

ಮಡಿಕೇರಿ: ಹಿಂದುತ್ವ ಮತ್ತು ರಾಷ್ಟ್ರೀಯವಾದವನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದವರಿಗೆ ಬಿಜೆಪಿಯಲ್ಲಿ ಟಿಕೆಟ್ ತಪ್ಪುತ್ತಿದೆ ಎಂಬ ಭಾವನೆ ಬಲವಾಗುತ್ತಿದೆ ಎಂದು ಮಾಜಿ ಶಾಸಕ ಹಾಗೂ ಪರಿಷತ್ ಚುನಾವಣೆಯ ಬಿಜೆಪಿ ಬಂಡಾಯ ಅಭ್ಯರ್ಥಿ ಉಡುಪಿ ರಘುಪತಿಭಟ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನಾನು ಟಿಕೇಟ್ ಆಕಾಂಕ್ಷಿಯಾಗಿದ್ದೆ. ಆದರೆ ಅದು ತಪ್ಪಿದೆ. ಬಿಜೆಪಿಯಲ್ಲಿ ಪಕ್ಷದ ಸುತ್ತ ಸುತ್ತುವವರಿಗೆ ಆದ್ಯತೆ ನೀಡುತ್ತಿರುವುದರಿಂದ ಬೇಸರವಾಗಿದೆ. ನನಗೆ ಟಿಕೇಟ್ ನೀಡುತ್ತೇವೆ ಎಂದು ಹೇಳಿದ್ದರು. ಆದರೆ, ಸಿಗಲಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಸಿಕ್ಕಿದ್ದರೂ ಕೂಡ ನಾನು ಚುನಾವಣೆಗೆ ಸ್ಪರ್ಧಿಸುತ್ತಿರಲಿಲ್ಲ. ಬಿಜೆಪಿಯಲ್ಲಿ ಇಂದು ಹಿಂದುತ್ವ, ರಾಷ್ಟ್ರೀಯವಾದವನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದವರಿಗೆ ಟಿಕೆಟ್ ತಪ್ಪುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.
ಕೆಲಸ ಮಾಡುವ ಹುಮ್ಮಸ್ಸಿದೆ. ಸಮಯವು ಇದೆ. ಸಾಧನೆಗಳನ್ನು ಮಾಡಿರುವೆ. ಹಾಗಾಗಿ ಈ ಬಾರಿ ನನಗೊಂದು ಅವಕಾಶಕೊಡಿ ಮತ್ತಷ್ಟು ಕೆಲಸ ಮಾಡುವೆ ಎಂದ ಅವರು, ೨೦೦೧ರಿಂದ ನನ್ನ ರಾಜಕೀಯ ಜೀವನ ಆರಂಭವಾಗಿದೆ. ೩ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ಶಾಸಕನಾಗಿದ್ದಾಗ ಪೂರ್ಣಾವಾಧಿಯಲ್ಲಿ ಕೆಲಸ ಮಾಡಿದ್ದೇನೆ. ವಿವಿಧ ಹುದ್ದೆಗಳಿಗೆ ನ್ಯಾಯ ನೀಡಿದ್ದೇನೆ. ನನ್ನ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಿದ್ದೇನೆ. ಸಾಕಷ್ಟು ಸಮಸ್ಯೆಗಳಿಗೆ ಉತ್ತರ ಕೊಟ್ಟಿದ್ದೇನೆ. ಹಲವು ಟ್ರಸ್ಟ್‌ಗಳ ಮೂಲಕ ಕೆಲಸ ಮಾಡಿದ್ದೇನೆ. ಈ ಎಲ್ಲಾ ಕೆಲಸಗಳು ಪದವೀಧರ ಮತದಾರರಿಗೆ ಗೊತ್ತಿದೆ. ಹಾಗಾಗಿ ನಾನು ಈ ಬಾರಿ ಗೆಲ್ಲುತ್ತೇನೆ ಎಂದರು.
ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ನನ್ನ ಮೊದಲ ಆದ್ಯತೆಯಿದೆ. ಪದವೀಧರರಿಗೆ ಕೌಶಲ್ಯ ತರಬೇತಿ ನೀಡುವುದು ಉದ್ಯಮ ವಲಯಗಳನ್ನು ಸ್ಥಾಪಿಸುವುದು ಸೇರಿದಂತೆ ಹಲವು ಅಭಿವೃದ್ಧಿಗಳನ್ನು ಸರ್ಕಾರದ ಮಟ್ಟದಲ್ಲಿ ತರಲು ನಾನು ಖಂಡಿತ ಪರಿಷತ್‌ನಲ್ಲಿ ಧ್ವನಿಯಾಗಿರುತ್ತೇನೆ ಎಂದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಂಡಾಯ ಸ್ಪರ್ಧೆ ಹಿನ್ನೆಲೆ ರಾಷ್ಷ್ರೀಯ ಪಕ್ಷದಿಂದ ನನಗೆ ನೋಟಿಸ್ ಬಂದಿಲ್ಲ. ಬಂದರೆ ವಿವರವಾದ ಉತ್ತರ ಕೊಡುತ್ತೇನೆ. ಶಿಸ್ತು ಸಮಿತಿಯ ವಿಚಾರಣೆಗೂ ಹೋಗುತ್ತೇನೆ. ಎರಡು ಬಾರಿ ಟಿಕೆಟ್ ಏತಕ್ಕಾಗಿ ಕೊಟ್ಟಿಲ್ಲ, ಯಾರು ತಪ್ಪಿಸಿದರು ಎಂಬುದು ಗೊತ್ತಿಲ್ಲ. ಆದರೆ, ಗೆದ್ದ ಮೇಲೆ ನಾನು ಮತ್ತೆ ಬಿಜೆಪಿಗೆ ಹೋಗುತ್ತೇನೆ ಎಂದ ಅವರು, ಹಿಜಾಬ್ ವಿಷಯವನ್ನು ನಾನು ಸೃಷ್ಟಿ ಮಾಡಿದ್ದಲ್ಲ. ಕೆಲವೊಂದು ಹೆಣ್ಣು ಮಕ್ಕಳನ್ನು ಕೆಲವೊಂದು ಸಂಘಟನೆಗಳು ದಾರಿ ತಪ್ಪಿಸಿದರು. ಆದ್ದರಿಂದ ಶಾಲೆಯ ಶಿಸ್ತನ್ನು ಗಟ್ಟಿಮಾಡಲು ಯತ್ನಿಸಿದ್ದೇನೆ ಹೋರತು ಮುಸ್ಲಿಂ, ಕ್ರೈಸ್ತರ ವಿರೋಧಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಂ.ಎಂ.ನಾಣಯ್ಯ, ಅಪ್ಪಣ್ಣ, ಶರತ್ ಶೆಟ್ಟಿ ಕೊತ್ತಾಡಿ, ನಿಕಿಲ್ ನಾಯಕ್, ವಸಂತ್ ಗೆಲೆಯಾರ್ ಉಪಸ್ಥಿತರಿದ್ದರು.