ಫಣಿರಾಜ ಹದಳಗಿ, ಶಿವಾನಂದ ವಾಲಿಶೆಟ್ಟರ್, ಎಂ.ಜಿ. ಹಿರೇಮಠ, ಮುತ್ತಣ್ಣ ವಾಲಿಶೆಟ್ಟರ್, ಡಿ.ಎ. ಅಂಗಡಿ ಕ್ರೖೆಸ್ತ ಸಮುದಾಯದ ಮುಖಂಡರು ಹಾಗೂ ವಿವಿಧ ಸಂಘಟನೆಗಳವರು ಪಾಲ್ಗೊಂಡಿದ್ದರು.