ವಿಶ್ವಾತೀತ ಪ್ರಜ್ಞೆ ಬೆಳೆಸಿದವರು ಕುವೆಂಪು

2
Published on

ಮೈಸೂರು: ನಾಡು-ನುಡಿ ಬಗ್ಗೆ ಅಪ್ರತಿಮ ಕವಿತೆಗಳನ್ನು ಬರೆಯುತ್ತಲೇ ರಾಷ್ಟ್ರ ಹಾಗೂ ವಿಶ್ವಾತೀತ ಪ್ರಜ್ಞೆಯನ್ನು ಬೆಳೆಸಿರುವ ಕುವೆಂಪು ಅವರ ಚಿಂತನೆಯನ್ನು ಯುವ ಜನರು ಹಾಗೂ ವಿದ್ಯಾರ್ಥಿಗಳಿಗೆ ತಲುಪಿಸಬೇಕಿದೆ ಎಂದು ಸಾಹಿತಿ ಡಾ.ಗುರುಪಾದ ಮರಿಗುದ್ದಿ ಹೇಳಿದರು.


ನಗರದ ಜಯಲಕ್ಷ್ಮೀಪುರಂನ ಸೇಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವು ರಾಷ್ಟ್ರಕವಿ ಕುವೆಂಪು ಅವರ 30ನೇ ಪುಣ್ಯ ಸ್ಮರಣೆ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಕನ್ನಡ ಕರ್ನಾಟಕ ಸಂಸ್ಕೃತಿ ಚಿಂತನೆಗಳ ಕುರಿತ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿದರು.


ಯಾವುದೇ ದೇಶದಲ್ಲಿ ಬಹಳ ದೊಡ್ಡ ಕವಿ, ಸಾಹಿತಿ, ತತ್ವಜ್ಞಾನಿ, ದಾರ್ಶನಿಕ ಬಂದಾಗ ಇಡೀ ವ್ಯವಸ್ಥೆಯೇ ಪುನರಾವಲೋಕನವಾಗುತ್ತದೆ. ಕುವೆಂಪು ಅವರು ಮಾಡಿದ್ದು ಅದನ್ನೆ. ನಮ್ಮ ನಾಡು, ನುಡಿ, ಸಾಹಿತ್ಯ, ಭಾಷೆ, ಪರಂಪರೆಗಳ ಬಗ್ಗೆ ಮರು ವಿಚಾರವನ್ನು ತಮ್ಮ ಸಾಹಿತ್ಯದ ಮೂಲಕ ಪ್ರಸ್ತಾಪಿಸಿದರು.

ಯಾವುದನ್ನು ಪ್ರಜಾಪ್ರಭುತ್ವದ ಆಧುನಿಕ ಮೌಲ್ಯಗಳು ಎಂದು ಹೇಳುತ್ತಿದ್ದೇವೋ ಅದನ್ನು ಅವರು ಸ್ವಾತಂತ್ರೃ ಪೂರ್ವದಲ್ಲಿಯೇ ಚರ್ಚೆಗೆ ತಂದರು ಎಂದರು.
ಅವರ ಅನೇಕ ಉಪನ್ಯಾಸಗಳು, ಕಥೆ, ಕವನ, ಕಾದಂಬರಿಗಳು ನಮಗೆ ಹೊಸತನ ನೀಡುತ್ತವೆ. ಅವರ ವಿಶ್ವಮಾನವ ಗೀತೆ ಇಂದಿಗೂ ಕನ್ನಡ ಅಪ್ರತಿಮ ಗೀತೆಯಾಗಿದೆ. ಅವರಿಗೆ ಮಲೆನಾಡಿನ ಬಗ್ಗೆ ಅದ್ಭುತ ಪ್ರೀತಿ ಇತ್ತು. ಅದು ಸ್ಥಳೀಯ ಪ್ರಜ್ಞೆ. ಜತೆಗೆ ಕರ್ನಾಟಕದ ಬಗ್ಗೆ ಕಾಳಜಿ ಇತ್ತು. ಅದು ಕನ್ನಡ ಪ್ರಜ್ಞೆ. ಭಾರತೀಯತೆಯೂ ಇತ್ತು. ಇವುಗಳನ್ನು ದಾಟಿಕೊಂಡು ವಿಶ್ವಪ್ರಜ್ಞೆಯನ್ನು ಹೊಂದಿದ್ದರು. ಹಾಗಾಗಿ, ಒಂದು ಸ್ಥಳೀಯ ಪ್ರಜ್ಞೆ ಮೂಲಕ ಅಂತಾರಾಷ್ಟ್ರೀಯ ಪ್ರಜ್ಞೆಗೆ ಮನುಷ್ಯ ಏರಬಹುದು ಎನ್ನುವುದನ್ನು ಜೀವಂತವಾಗಿ ಕುವೆಂಪು ಅವರಲ್ಲಿ ನೋಡಬಹುದು ಎಂದು ಹೇಳಿದರು.


ಶ್ರೀರಾಮಾಯಣದರ್ಶನಂ, ಕಾನೂರು ಹೆಗ್ಗಡತಿ ಸೇರಿದಂತೆ ಅನೇಕ ಕೃತಿಗಳ ಮೂಲಕ ಕನ್ನಡವನ್ನು ಜನಮಾನಸದಲ್ಲಿ ಬಿತ್ತಿದರು. ಹೀಗಾಗಿಯೇ ವರಕವಿ ದ.ರಾ.ಬೇಂದ್ರೆ ಅವರನ್ನು ಯುಗದ ಕವಿ, ಜಗದಕವಿಗೆ ಮಣಿಯದವರು ಯಾರು ಎಂದಿದ್ದಾರೆ ಎಂದು ಸ್ಮರಿಸಿದರು.


ಸಾಹಿತ್ಯದ ಮುಖ್ಯ ಧೋರಣೆಗಳನ್ನು ಕನ್ನಡಿಗರಲ್ಲಿ ಬೆಳೆಸಿದರು. ಶ್ರೀರಂಗಪಟ್ಟಣದಲ್ಲಿ ಮಾಡಿದ ವಿಚಾರ ಕ್ರಾಂತಿಗೆ ಆಹ್ವಾನ ಭಾಷಣವು ಕನ್ನಡಿಗರಲ್ಲಿ ವೈಚಾರಿಕತೆಯ ಕಿಚ್ಚನ್ನು ಹೊತ್ತಿಸಿತು ಎಂದರು.


ಸಂಸ್ಕೃತಿ ಕರ್ನಾಟಕ ಲೇಖನದಲ್ಲಿ ನನ್ನ ಕರ್ನಾಟಕದ ಕಲ್ಪನೆ ಚದರ ಕಿ.ಮೀ.ಯಿಂದ ಅಳೆಯುವಂಥದ್ದಲ್ಲ, ಶತಮಾನದಿಂದಲೂ ಅಳೆಯಬೇಕೆಂದಿದ್ದರು. 10ನೇ ಶತಮಾನದ ಹಿಂದೆ ಕರ್ನಾಟಕವು ಕಾವೇರಿಯಿಂದ ನರ್ಮದಾ ನದಿವರೆಗೆ ಕನ್ನಡ ನಾಡು ಹಬ್ಬಿತ್ತು. ಸ್ವಾತಂತ್ರ್ಯ ಚಳವಳಿ ವೇಳೆಯೇ ಕರ್ನಾಟಕ ರಾಜ್ಯ ಸಾಕಾರಕ್ಕೆ ಮೈಸೂರಿನಲ್ಲಿ ನಿಂತು ಗಟ್ಟಿಯಾಗಿ ಪ್ರತಿಪಾದಿಸಿದರು ಎಂದು ತಿಳಿಸಿದರು.


ರವೀಂದ್ರನಾಥ ಟ್ಯಾಗೋರ್ ಅವರಂತೆಯೇ ಕುವೆಂಪುಗೆ ಕನ್ನಡ ನಾಡನ್ನು ಹೇಗೆ ಕಟ್ಟಬೇಕೆಂಬ ಯೋಜನೆಗಳಿದ್ದವು. ಟಾಲ್‌ಸ್ಟಾಯ್, ವಿಕ್ಟರ್ ಹ್ಯೂಗೊನಂತೆಯೇ ದಾರ್ಶನಿಕ ಕವಿ. ಮಲೆನಾಡಿನ ಕುಪ್ಪಳಿಯಿಂದ ಬಂದು ನಾಡಿನ ಮೇರು ಕವಿಯಾದ ಅವರು, ರಾಮಾಯಣದ ನಿರ್ಲಕ್ಷಿತ ಪಾತ್ರಗಳಿಗೆ ಜೀವ ತುಂಬಿದರು. ಪ್ರತಿನಾಯಕರನ್ನು ಭಿನ್ನವಾಗಿ ನೋಡಿದರು. ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟರು ಎಂದರು.


ಎಲ್ಲ ಸಾಹಿತ್ಯ ಕಲಾ ಪ್ರಾಕಾರಗಳಲ್ಲಿಯೂ ಕೆಲಸ ಮಾಡಿದ ಅವರು, ರಾಮನ ಕಿರೀಟದ ಮುಕುಟಮಣಿಗೆ ಎಷ್ಟು ಬೆಲೆಯಿದೆಯೂ ಅಷ್ಟೇ ಹುಲ್ಲಿನ ಮೇಲಿನ ನೀರಿನ ಹನಿಗೂ ಮಹತ್ವವಿದೆ ಎನ್ನುವ ಮೂಲಕ ಜಗತ್ತಿನ ಎಲ್ಲಕ್ಕೂ ಬೆಲೆಯಿದೆಯೆಂದರು ಎಂದು ವಿವರಿಸಿದರು.

ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ರಾಷ್ಟ್ರಕವಿ ಕುವೆಂಪು ಕನ್ನಡ ಪ್ರೇಮ ಹಾಗೂ ಪ್ರಜ್ಞೆಯನ್ನು ಜನರಲ್ಲಿ ಮೂಡಿಸಿದರು. ಎಲ್ಲ ವಿದ್ಯಾರ್ಥಿಗಳು ಬಸವಣ್ಣ, ಅಂಬೇಡ್ಕರ್, ಕುವೆಂಪು ಪ್ರತಿಪಾದಿಸಿದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಎಂಡಿಇಎಸ್ ಕಾರ್ಯದರ್ಶಿ ವಿಜಯಕುಮಾರ್, ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ಎನ್.ಆರ್.ಚಂದ್ರೇಗೌಡ, ಪ್ರಾಂಶುಪಾಲ ಎಚ್.ಎನ್.ಚಂದ್ರಶೇಖರ, ಉಪಪ್ರಾಂಶುಪಾಲರಾದ ಆರ್.ಶಿಲ್ಪಾ, ಕನ್ನಡದ ವಿಭಾಗ ಮುಖ್ಯಸ್ಥ ಎ.ಎಸ್.ಮಹೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net