

ಮೈಸೂರು: ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವಂತೆ ಒತ್ತಾಯಿಸಿದವರೇ ಈಗ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ದುರಾದೃಷ್ಟಕರ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದರು
ಪ್ರಾಧಿಕಾರ ರಚನೆ ಮಾಡುವಂತೆ ಈ ಹಿಂದೆ ಬಿಜೆಪಿ, ಜೆಡಿಎಸ್‌ನವರು ಒತ್ತಾಯಿಸಿದ್ದರು. ಈಗ ಅವರೇ ವಿರೋಧಿಸುವುದು ಏಕೆ ಎನ್ನುವುದನ್ನು ತಿಳಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಜಾರಿ ಮಾಡುವಂತೆ ಸರ್ಕಾರ 2024 ಜುಲೈ ಒಂದರಂರೇ ಸೂಚಿಸಿತ್ತು. ಅಂದಿನಿಂದ ಈ ಕುರಿತು ಈಗ ಟೀಕೆ ಮಾಡುತ್ತಿರುವ ಎಚ್.ವಿಶ್ವನಾಥ್ ಅಥವಾ ಜಿ.ಟಿ.ದೇವೇಗೌಡ ಅವರು ಯಾವುದೇ ಚಕಾರ ಎತ್ತಿರಲಿಲ್ಲ ಎಂದರು.
ಈಗ ಪ್ರಮೋದಾದೇವಿ ಒಡೆಯರ್ ಅವರು ಆಕ್ಷೇಪ ಇದೆ ಎಂದು ಹೇಳುತ್ತಿದ್ದಂತೆಯೇ ಬಿಜೆಪಿ, ಜೆಡಿಎಸ್ ನಾಯಕರು ಧ್ವನಿಗೂಡಿಸಿದ್ದಾರೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ರಾಜಮನೆತನಕ್ಕೆ ತೊಂದರೆ ನೀಡುತ್ತಾರೆ ಎಂದು ಎಚ್.ವಿಶ್ವನಾಥ್ ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದರು.
ಚಾಮುಂಡಿಬೆಟ್ಟದ ಅಭಿವೃದ್ಧಿಗೆ ಪ್ರಾಧಿಕಾರ ರಚಿಸುವಂತೆ ಜಿ.ಟಿ.ದೇವೇಗೌಡ ಅವರು, ಸಂಸದರಾಗಿದ್ದ ಪ್ರತಾಪಸಿಂಹ ಅವರಿಗೆ ಪತ್ರ ಬರೆದಿದ್ದರು. ಆದರೆ ಈಗ ಪ್ರಮೋದಾದೇವಿ ಒಡೆಯರ್, ಆಕ್ಷೇಪ ವ್ಯಕ್ತಪಡಿಸುತ್ತಿರುವಂತೆಯೇ ನಿಲುವು ಬದಲಿಸಿದ್ದಾರೆ ಎಂದು ಟೀಕಿಸಿದರು.
ಚಾಮುಂಡಿ ಬೆಟ್ಟ, ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ, ಪ್ರವಾಸೋದ್ಯಮ, ಮುಜರಾಯಿ ಇಲಾಖೆ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಪ್ರಸಾದ್ ಯೋಜನೆ ಅಡಿಯಲ್ಲಿ ಚಾಮುಂಡಿ ಬೆಟ್ಟ ಜೀರ್ಣೋದ್ದಾರಕ್ಕೆ ಕೇಂದ್ರ ಸರ್ಕಾರ 48ಕೋಟಿ ರೂ.ಅನುದಾನ ನೀಡಿದ್ದು, ಮಹಿಷಾಸುರ ಪ್ಲಾಜಾ ಅಭಿವೃದ್ಧಿಗೆ 5.37ಕೋಟಿ ರೂ. ಬಿಡುಗಡೆಯಾಗಿದೆ. ಜತೆಗೆ ದೇವಿಕೆರೆ, ನಂದಿ ಬೆಟ್ಟ, ಚಾಮುಂಡಿ ಬೆಟ್ಟದ ಮೆಟ್ಟಿಲು, ವ್ಯೆವ್ ಪಾಯಿಂಟ್ ಅಭಿವೃದ್ಧಿಗೆ ಹಣ ಮೀಸಲಿಡಲಾಗಿದೆ. ಆದರೆ ಈಗ ಆಕ್ಷೇಪ ಯಾಕೆ ಎಂದು ತಿಳಿಯುತ್ತಿಲ್ಲ ಎಂದರು.
ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಪ್ರಾಧಿಕಾರದಲ್ಲಿ ಸಿಎಂ ಅಧ್ಯಕ್ಷರು, ಪ್ರವಾಸೋದ್ಯಮ ಸಚಿವರು, ಜಿಲ್ಲಾ ಉಸ್ತುವಾರಿ, ಮುಜರಾಯಿ ಇಲಾಖೆ ಸಚಿವರು ಉಪಾಧ್ಯಕ್ಷರು. ಮಹಾರಾಜರ ವಂಶಸ್ಥರು ಶಾಶ್ವತ ಸದಸ್ಯರಾಗಿದ್ದಾರೆ. ಪ್ರಾಧಿಕಾರದಲ್ಲಿ ಅವರೇ ಒಂದು ಭಾಗವಾಗಿದ್ದಾರೆ. ಯಾವುದೆ ಜನಪ್ರತಿನಿಧಿಗಳನ್ನು ನಾಮ ನಿರ್ದೇಶನ ಮಾಡುವುದಿಲ್ಲ. ಆದರೂ ವಿಶ್ವನಾಥ್, ಜಿ.ಟಿ.ದೇವೇಗೌಡ, ಪ್ರತಾಪಸಿಂಹ ಈ ಕುರಿತು ಮಾತನಾಡುತ್ತಿಲ್ಲ ಎಂದು ಟೀಕಿಸಿದರು.
ಚಾಮುಂಡೇಶ್ವರಿ ದೇವಸ್ಥಾನ ತಮಗೆ ಸೇರುತ್ತೆ ಎನ್ನುವುದಕ್ಕೆ ರಾಜವಂಶಸ್ಥರ ಬಳಿ ದಾಖಲೆ ಇದಿಯಾ. ಪ್ರಾಧಿಕಾರ ರಚನೆ ಮಾಡುವುದರಿಂದ ತೊಂದರೆಯಾಗುತ್ತದೆ ಎಂದಾಗದರೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆಯೇ ಎಂದು ಪ್ರಶ್ನಿಸಿದರು.
ಬಿಜೆಪಿ, ಜೆಡಿಎಸ್ ನಾಯಕರು ಸಿದ್ದರಾಮಯ್ಯ ವಿರುದ್ಧ ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ನಿನ್ನೆ, ಮೊನ್ನೆ ಶಾಸಕರಾಗಿ ಗೆದ್ದಂತಹ ಟಿ.ಎಸ್.ಶ್ರೀವತ್ಸ ಅವರು ಸಿದ್ದರಾಮಯ್ಯ ಜೈಲಿನಲ್ಲಿ ಕುಳಿತು ಅಧಿಕಾರ ಮಾಡುತ್ತಾರೆ ಎಂದಿದ್ದಾರೆ. ನಿಮಗೆ ತಾಕತ್ತು ಇದ್ದರೆ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸಿ ನೋಡೋಣ ಎಂದು ಸವಾಲು ಹಾಕಿದರು.
ಜೈಲಿನಲ್ಲಿ ಕುಳಿತು ಅಧಿಕಾರ ಮಾಡುತ್ತಾರೆ ಎನ್ನುವ ಹೇಳಿಕೆಯನ್ನು ಬಿಜೆಪಿಯವರು ಟ್ರೋಲ್ ಮಾಡುತ್ತಿದ್ದು, ಇದು ಅಸಹ್ಯಕರ. ಈ ರೀತಿಯಾದ ಟ್ರೋಲ್ ಮಾಡೋರ ವಿರುದ್ಧ ಸೈಬರ್ ಕ್ರೈಮ್ ಗೆ ದೂರು ಕೊಡುತ್ತೇವೆ ಎಂದು ಎಚ್ಚರಿಸಿದರು.