

ಎಂ.ಪಿ.ವೆಂಕಟೇಶ್ ಮದ್ದೂರು
ಮಿಶ್ರ ಹಾಗೂ ಸಮಗ್ರ ಬೇಸಾಯ ಮಾಡಿ ವರ್ಷಕ್ಕೆ 5 ಲಕ್ಷ ರೂ.ಗಳನ್ನು ಸಂಪಾದಿಸುವ ಮೂಲಕ ಸಾಧಕ ಕೃಷಿಕ ಎಲ್ಲರ ಗಮನ ಸೆಳೆದಿದ್ದಾರೆ. ಸಮಗ್ರ ಕೃಷಿ ಅಳವಡಿಸಿಕೊಂಡರೆ ರೈತರು ಯಶಸ್ಸಿನ ಪಥದಲ್ಲಿ ಸಾಗಬಹುದು ಎಂಬುದಕ್ಕೆ ತಾಲೂಕಿನ ಆತಗೂರು ಹೋಬಳಿಯ ತೊರೆ ಶೆಟ್ಟಿಹಳ್ಳಿ ಗ್ರಾಮದ ಬೆಣಚಕಲ್ಲೇಗೌಡ ನೈಜ ನಿದರ್ಶನವಾಗಿದ್ದಾರೆ. ಇವರ ಈ ಕೃಷಿ ಸಾಧನೆಗೆ ಕೃಷಿ ಇಲಾಖೆಯ ತಾಲೂಕು ಶ್ರೇಷ್ಠ ಕೃಷಿಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. 4 ಎಕರೆ ಜಮೀನಿನಲ್ಲಿ ತೆಂಗು, ಅಡಕೆ, ಭತ್ತ ಹಾಗೂ ರೇಷ್ಮೆ ಕೃಷಿ ಮಾಡುವ ಮೂಲಕ ವರ್ಷದಿಂದ ವರ್ಷಕ್ಕೆ ಇವರು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದ್ದಾರೆ.
ರೇಷ್ಮೆ ಕೃಷಿಯಲ್ಲಿ ಲಾಭ: ಕಳೆದ ಮೂರು ದಶಕಗಳಿಂದ ರೇಷ್ಮೆ ಬೆಳೆಯುತ್ತಿರುವ ಬೆಣಚಕಲ್ಲೇಗೌಡ, ರೇಷ್ಮೆ ಹುಳು ಸಾಕುತ್ತಿದ್ದು, ಪ್ರತಿ ವರ್ಷ ಖರ್ಚು ವೆಚ್ಚ ಕಳೆದು ಸರಾಸರಿ 1 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ. ತೆಂಗಿನ ಮರಗಳಿಂದ ವಾರ್ಷಿಕ ಒಂದು ಲಕ್ಷ ರೂ. ಲಾಭ ಗಳಿಸಿರುವೆ ಎಂದು ಅವರು ಹರ್ಷ ವ್ಯಕ್ತಪಡಿಸುತ್ತಾರೆ.
ತಮ್ಮ ಜಮೀನಿನಲ್ಲಿ ಮಿಶ್ರಬೆಳೆ ಹಾಗೂ ಅಂತರ ಬೆಳೆ ಪದ್ಧತಿ ಅಳವಡಿಸಿಕೊಂಡಿರುವ ಬೆಣಚಕಲ್ಲೇಗೌಡ, ತೆಂಗಿನ ಬೆಳೆ ನಡುವೆ ಸಪೋಟ, ಸೀಬೆ, ಮಾವು ಹಾಗೂ ಹಲಸಿನ ಬೆಳೆಯನ್ನು ಬೆಳೆಯುತ್ತಿದ್ದಾರೆ. ಮುಂಗಾರು ಹಾಗೂ ಹಿಂಗಾರಿನ ಬೆಳೆಗಳಾದ ಭತ್ತ , ರಾಗಿ, ಹುರುಳಿ ಕೃಷಿ ಮಾಡಿದ್ದಾರೆ. ಜಮೀನಿನ ಸುತ್ತಲೂ ತೇಗ, ಹೆಬ್ಬೇವು ಹಾಕಿದ್ದಾರೆ.
ಹೈನುಗಾರಿಕೆ: ಕೃಷಿಗೆ ಪೂರಕವಾಗಿ ಇವರು ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. 3 ಸೀಮೆ ಹಸು, 2 ಕುರಿ, 3 ಮೇಕೆ ಸಾಕಣೆ ಮಾಡಿದ್ದಾರೆ. ಹಸುಗಳಿಂದ ನಿತ್ಯವೂ 15 ಲೀಟರ್ ಹಾಲು ದೊರೆಯುತ್ತಿದೆ. ವಾರ್ಷಿಕವಾಗಿ ಇದರಿಂದ 1 ಲಕ್ಷ ರೂ. ಲಾಭ ಗಳಿಸುತ್ತಿದ್ದಾರೆ. ಕೃಷಿಗೆ ಅಗತ್ಯವಾದ ನೀರು ಪೂರೈಸಲು ಕೊಳವೆಬಾವಿ ಇದೆ. ಕೃಷಿ ಇಲಾಖೆ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಸಮಗ್ರ ಕೃಷಿ ಪದ್ಧತಿಯಡಿ ಬೆಣಚಕಲ್ಲೇಗೌಡ ಕೃಷಿ ಹೊಂಡ ಹಾಗೂ ಎರೆಹುಳು ತೊಟ್ಟಿ ನಿರ್ಮಿಸಿ ಕೊಂಡಿದ್ದಾರೆ. ಹೊಂಡದ ನೀರು ಕಲುಷಿತಗೊಳ್ಳದಂತೆ ಮೀನು ಕೃಷಿಯನ್ನೂ ಮಾಡಿದ್ದಾರೆ. ಕಾರ್ಮಿಕರ ಅಭಾವವನ್ನು ಅರಿತು ಸ್ವಂತವಾಗಿ ಮಿನಿ ಟ್ರ್ಯಾಕ್ಟರ್, ರೋಟೋವೇಟರ್, ಕಲ್ಟಿವೇಟರ್ ಹಾಗೂ ಕೃಷಿ ಇಲಾಖೆಯ ಸಹಾಯಧನದಲ್ಲಿ ಒಕ್ಕಣೆ ಹಾಗೂ ಕೂರಿಗೆ ಯಂತ್ರ ಖರೀದಿಸಿದ್ದಾರೆ. ತಾಲೂಕಿನ ತೊರೆ ಶೆಟ್ಟಿಹಳ್ಳಿ, ಹೆಮ್ಮನಹಳ್ಳಿ, ಕೌಡ್ಲೆ ಸೇರಿದಂತೆ ಬೇರೆ ತಾಲೂಕುಗಳ ಕೃಷಿಕರಿಂದ ವಾಹನಗಳನ್ನು ಬಾಡಿಗೆ ತೆಗೆದುಕೊಂಡು ಉಳುಮೆ ಮಾಡುವುದು, ಬೆಳೆಗಳಿಗೆ ಪಟ ಮಾಡುವುದು, ಟ್ರಂಚಿಂಗ್, ಹೊಲ ಬಿತ್ತುವುದು ಸೇರಿದಂತೆ ಹಲವು ರೀತಿಯಲ್ಲಿ ಕೆಲಸ ಮಾಡುವ ಮೂಲಕ ಗೌಡರು ಕೈ ತುಂಬ ಆದಾಯಗಳಿಸಿ ಯಶಸ್ವಿ ಜೀವನ ನಡೆಸುತ್ತಿದ್ದಾರೆ.
ಕೊಟ್ಟಿಗೆ ಗೊಬ್ಬರದ ಬಳಕೆ: ಬೆಣಚಕಲ್ಲೇಗೌಡ ತಮ್ಮ ಗದ್ದೆ, ತೋಟದ ಬೆಳೆಗಳಿಗೆ ರಾಸಾಯನಿಕ ವಸ್ತುಗಳನ್ನು ಬಳಸುವುದಿಲ್ಲ. ಬದಲಾಗಿ ಕೊಟ್ಟಿಗೆ ಗೊಬ್ಬರವನ್ನೇ ಬಳಸುತ್ತಾರೆ. ತಾವು ಪಾಲನೆ ಮಾಡಿರುವ ಕುರಿ, ಕೋಳಿ ಹಾಗೂ ಹಸುವಿನ ಸಗಣಿಯನ್ನು ಸಮರ್ಪಕವಾಗಿ ಬಳಸಿಕೊಂಡು ಸಾವಯವ ಗೊಬ್ಬರವಾಗಿಸಿ ಉತ್ತಮ ಫಸಲು ಬೆಳೆಯುತ್ತಿದ್ದಾರೆ. ಇದರಿಂದ ಮಣ್ಣಿನ ಫಲವತತ್ತೆ ಹೆಚ್ಚುತ್ತದೆ ಎನ್ನುತ್ತಾರೆ ಅವರು. ತಮ್ಮ ಜಮೀನಿನಲ್ಲಿ ತೇಗ, ಸಿಲ್ವರ್, ಶ್ರೀಗಂಧ, ಹುಣಸೇಮರ, ಮಾವು, ಸೀಬೆ ಸೇರಿದಂತೆ ಹಲವು ಮರಗಳನ್ನು ಬೆಳೆದು ಇತರರಿಗೆ ಮಾದರಿ ಆಗಿದ್ದಾರೆ. ಕ್ಷೇತ್ರ ಗ್ರಾಮಾಭಿವೃದ್ಧಿಯ ಯೋಜನೆಯ ಕೃಷಿ ಯಂತ್ರಧಾರೆಯಲ್ಲಿ ಬೆಣಚಕಲ್ಲೇಗೌಡ ಅವರಿಗೆ 4 ವರ್ಷಗಳ ಕೆಲಸ ಮಾಡಿದ ಅನುಭವ ಇದೆ. ಅಲ್ಲಿ ಕೆಲಸ ಬಿಟ್ಟು, ಈಗ ತಾವೇ ಸ್ವಂತ ಕೃಷಿ ಯಂತ್ರಗಳನ್ನು ಖರೀದಿಸಿ, ತಮ್ಮ ಕೃಷಿಗೆ ಹಾಗೂ ಬೇರೆ ರೈತರು ಬಾಡಿಗೆ ಕರೆದರೆ ಅಲ್ಲಿಗೂ ಹೋಗಿ ಉತ್ತಮವಾಗಿ ಕೆಲಸ ಮಾಡುತ್ತಾರೆ. ಗದ್ದೆಗೆ ಬರುವ ರೈತರಿಗೆ ತಾವು ಬೆಳೆದಿರುವ ಬೆಳೆಗಳ ಬಗ್ಗೆ ಸೂಕ್ತ ಮಾಹಿತಿ ನೀಡುತ್ತಿದ್ದಾರೆ. ಗೌಡರ ಸಮಗ್ರ ಕೃಷಿಗೆ ಪತ್ನಿ ಮಂಜುಳಾ, ಪುತ್ರರಾದ ಟಿ.ಬಿ.ವಿವೇಕ, ಟಿ.ಬಿ.ನಮೀತ್ ಸೇರಿದಂತೆ ಇಡೀ ಕುಟುಂಬ ಸಾಥ್ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಏಲಕ್ಕಿ, ಸೇಬು ಸೇರಿದಂತೆ ಇತರ ಹಣ್ಣಿನ ಬೆಳೆಗಳನ್ನು ಬೆಳೆಯಲು ಯೋಜನೆ ರೂಪಿಸಿಕೊಂಡಿದ್ದಾರೆ. ಮುಂದೆ ಮತ್ತಷ್ಟು ಕೃಷಿಯನ್ನು ವಿಸ್ತರಿಸಬೇಕು ಎಂಬ ಅದಮ್ಯ ವಿಶ್ವಾಸ ಹೊಂದಿದ್ದಾರೆ.
ಕೃಷಿಯನ್ನು ವ್ಯವಸ್ಥಿತವಾಗಿ ಹಾಗೂ ಕ್ರಮಬದ್ಧವಾಗಿ ಮಾಡಿದರೆ ಯಾವುದೇ ರೀತಿಯಲ್ಲೂ ನಷ್ಟವಾಗುವುದಿಲ್ಲ. ಕೃಷಿಯನ್ನು ಪ್ರೀತಿ ಹಾಗೂ ಶ್ರದ್ಧೆಯಿಂದ ಮಾಡಬೇಕು. ಆಗ ನಿಜಕ್ಕೂ ಅಧಿಕ ಲಾಭವನ್ನು ಗಳಿಸಬಹುದು ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಕೃಷಿ ಮಾಡಲು ತಾಲೂಕಿನ ಎಲ್ಲ ಅಧಿಕಾರಿಗಳು ನಮಗೆ ಸಹಕಾರ ನೀಡುತ್ತಿರುವುದು ಖುಷಿ ತಂದಿದೆ. ಬೆಣಚ ಕಲ್ಲೇಗೌಡ ಕೃಷಿಕ, ತೊರೆಶೆಟ್ಟಿಹಳ್ಳಿ