ಸೌಲಭ್ಯ ಪಡೆಯಲು ಬಂದವರಿಗೆ ಬಿಸಿಲಲ್ಲಿ ಕಾಯುವ ಶಿಕ್ಷೆ

ಬಾಗೇಪಲ್ಲಿಯ ತಾಲೂಕು ಪಂಚಾಯತಿ ಆವರಣದಲ್ಲಿ ಸೌಲಭ್ಯ ಪಡೆಯಲು ಸುಡುಬಿಸಿಲಿನಲ್ಲೇ ಕಾಯುತ್ತಿರುವ ಅಂಗವಿಕಲರು ಹಾಗೂ ಹಿರಿಯರು.
BPL 12 ANGAVIKALA NEWS PHOTO
ಬಾಗೇಪಲ್ಲಿಯ ತಾಲೂಕು ಪಂಚಾಯತಿ ಆವರಣದಲ್ಲಿ ಸೌಲಭ್ಯ ಪಡೆಯಲು ಸುಡುಬಿಸಿಲಿನಲ್ಲೇ ಕಾಯುತ್ತಿರುವ ಅಂಗವಿಕಲರು ಹಾಗೂ ಹಿರಿಯರು.
Published on

ಹಿರಿಯರು, ಅಂಗವಿಕಲರಿಗಿಲ್ಲ ನೀರು, ಉಪಾಹಾರ- ಇಲಾಖೆ ಅಮಾನವೀಯತೆ ವಿರುದ್ಧ ಅಧಿಕಾರಿಗಳ ವಿರುದ್ಧ ಆಕ್ರೋಶ


ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಸಾಧನಾ ಸಲಕರಣೆಗಳ ಗುರುತಿಸುವಿಕೆ ಶಿಬಿರಕ್ಕೆ ಆಗಮಿಸಿದ್ದ ವೃದ್ಧರು, ಅಂಗವಿಕಲರನ್ನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಸುಡುಬಿಸಿಲಿನಲ್ಲಿ ಕಾಯುವಂತೆ ಮಾಡಿ ಅಮಾನವೀಯವಾಗಿ ನಡೆದುಕೊಂಡಿರುವ ಜಿಲ್ಲಾ ಮಹಿಳಾ ಮತ್ತು ಮಕ್ಕಳ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗಳ ವಿರುದ್ಧ ಅಂಗವಿಕಲರು, ಹಿರಿಯ ನಾಗರಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗೇಪಲ್ಲಿ ತಾಲೂಕು ಪಂಚಾಯಿತಿ ಆವರಣದಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಅಡಿಫ್ ಯೋಜನೆಯಡಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಸಾಧನಾ ಸಲಕರಣೆಗಳನ್ನು ಗುರುತಿಸುವಿಕೆ ಶಿಬಿರಕ್ಕೆ ತಾಲೂಕಿನ ಗೂಳೂರು, ಮಿಟ್ಟೇಮರಿ, ಕಸಬಾ, ಪಾತಪಾಳ್ಯ ಹಾಗೂ ಚೇಳೂರು ವ್ಯಾಪ್ತಿಯಿಂದ ನೂರಾರು ಮಂದಿ ಆಗಮಿಸಿದ್ದರು.
ಅವರಿಗೆ ಕುಡಿಯುವ ನೀರು, ಉಪಾಹಾರ ಹಾಗೂ ಆಸನ ವ್ಯವಸ್ಥೆ ಕಲ್ಪಿಸದೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೂ ಕಾಯುವಂತೆ ಮಾಡಿ ಅಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಕರ್ನಾಟಕ ವಿಕಲಚೇತನ ಸಂಸ್ಥೆಯ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

ಶಿಬಿರದ ಅವ್ಯವಸ್ಥೆಗಳ ಬಗ್ಗೆ ಹಿರಿಯ ನಾಗರಿಕರು, ಅಂಗವಿಕಲರು ಮಾಧ್ಯಮದವರಿಗೆ ತಿಳಿಸಿದ ನಂತರ ಕಾಟಾಚಾರಕ್ಕೆ ಎನ್ನುವಂತೆ ಮಧ್ಯಾಹ್ನದ ನಂತರ ಲಘು ಉಪಾಹಾರ ವ್ಯವಸ್ಥೆ ಮಾಡಿ ಆಯೋಜಕರು ಕೈತೊಳೆದುಕೊಂಡರು.


ಅಂಗವಿಕಲರು, ಹಿರಿಯ ನಾಗರಿಕರಿಗೆ ದ್ವಿಚಕ್ರ ವಾಹನ ವಿತರಣೆ ಮಾಡಲಿದ್ದು, ಬಾಗೇಪಲ್ಲಿಯ ತಾಪಂ ಆವರಣದ ಬಳಿ ಬೆಳಗ್ಗೆ ಬರುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಗೆ ಬಂದರೆ ಕುಡಿಯಲು ನೀರಿಲ್ಲ, ಕುಳಿತುಕೊಳ್ಳಲು ಕುರ್ಚಿ ಇಲ್ಲ, ಮಧ್ಯಾಹ್ನದವರೆಗೂ ಬಿಸಿಲಿನಲ್ಲೇ ಕಾಯುವಂತಾಯಿತು. ಅಂಗವಿಕಲರು, ಹಿರಿಯ ನಾಗರಿಕರ ಬಗ್ಗೆ ಕನಿಷ್ಠ ಗೌರವ, ಕರುಣೆಯಿಲ್ಲದ ಅಧಿಕಾರಿಗಳು ಅತ್ಯಂತ ಅಮಾನವೀಯವಾಗಿ ನಡೆದುಕೊಂಡು ಅರ್ಜಿಗಳಿಗೆ ಸಹಿ ಹಾಕಿಸಿಕೊಂಡು ಕಳಿಸಿದ್ದು ಬೇಸರದ ಸಂಗತಿ.
ಆದಿನಾರಾಯಣ, ಉಪಾಧ್ಯಕ್ಷ, ಕರ್ನಾಟಕ ವಿಕಲಚೇತನ ಸಂಸ್ಥೆ, ಬಾಗೇಪಲ್ಲಿ


ಶಿಬಿರಕ್ಕೆ ಆಗಮಿಸಿದ್ದವರಿಗೆ ಬೆಳಗ್ಗೆ ಕುಡಿಯುವ ನೀರು, ಬಿಸ್ಕೆಟ್ ವ್ಯವಸ್ಥೆ ಮಾಡಲಾಗಿತ್ತು. ಇಲಾಖೆ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಹಿರಿಯ ನಾಗರಿಕರು, ಅಂಗವಿಕಲರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಜನದಟ್ಟಣೆ ಹೆಚ್ಚಾಗಿತ್ತು. ಅರ್ಜಿದಾರರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ನಾವೇನೂ ಮಾಡಲು ಸಾಧ್ಯವಿಲ್ಲ.
ಲತಾ, ಗುಮಾಸ್ತೆ ಹಾಗೂ ಆಯೋಜಕಿ ಜಿಲ್ಲಾ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಇಲಾಖೆ. ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net