

ನರಗುಂದ: ನನ್ನ ವಿರುದ್ಧ ನಾಲ್ಕು ಬಾರಿ ಸೋಲುಂಡಿರುವ ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಹತಾಶೆ ಮನೋಭಾವನೆಯಿಂದ ಹಣ ಮಾಡಲು ಮುಂದಾಗಿದ್ದಾರೆ. ಚುನಾವಣೆಯಲ್ಲಿ ಸೋತ ಬಳಿಕವೂ ಹಣ ಮಾಡುವುದು ಹೇಗೆ ಎಂಬ ಅವರ ಕಲೆಯನ್ನು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಎಳೆ-ಎಳೆಯಾಗಿ ಬಿಚ್ಚಿಡಲಿದ್ದೇನೆ ಎಂದು ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ ಅವರು ಯಾವಗಲ್ಲ ವಿರುದ್ಧ ಹರಿಹಾಯ್ದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಜನತಾ ಪಕ್ಷದಲ್ಲಿದ್ದಾಗ ಮತ್ತು 2013ರಲ್ಲಿ ಗುಂಡೇಟು ತಗುಲಿದಾಗ ಮಾಡಿದ ಅಪಪ್ರಚಾರದಿಂದ ಸೋತಿದ್ದು ಬಿಟ್ಟರೆ 6ರ ಪೈಕಿ 4 ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ್ದೇನೆ. ಈ ಅವಧಿಯಲ್ಲಿ ಪಟ್ಟಣದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದ್ದೇನೆ. ಐತಿಹಾಸಿಕ ಕೆಂಪಗಸಿ, ಬಾಬಾಸಾಹೇಬರ ಅರಮನೆ, ಹೊಳೆಆಲೂರಿನ ಸರ್ಕಾರಿ ಆಸ್ಪತ್ರೆ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ, ಮಿನಿ ವಿಧಾನಸೌಧ, ಮುರಾರ್ಜಿ ವಸತಿ ಶಾಲೆ, ಹುಯಿಲಗೋಳ ನಾರಾಯಣರಾಯ್, ಆಲೂರು ವೆಂಕಟರಾಯರ ಭವನ ನಿರ್ಮಾಣ, ಕೆರೆ ಹೂಳೆತ್ತುವುದು ಸೇರಿ ಮತಕ್ಷೇತ್ರದಾದ್ಯಂತ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಗದಗಕ್ಕೆ ಹೋಗಿದ್ದ ಜಿಟಿಟಿಸಿ ಕಾಲೇಜ್ ಪುನಃ ನರಗುಂದಕ್ಕೆ ತಂದಿದ್ದೇನೆ. ಈ ಬಗ್ಗೆ ಕಿಂಚಿತ್ತೂ ಚಕಾರವೆತ್ತದ ಯಾವಗಲ್ಲ ಅವರು ಕೆಲವೊಂದಿಷ್ಟು ಬಾಕಿ ಕಾಮಗಾರಿಗಳ ನೆಪದಲ್ಲಿ ಹೊಂದಾಣಿಕೆ ರಾಜಕಾರಣದ ಆರೋಪ ಮಾಡಿರುವುದು ದುರುದ್ದೇಶಪೂರಿತ ಎಂದರು.
ಎಚ್.ಕೆ. ಪಾಟೀಲರು ಗದಗ ಜಿಲ್ಲಾ ಉಸ್ತುವಾರಿ, ರಾಜ್ಯದ ಪ್ರಭಾವಿ ಖಾತೆ ಹೊಂದಿದ ಮಂತ್ರಿಗಳಾಗಿದ್ದಾರೆ. ನನ್ನ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ, ಜನರಿಗೋಸ್ಕರ ನಾನು ಯಾರೊಂದಿಗಾದರೂ ಚರ್ಚಿಸಿ ಮಾತನಾಡುತ್ತೇನೆ. ಆದರೆ, ಅದನ್ನೇ ನೀವು ಹೊಂದಾಣಿಕೆ ರಾಜಕಾರಣವೆಂದು ಭಾವಿಸಿ ನಿಮ್ಮ ಗೌರವ, ಹಿರಿತನಕ್ಕೆ ಕೊಟ್ಟ ಮರ್ಯಾದೆಯನ್ನು ಲೆಕ್ಕಿಸದೆ ನನ್ನ ವಿರುದ್ಧ ರಾಜಕೀಯ ಆರೋಪ ಮಾಡಿರುವುದು ಅಕ್ಷಮ್ಯ ಎಂದರು.
ಅಧಿಕಾರದಾಸೆ: ಕಾಂಗ್ರೆಸ್ ಪಕ್ಷಕ್ಕೆ ಹಗಲಿರುಳು ದುಡಿದ, ಪ್ರಾಮಾಣಿಕ ಹಿರಿಯ ಮುಖಂಡರು, ಕಾರ್ಯಕರ್ತರನ್ನು ಗ್ಯಾರಂಟಿ ಸಮಿತಿಗೆ ನೇಮಿಸದೆ ವಕೀಲನಾಗಿದ್ದ ಸಣ್ಣ ವಯಸ್ಸಿನ ನಿಮ್ಮ ಮಗನನ್ನು ಕೇವಲ 25 ಸಾವಿರ ರೂ. ಹಣ, ಅಧಿಕಾರದಾಸೆಗೆ ತಾಲೂಕು ಅಧ್ಯಕ್ಷರನ್ನಾಗಿ ಮಾಡಿದ್ದೀರಿ. ಬೆಂಗಳೂರಿನಲ್ಲಿ ಪ್ರತಿದಿನ ಎರಡ್ಮೂರು ಇಲಾಖೆಗಳಲ್ಲಿ ಬರುವ ಪತ್ರ, ವರ್ಗಾವಣೆ, ಶಿಫಾರಸು ಪತ್ರಗಳನ್ನೇ ಕಾಯುವಂತೆ ಮಾಡಿದ್ದೀರಿ. ಆಯಿಲ್ ಮಿಲ್‌ಗೆ ರೈತರು ನೀಡಿದ ಷೇರು ಹಣ ನುಂಗಿ ನೀರು ಕುಡಿದಿದ್ದೀರಿ ಎಂದು ಆರೋಪಿಸಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಸದಸ್ಯ ದೇವಣ್ಣ ಕಲಾಲ, ರಾಚನಗೌಡ ಪಾಟೀಲ, ಎ.ಎಂ.ಹುಡೇದ, ಎಸ್.ಆರ್.ಪಾಟೀಲ, ಚಂದ್ರು ದಂಡಿನ, ಬಿ.ಬಿ. ಐನಾಪೂರ, ನವೀನಗೌಡ ಪಾಟೀಲ, ನಿಂಗಣ್ಣ ಗಾಡಿ, ಬಸಪ್ಪ ಮಳಗಿ, ಬಿ.ಎಸ್.ಪಾಟೀಲ, ಗುರಪ್ಪ ಆದೆಪ್ಪನವರ, ಎನ್.ಕೆ.ಸೋಮಾಪೂರ, ನಾಗನಗೌಡ ಪಾಟೀಲ, ನಾಗರಾಜ ನೆಗಳೂರ, ಇತರರಿದ್ದರು.
ಸೋತವರು ಹ್ಯಾಂಗ ರೊಕ್ಕಾ ಮಾಡಬೇಕು...
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 18 ತಿಂಗಳಲ್ಲಿ ನಾನು ಏನು ಮಾಡಿದ್ದೇನೆಂದು ಕೇಳುವುದರ ಬದಲು, ಸಿಎಂ ಅವರನ್ನೇ ನರಗುಂದಕ್ಕೆ ಏನು ಕೊಟ್ಟಿದ್ದೀರೆಂದು ಕೇಳಬೇಕಿತ್ತು. 18 ತಿಂಗಳ ಅವಧಿಯಲ್ಲಿ ಬಿ.ಆರ್.ಯಾವಗಲ್ಲ ಅವರು ಗುತ್ತಿಗೆದಾರರೊಂದಿಗೆ ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿ ಚರ್ಚಿಸಿ ಕಾಮಗಾರಿಗಳ ಬಾಕಿ ಬಿಲ್ ಪಾವತಿಸಲು 6 ಕೋಟಿ ರೂ., ಹೊಂದಾಣಿಕೆ ಮಾಡಿಕೊಂಡಿರುವ ಆಪಾದನೆ ಕೇಳಿ ಬಂದಿದೆ. ಹಿಂದಿನ ಬಿಜೆಪಿ ಸರ್ಕಾರವಿದ್ದಾಗ 1800 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕೆಲಸ ಮಾಡಿದಾಗ ಯಾವುದೇ ಆಕ್ಷೇಪ ಮಾಡದ ಯಾವಗಲ್ಲ, ಚುನಾವಣೆಯಲ್ಲಿ ಸೋತ ತಕ್ಷಣವೇ ಕಳಪೆ ಕಾಮಗಾರಿಗಳ ಆರೋಪ ಮಾಡಿ ಹಣ ಮಾಡಲು ಮುಂದಾದರು. ‘ಸೋತವರು ಹ್ಯಾಂಗ ರೊಕ್ಕಾ ಮಾಡಬೇಕು’ ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಿ ಎಂದು ದೂರಿದರು.
ಜನಕ್ಕೆ ಹೆದರದಿದ್ದರೂ ನಿಮ್ಮ ಮನಕ್ಕಾದರೂ.....
ನವಲಗುಂದ ತಾಲೂಕು ಜಾವೂರಿನಿಂದ ನರಗುಂದಕ್ಕೆ ಬಂದಾಗ ದಿ. ಎಲ್. ಎಸ್.ಪಾಟೀಲರು ನಿಮ್ಮನ್ನು ಈ ಕ್ಷೇತ್ರಕ್ಕೆ ಪರಿಚಯ ಮಾಡಿಕೊಟ್ಟರು. ರೈತರ ಹೋರಾಟ, ಬಂಡಾಯಕ್ಕೆ ಇವರ ಕೊಡುಗೆ ಏನೂ ಇಲ್ಲ. ಒಂದು ದಿನವೂ ಹೋರಾಟಕ್ಕೆ ಹೋಗಿಲ್ಲ. ಆದರೆ, ಎರಡ್ಮೂರು ಬಾರಿ ಕೋರ್ಟ್‌ಗೆ ಹೋಗಿ ಬಂದಿದ್ದನ್ನೇ ನೆಪವಾಗಿಸಿಕೊಂಡು ಕೇವಲ ರಾಜಕೀಯಕ್ಕೋಸ್ಕರ ನಿಮಗೆ ಸಹಾಯ ಮಾಡಿದ ಎಲ್ಲರನ್ನು ತುಳಿದು 5 ಬಾರಿ ಶಾಸಕರಾಗಿದ್ದೀರಿ. ಈ ಅವಧಿಯಲ್ಲಿ ಇಂಜಿನಿಯರಿಂಗ್ ಕಾಲೇಜ್ ನಿರ್ಮಿಸಿರುವುದನ್ನು ಬಿಟ್ಟರೆ ಮತ್ತೇನು ಹೇಳಿಕೊಳ್ಳುವಂತಹ ಕೆಲಸ ಮಾಡಲಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಬೆಣ್ಣೆಹಳ್ಳದ ಹೂಳೆತ್ತುವ ಸಲುವಾಗಿ ಮಾಡಿದ್ದ 1681 ಕೋಟಿ ರೂ. ಕ್ರಿಯಾಯೋಜನೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಾರಂಭಿಕ ಹಂತವಾಗಿ 200 ಕೋಟಿ ರೂ. ಕಾಮಗಾರಿಗೆ ಅನುಮೋದನೆ ನೀಡಿದ್ದಾರೆ. ಈ ಹಣ ಸಂಪೂರ್ಣ ನಮಗೆ ಬರುತ್ತದೆ ಎಂದು ಆಸೆ ಇಟ್ಟುಕೊಳ್ಳಬೇಡಿ. ಇದು ಶಿಗ್ಗಾಂವಿ, ಹಾನಗಲ್ಲದಿಂದ ನರಗುಂದ ತಾಲೂಕು ಮೆಣಸಗಿವರೆಗೆ ಮಾಡುವ ಅಭಿವೃದ್ಧಿ ಕಾಮಗಾರಿಗೆಂದು ಅರಿತುಕೊಳ್ಳಬೇಕು. ಜನಕ್ಕೆ ಹೆದರದಿದ್ದರೂ ನಿಮ್ಮ ಮನಕ್ಕಾದರೂ ಹೆದರಿ ನಿಮ್ಮ ತವರಿನ ಕಡೆಯ ಪ್ರೇಮ ಹೆಚ್ಚಾಗಬೇಕು ಎಂದು ಸಿ.ಸಿ.ಪಾಟೀಲ ವಾಗ್ದಾಳಿ ನಡೆಸಿದರು.