ಕಳ್ಳರ ಹಿಡಿಯಲು ಬಂದವರಿಗೆ ಸಿಕ್ಕಿದ್ದು ಇಲಿ!

Police Rate
Published on

ಮೂಲ್ಕಿ (ದ.ಕ.): ಕಾರ್ನಾಡು ಹರಿಹರ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ್ದಾರೆಂದು ಭಾವಿಸಿದ ಪೊಲೀಸರು ಇಲಿ ಕಂಡು ಸುಸ್ತಾದ ಸ್ವಾರಸ್ಯಕರ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಮಧ್ಯರಾತ್ರಿ ಬೀಟ್‌ಗೆ ಬಂದ ಪೊಲೀಸರು, ದೇವಸ್ಥಾನ ಒಳಗೆ ಸಣ್ಣ ಪ್ರಮಾಣದಲ್ಲಿ ಸದ್ದು ಕೇಳಿದ ತಕ್ಷಣ ಅಲರ್ಟ್ ಆದರು. ಹೆಚ್ಚುವರಿ ಪೊಲೀಸರು, ಅರ್ಚಕರನ್ನು ಕರೆಸಿ ದೇವಳದ ಬೀಗ ತೆರೆದು ಹುಡುಕಾಡಿದಾಗ ಸದ್ದು ನಿಂತಿತು. ಯಾರೂ ಇಲ್ಲದಿದ್ದಾಗ ಮತ್ತೆ ಹುಡುಕಾಡಿದರು. ಈ ಸಂದರ್ಭ ದೇವಸ್ಥಾನದ ವಿದ್ಯುತ್‌ಚಾಲಿತ ಪೂಜೆ ಗಂಟೆ ಯಂತ್ರದ ಒಳಗೆ ಇಲಿ, ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿದ್ದುದು ಕಂಡುಬಂತು. ಇಲಿ ಒದ್ದಾಟದಲ್ಲಿ ಕೇಳಿಬರುತ್ತಿದ್ದ ಸದ್ದನ್ನು ಪೊಲೀಸರು ಕಳ್ಳರು ನುಗ್ಗಿದ್ದಾರೆಂದು ಭ್ರ ಮಿಸಿದ್ದರು! ಬಳಿಕ ಇಲಿಯನ್ನು ಯಂತ್ರದಿಂದ ಹೊರಬಿಡಲಾಯಿತು. ಈ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ ಮೂಲ್ಕಿ ಠಾಣೆ ಉಪನಿರೀಕ್ಷಕ ಮಾರುತಿ, ದೇವಸ್ಥಾನದ ಹತ್ತಿರ ಬಂದಾಗ ಸಣ್ಣ ಮಟ್ಟಿನ ಸದ್ದು ಕೇಳಿಸಿತ್ತು. ಬಳಿಕ ಗಂಟೆ ಬಡಿದಂತಾಯಿತು. ತಕ್ಷಣ ಆಯುಧ ಸಹಿತ ಪೊಲೀಸರನ್ನು ಕರೆಸಿ ದೇವಳವನ್ನು ಸುತ್ತುವರಿದು ಬಾಗಿಲು ತೆರೆಸಿದಾಗ ವಿದ್ಯುತ್‌ಚಾಲಿತ ಗಂಟೆ ಯಂತ್ರದಲ್ಲಿ ಇಲಿ ಸೇರಿ ಕೊಂಡಿರುವುದು ಪತ್ತೆಯಾಯಿತು ಎಂದು ಹೇಳಿದ್ದಾರೆ.

ಭಾರಿ ಮಳೆ ಹಿನ್ನೆಲೆಯಲ್ಲಿಯೂ, ಎಚ್ಚರಿಕೆಯಿಂದ ಕಾರ್ಯನಿರ್ವಹಣೆ ಮಾಡಿದ ಪೊಲೀಸರ ಕ್ರಮವನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net