

ಹುಬ್ಬಳ್ಳಿ : ಸಂವಿಧಾನಕ್ಕೆ ಅತಿ ಹೆಚ್ಚು ಅವಮಾನ ಮಾಡಿ, ಡಾ. ಬಿ.ಆರ್. ಅಂಬೇಡ್ಕರ ಅವರನ್ನೇ ಅಪಮಾನಿಸಿದವರು ಇಂದು ತಮ್ಮನ್ನು ತಾವು ಸಂವಿಧಾನದ ರಕ್ಷಕರು ಎಂಬಂತೆ ಪೋಸ್ ಕೊಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕರ್ನಾಟಕ ಉತ್ತರ ಪ್ರಾಂತ ಆಶ್ರಯದಲ್ಲಿ ನಗರದ ಬಿವಿಬಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಸಂವಿಧಾನ-75: ಬದಲಾಯಿಸಿದ್ದು ಯಾರು ? ಬಲಪಡಿಸಿದ್ದು ಯಾರು ?’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಸರ್ಕಾರದ ಯೋಜನೆಗಳನ್ನು ಟೀಕಿಸಿದ್ದಕ್ಕಾಗಿ 1951ರಲ್ಲೆ ಆರ್ಟಿಕಲ್ 19ಕ್ಕೆ ತಿದ್ದುಪಡಿ ತರುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲಾಗಿತ್ತು. ಡಾ. ಅಂಬೇಡ್ಕರ್ ಅವರ ಬಗ್ಗೆ ನೆಹರು ಅವರು ಸದಾ ಅಭದ್ರತೆ ದೃಷ್ಟಿಕೋನ ಹೊಂದಿದ್ದರು. ಹೀಗಾಗಿ, ಅಂಬೇಡ್ಕರ್ ಅವರನ್ನು ಅವಮಾನಿಸಿ, ಅವರನ್ನು ಸಚಿವ ಸಂಪುಟದಿಂದ ಹೊರಹಾಕಲಾಗಿತ್ತು ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಸಾವರ್ಕರ್ ಎಂಬ ಅಪಪ್ರಚಾರವನ್ನು ಕಾಂಗ್ರೆಸ್ ಮಾಡುತ್ತಿದೆ. ಸ್ವತಃ ನೆಹರು ಅವರೇ ಅಂಬೇಡ್ಕರ್ ವಿರುದ್ಧ ಎರಡು ಬಾರಿ ಚುನಾವಣೆ ಪ್ರಚಾರ ನಡೆಸಿದ್ದರು. ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದ ನಾರಾಯಣ ಕಾಜ್ರೋಲ್ಕರ್ ಅವರಿಗೆ ಅಂದಿನ ಕಾಂಗ್ರೆಸ್ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ, ಗೌರವಿಸಿತು. ಆದರೆ, ಸಂವಿಧಾನ ರಚಿಸಿದ ಅಂಬೇಡ್ಕರ್ ಅವರನ್ನೇ ಮರೆತು ಬಿಟ್ಟಿತು ಎಂದು ಕಳವಳ ವ್ಯಕ್ತಪಡಿಸಿದರು.
ಡಾ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದ್ದು ಬಿಜೆಪಿ. ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದ ಕಾಂಗ್ರೆಸ್, ಸಂವಿಧಾನ ಶಿಲ್ಪಿಯನ್ನೇ ಮರೆತು ಬಿಟ್ಟಿತು ಎಂದರು.
ಬಿಜೆಪಿಯವರು ಮೀಸಲಾತಿ ತೆಗೆಯುತ್ತಾರೆ. ಸಂವಿಧಾನ ಬದಲಾಯಿಸುತ್ತಾರೆಂಬ ಅಪಪ್ರಚಾರವನ್ನು ಕಾಂಗ್ರೆಸ್ನವರು ಮಾಡುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಮೀಸಲಾತಿ ಮುಟ್ಟುವ ಕಾರ್ಯವನ್ನು ಬಿಜೆಪಿ ಮಾಡುವುದಿಲ್ಲ ಎಂದು ಹೇಳಿದರು.
ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾಜ, ಶೋಷಿತರ, ವಿದ್ಯಾರ್ಥಿಗಳಿಗೆ ಪವಿತ್ರ ಸಂವಿಧಾನ ನೀಡಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಅನಿವಾರ್ಯತೆ ಇದೆ ಎಂದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜು ಮಾತನಾಡಿ, ಸಂವಿಧಾನ ಬದಲಾಯಿಸಲು, ತಿರುಚಲು ಸಾಧ್ಯವಿಲ್ಲ. ಜಾತಿ ವ್ಯವಸ್ಥೆ, ಜಾತಿ ಮಧ್ಯದಲ್ಲಿ ನಮ್ಮೆಲ್ಲರೂ ಒಗ್ಗೂಡಿಸುವ ಶಕ್ತಿ ಸಂವಿಧಾನಕ್ಕೆ ಮಾತ್ರ ಇದೆ ಎಂದು ತಿಳಿಸಿದರು.
ಪುಸ್ತಕ ಲೇಖಕರಾದ ಡಾ. ಬಸವರಾಜ ಡೊಣ್ಣೂರ ಹಾಗೂ ಡಾ. ಹಂಸವೇಣಿ ಸಾಂರ್ದಭಿಕವಾಗಿ ಮಾತನಾಡಿದರು. ಪುಸ್ತಕದ ಕುರಿತು ಸಾಮಾಜಿಕ ಕಾರ್ಯಕರ್ತ ವಾದಿರಾಜ ಮಾತನಾಡಿದರು.
ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರವಣ ರಾಜ್, ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಅಮೃತಾ ಕೊಳ್ಳಿ ಹಾಗೂ ಇತರರು ಇದ್ದರು.