

ಮದ್ದೂರು: ಮಕ್ಕಳಿಗೆ ವಿವೇಚನೆ ಬರುವವರಿಗೆ ಮೊಬೈಲ್ ನೀಡಬೇಡಿ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಡಾ.ಎಚ್.ಕೆ.ಮರಿಯಪ್ಪ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ಪೂರ್ವ ವಿದ್ಯಾರ್ಥಿಗಳಿಗೆ ಸೋಮವಾರ ಆಯೋಜಿಸಿದ್ದ ಅಕ್ಷರ ಅಭ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಪುಟ್ಟ ಮಕ್ಕಳಿಗೆ ತಾಯಂದಿರು ಇತ್ತೀಚಿನ ದಿನಗಳಲ್ಲಿ ಮೊಬೈಲ್ ನೀಡಿ ಮುಂದೆ ಅವರು ದಾರಿ ತಪ್ಪಲು ಕಾರಣವಾಗುತ್ತಿದ್ದಾರೆ. ಅವರಿಗೆ ಸ್ವಂತ ವಿವೇಚನೆ ಬರುವವರಿಗೆ ಮೊಬೈಲ್ ಸಿಗದಂತೆ ನೋಡಿಕೊಳ್ಳುವ ಜತೆಗೆ ಅವರಿಗೆ ಸಂಸ್ಕಾರ, ಸಂಸ್ಕೃತಿ, ಆಚಾರ ಹಾಗೂ ವಿಚಾರಗಳನ್ನು ತಿಳಿಸಿಕೊಟ್ಟು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.
ಶಾರದಾ ಪೂಜೆಯೊಂದಿಗೆ ಅಕ್ಷರಾಭ್ಯಾಸವನ್ನು ನಡೆಸಿಕೊಟ್ಟ ವಿದ್ವಾನ್ ಡಾ.ರಾಘವೇಂದ್ರರಾವ್ ಅವರು ಪೂಜಾ ಕೈಂಕರ್ಯದ ನೇತೃತ್ವ ವಹಿಸಿದ್ದರು. ಸರಸ್ವತಿ ಪೂಜೆಯೊಂದಿಗೆ ಎಲ್ಲ ಮಕ್ಕಳಿಗೂ ತಾಯಂದಿರು ವೇದ ಘೋಷದ ನಡುವೆ ಅಕ್ಷರಾಭ್ಯಾಸ ಮಾಡಿಸಿದರು.
ಮಂಡ್ಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಪ್ರೊ.ಬಿ.ಜಯಪ್ರಕಾಶಗೌಡ ಮತ್ತು ನಿವೃತ್ತ ಅಧ್ಯಾಪಕ ಎಂ.ಎಸ್.ಜ್ಞಾನೇಶಮೂರ್ತಿ ಅವರನ್ನು ಸ್ವಾಮೀಜಿ ಅಭಿನಂದಿಸಿದರು.
ಚಂದುಪುರ ಶಿಕ್ಷಣ ಟ್ರಸ್ಟ್‌ನ ಶಿವಲಿಂಗೇಗೌಡ, ಎಂ.ಎಚ್.ಚನ್ನೇಗೌಡ ವಿದ್ಯಾಲಯದ ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ಅವ್ವೆರಹಳ್ಳಿಯ ಡಾ.ಶಾಂತ ಮರಿಯಪ್ಪ ಕಾನ್ವೆಂಟಿನ ಕಾರ್ಯದರ್ಶಿ ಎಚ್.ಪಿ.ಹರೀಶ್, ಆಡಳಿತಾಧಿಕಾರಿ ಯು.ಎಸ್‌ರವಿ, ಮುಖ್ಯ ಶಿಕ್ಷಕರಾದ ಕೆ.ಎನ್ ವರದರಾಜು, ಎಂ.ಟಿ.ಚಂದ್ರಶೇಖರ್, ಎನ್.ಕೃಷ್ಣ, ಎಚ್.ಪಿ.ಮಹೇಶ ಇದ್ದರು.