ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದವ ಜೈಲುಪಾಲು

Published on

ಕೆಲಸಕ್ಕಿದ್ದವ ಮಾಡಿದ ತಪ್ಪಿಗೆ ಮಾಲೀಕನಿಗೂ ಸಂಕಷ್ಟ

ಬೇತಮಂಗಲ: ತೋಟದ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದವ ಮಾಲೀಕನ ಮನೆಯಲ್ಲಿದ್ದ ನಾಡ ಬಂದೂಕು ಮತ್ತು ಲಾಂಗ್​ ಕದ್ದೊಯ್ದು ಜೈಲು ಸೇರಿದ್ದಲ್ಲದೇ ಕೆಲಸಕ್ಕೆ ಇಟ್ಟುಕೊಂಡಿದ್ದ ಮಾಲೀಕನಿಗೂ ಸಂಕಷ್ಟ ತಂದಿಟ್ಟಿದ್ದಾನೆ.
ಮಾಲೂರು ತಾಲೂಕಿನ ಸೀನಪ್ಪ ಬಂಧಿತ.
ಬೇತಮಂಗಲ ನಿವಾಸಿ ಕರಗ ನಾಗರಾಜ್​ ಅವರು ತೋಟದ ಮನೆಯಲ್ಲಿ ವಾಸಿಸುತ್ತಿದ್ದು, 8 ದಿನಗಳ ಹಿಂದೆಯಷ್ಟೇ ಮಾಲೂರು ಪಕ್ಕದ ಹಳ್ಳಿಯ ಸೀನಪ್ಪ ಎಂಬುವವನನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರು. ಆದರೆ, ಸೀನಪ್ಪ, ಸೋಮವಾರ ರಾತ್ರಿ ಮಾಲೀಕರು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ನಾಡ ಬಂದೂಕು ಮತ್ತು ಲಾಂಗ್​ ಎತ್ತಿಕೊಂಡು ಪರಾರಿಯಾಗಿದ್ದ. ಮಂಗಳವಾರ ಬೆಳಗ್ಗೆ ಬೇತಮಂಗಲ ಹೊರವಲಯದ ಗೊಸಿನಕೆರೆ ಪೈಪ್​ಲೈನ್​ ರಸ್ತೆಯಲ್ಲಿರುವ ಇಟ್ಟಿಗೆ ಕಾರ್ಖಾನೆ ಸಮೀಪ ಸೀನಪ್ಪ ಬಂದೂಕು&ಲಾಂಗ್​ ಹಿಡಿದುಕೊಂಡು ಹೋಗುವುದನ್ನು ಕಂಡ ಜನರು ಭಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಸೀನಪ್ಪನನ್ನು ಬಂಧಿಸಿ ಬಂದೂಕು ಮತ್ತು ಲಾಂಗ್​ ವಶಕ್ಕೆ ಪಡೆದಿದ್ದಾರೆ.
ತನಿಖೆಯಲ್ಲಿ ಮಾಲೀಕನ ಹೆಸರು: ವಿಚಾರಣೆ ನಡೆಸಿದ ಪೊಲೀಸರಿಗೆ ಸೀನಪ್ಪ, ನಾಗರಾಜ್​ ಹೆಸರು ಬಾಯಿ ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು, ಕರಗ ನಾಗರಾಜ್​ ಅವರನ್ನೂ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮನೆಯಲ್ಲಿ ನಾಡ ಬಂದೂಕು ಇದ್ದಿದ್ದು ನಿಜ. ಆದರೆ, ಅದು ನನ್ನದಲ್ಲ ನನಗೆ ಕೊಟ್ಟಿದ್ದವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾರೆ. ಶಸ್ತ್ರಾಸ್ತ್ರ ಕಳವು ಮಾಡಿದ್ದ ಸೀನಪ್ಪ ಮತ್ತು ಪರವಾನಗಿ ಇಲ್ಲದ ಶಸ್ತ್ರಾಸ್ತ್ರ ಹೊಂದಿದ್ದ ನಾಗರಾಜ್​ ಈಗ ಜೈಲು ಪಾಲಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net