ವಂಚನೆಗೊಳಗಾದವರು ನ್ಯಾಯ ಪಡೆಯಲು ಹಿಂಜರಿಯಬಾರದು.

9cbp1
Published on

ಚಿಕ್ಕಬಳ್ಳಾಪುರ: ಗ್ರಾಹಕರು ಹಕ್ಕುಗಳ ಬಗೆಗಿನ ತಿಳಿವಳಿಕೆಯಿಂದ ವಂಚನೆಗೊಳಗಾಗುವುದು ತಪು$್ಪತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ರಾಜ್ಯ ಆಹಾರ ನಾಗರಿಕ ಸರಬರಾಜು ನಿಗಮ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರವು ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರು ವಾಣಿಜ್ಯ ವ್ಯಾಪಾರ ಮಳಿಗೆಗಳಲ್ಲಿ ವಸ್ತುಗಳನ್ನು ಖರೀದಿಸುವ ವೇಳೆ ಉತ್ಪನ್ನಗಳ ಗುಣಮಟ್ಟ ಹಾಗೂ ಪ್ರಮಾಣವು ಸೇರಿದಂತೆ ಸಮರ್ಪಕ ಮಾಹಿತಿ ತಿಳಿದುಕೊಳ್ಳಬೇಕು. ಇತ್ತೀಚಿಗಿನ ದಿನಗಳಲ್ಲಿ ಬಹುತೇಕರು ಸರಕು, ಸೇವೆಯ ಇತರ ವ್ಯವಹಾರಗಳಿಗೆ ಆನ್ ಲೈನ್ ಬುಕ್ಕಿಂಗ್ ಗೆ ಮೊರೆ ಹೋಗುತ್ತಿದ್ದಾರೆ. ಇದೇ ವೇಳೆ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್. ಕುಮಾರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ, ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ಕೆಳಗಿನಮನಿ ಮತ್ತಿತರರು ಇದ್ದರು.

*ಭಿತ್ತಿ ಪತ್ರಗಳ ಬಿಡುಗಡೆ

ಗ್ರಾಹಕ ನ್ಯಾಯಕ್ಕೆ ವರ್ಚುವಲ್ ವಿಚಾರಣೆ ಮತ್ತು ಡಿಜಿಟಲ್ ಪ್ರವೇಶ ಎಂಬ ಘೋಷ ವಾಕ್ಯದ ಕಾರ್ಯಕ್ರಮದಲ್ಲಿ ಗ್ರಾಹಕರ ಜಾಗೃತಿಗಾಗಿ ಕರಪತ್ರಗಳು ಹಾಗೂ ಭಿತ್ತಿ ಪತ್ರಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ 50 ಲಕ್ಷದವರೆಗಿನ ಮೋಸದ ಪ್ರಕರಣಗಳಿಗೆ ನ್ಯಾಯ ಕೋರಿ ಅರ್ಜಿ ಸಲ್ಲಿಸುವುದು, ಮಾಹಿತಿಗಾಗಿ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಸಂಪರ್ಕ, ಗ್ರಾಹಕ ಕಾಯ್ದೆ, ಸವಲತ್ತುಗಳು ಬಗ್ಗೆ ಅರಿವು ಮೂಡಿಸಲಾಯಿತು. ತೂಕ ಮತ್ತು ಅಳತೆಯ ಮಾಪನ ಯಂತ್ರಗಳು, ವಿವಿಧ ಉಪಕರಣಗಳ ಪ್ರಾತ್ಯಕೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net