

ಶ್ರೀನಿವಾಸಪುರ: ಜಿಲ್ಲೆಯನ್ನು ಕ್ಲೀನ್ ಕೋಲಾರ ಮಾಡುವುದು ನನ್ನ ಕನಸಾಗಿದೆ. ಇದನ್ನು ನನಸು ಮಾಡಲು ಅಧಿಕಾರಿಗಳ ಸಹಕಾರ ಬೇಕಿದೆ. ನನ್ನ ಜಿಲ್ಲೆಯನ್ನು ಸರಿಮಾಡಿ, ನಂತರ ರಾಜ್ಯಾದ್ಯಂತ ಕ್ರಮಕೈಗೊಳ್ಳಲು ಮುಂದಾಗುತ್ತೇನೆ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ತಿಳಿಸಿದರು.
ಪಟ್ಟಣ ಹೊರವಲಯದ ಕನಕ ಸಮುದಾಯ ಭವನದಲ್ಲಿ ಶುಕ್ರವಾರ ಲೋಕಾಯುಕ್ತದಿಂದ ಹಮ್ಮಿಕೊಂಡಿದ್ದ ದೂರು ವಿಚಾರಣೆ ಹಾಗೂ ಬಾಕಿ ಪ್ರಕರಣ ವಿಲೇವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಚ್ಛತೆ, ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು. ಹಣ ಮಾಡುವ ಹಪಾಹಪಿ ಬಿಡಿ ಎಂದು ತಾಕೀತು ಮಾಡಿದರು.
ಮೊದಲು ಗ್ರಾಮಗಳು ಸರಿಹೋಗಬೇಕು. ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅನುದಾನ ಬರುತ್ತಿದೆ. ಆದರೆ ಅಭಿವೃದ್ಧಿಗಿಂತ ದುರುಪಯೋಗವೇ ಹೆಚ್ಚಾಗಿದೆ. ಮೊದಲು ಗ್ರಾಮಗಳು ಸ್ವಚ್ಛಗೊಳ್ಳಬೇಕು. ಎಲ್ಲ ಕಡೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧವೇ ದೂರು ಕೇಳಿಬರುತ್ತಿವೆ ಎಂದರು.
ಇಲ್ಲಿಂದ ಹೊರಟುಬಿಡಿ!
ಎಂಜಲು ಕಾಸಿಗೆ ಕೈಯೊಡ್ಡುವ ಅಧಿಕಾರಿಗಳು ತಾಲೂಕು ಮತ್ತು ಜಿಲ್ಲೆಯಿಂದ ವರ್ಗಾವಣೆ ಮಾಡಿಸಿಕೊಂಡು ಹೊರಟುಬಿಡಿ. ಜಿಲ್ಲೆಗೆ ಕೆಟ್ಟ ಹೆಸರು ತರಬೇಡಿ. ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದಲ್ಲಿ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸುಳ್ಳು ಕೇಸು ದಾಖಲಿಸಿದರೆ ಅವರಿಗೂ 5 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಕಳೆದ 2 ತಿಂಗಳ ಹಿಂದೆ ತಾಲೂಕಿಗೆ ಭೇಟಿ ನೀಡಿದಾಗ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 101 ದೂರು ವಿಲೇವಾರಿ ಆಗಿದ್ದು, ಉಳಿದಂತೆ ಬಾಕಿ ಇರುವ ದೂರುಗಳನ್ನು ಶೀಘ್ರವಾಗಿ ಪರಿಹರಿಸುವಂತೆ ತಹಸೀಲ್ದಾರ್ ಜಿ.ಎನ್.ಸುಧೀಂದ್ರ ಅವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ದಲ್ಲಾಳಿಗಳನ್ನು ಬದಿಗಿಟ್ಟು, ಸಾರ್ವಜನಿಕರು ನೇರವಾಗಿ ಅಧಿಕಾರಿಗಳ ಬಳಿ ಸಮಸ್ಯೆ ಹೆೇಳಿ ಪರಿಹಾರ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಭ್ರಷ್ಟಾಚಾರಕ್ಕೆ ಯಾವುದೇ ಕಾರಣಕ್ಕೂ ಆಸ್ಪದ ಕೊಡಬಾರದು ಎಂದರು.
ಪಶುಇಲಾಖೆ ಜಂಟಿ ನಿರ್ದೇಶಕ ಎಸ್.ಎಂ.ಶ್ರೀನಿವಾಸ್, ಮಧುಗಿರಿ ತಹಸೀಲ್ದಾರ್ ಶರೀನ್ತಾಜ್, ಲೋಕಾಯುಕ್ತ ನ್ಯಾಯಮೂರ್ತಿ ಎನ್.ವಿ.ಅರವಿಂದ್, ಎಸ್ಪಿ ಆಟೋನಿಜಾನ್, ಡಿವೈಎಸ್ಪಿ ಎಸ್.ಸುಧೀರ್, ತಹಸೀಲ್ದಾರ್ ಚಿಂತಾಮಣಿ ಇಒ ಎಸ್.ಆನಂದ್, ಬಂಗಾರಪೇಟೆ ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ಎಸ್.ಶಿವಕುಮಾರಿ, ಲೋಕಾಯುಕ್ತ ಪಿಐಗಳಾದ ಆಂಜನಪ್ಪ, ರೇಣುಕ, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಹಾಗು ವಿವಿಧ ಇಲಾಖೆಗಳ ಇಲಾಖಾಧಿಕಾರಿಗಳು ಇದ್ದರು.
ಭ್ರಷ್ಟಾಚಾರದಲ್ಲಿ ರಾಜ್ಯ 5ನೇ ಸ್ಥಾನ
ಇಡೀ ಪ್ರಪಂಚದ ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ಭಾರತ 96ನೇ ಸ್ಥಾನ, ದೇಶದಲ್ಲಿ ಕರ್ನಾಟಕ 5ನೇ ಸ್ಥಾನ ಪಡೆದಿದೆ. ಲೋಕಾಯುಕ್ತ ಸಂಸ್ಥೆ ಸರ್ಕಾರದ ಅಧೀನದಲ್ಲಿಲ್ಲ. ಲೋಕಾಯುಕ್ತ ಸಂಸ್ಥೆ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಹಳ್ಳಿಯಿಂದ ದಿಲ್ಲಿಯ ತನಕ ಉತ್ತಮ ಆಡಳಿತ ರೂಪಿಸುವುದು ನಮ್ಮ ಸಂಸ್ಥೆಯ ಮೂಲ ಉದ್ದೇಶ ಎಂದು ವೀರಪ್ಪ ಹೇಳಿದರು.
ಅಸಡ್ಡೆ ತೋರದಿರಿ
ಸಾರ್ವಜನಿಕರಿಗೆ ಸ್ಪಂದಿಸಿ, ಸಮಸ್ಯೆಗಳನ್ನು ಆಲಿಸಿ, ಪರಿಹಾರ ನೀಡುವ ಪ್ರಕ್ರಿಯೆ ಬೆಳೆಸಿಕೊಳ್ಳಬೇಕು. ತಾವು ಕಚೇರಿಗಳಲ್ಲಿ ನಿಗದಿತ ಸಮಯಕ್ಕೆ ಹಾಜರಿದ್ದು, ಅವರ ಸಮಸ್ಯೆಗಳನ್ನು ಆಲಿಸುವಂತಾಗಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹಾರ ಮಾಡುವುದರಲ್ಲಿ ಅಸಡ್ಡೆ ತೋರಿಸಬಾರದು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಎಚ್ಚರಿಸಿದರು.