

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ೧೩ನೇ ವರ್ಷದ ತೋಕ್ ನಮ್ಮೆ ಬೀರುಗ ಅಜ್ಜಮಾಡ ಒಕ್ಕದ ಐನ್ ಮನೆಯಲ್ಲಿ ಡಿ೧೭ ರಂದು ನಡೆಯಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.
ವಿಶ್ವ ಅಲ್ಪಸಂಖ್ಯಾತ ಜನಾಂಗಗಳ ಹಕ್ಕುಗಳ ದಿನಾಚರಣೆಯ ಸಂದರ್ಭ ಸಾರ್ವತ್ರಿಕವಾಗಿ ಸಿಎನ್‌ಸಿ ತೋಕ್ ನಮ್ಮೆಯನ್ನು ಆಚರಿಸುತ್ತಾ ಬಂದಿದೆ ಮತ್ತು ಆ ಮೂಲಕ ಕೊಡವರ ಕೋವಿ ಹಕ್ಕಿನ ಕುರಿತು ಜಾಗೃತಿ ಮೂಡಿಸಿದೆ. ಡಿ.೧೭ ರಂದು ಬೆಳಗ್ಗೆ ೧೦ ಗಂಟೆಗೆ ತೋಕ್ ನಮ್ಮೆನಡೆಯಲಿದೆ. ವಿವಿಧೆಡೆಯಿಂದ ಆಗಮಿಸುವ ಕೊಡವರು ತಮ್ಮೊಂದಿಗೆ ತರುವ ಗನ್‌ಗಳಿಗೆ ಸಾಮೂಹಿಕವಾಗಿ ಭಕ್ತಿಭಾವದಿಂದ ಸಾರ್ವತ್ರಿಕ ಪೂಜೆ ನಡೆಸಿ ಪ್ರದರ್ಶಿಸಲಾಗುವುದು. ನಂತರ ಗುಂಡು ಹೊಡೆಯುವ ಪೈಪೋಟಿ ನಡೆಯಲಿದ್ದು, ಮಹಿಳೆಯರು, ಮಕ್ಕಳು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿದೆ. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗನ್ ಹಿಡಿದುಕೊಂಡು ಮಹಿಳೆಯರು ಹಾಗೂ ಪುರುಷರು ಕೊಡವ ಸಾಂಸ್ಕೃತಿಕ ನೃತ್ಯ ಮಾಡಲಿದ್ದಾರೆ. ಬೀರುಗ ದಕ್ಷಿಣ ಗಂಗೆ ಕೊಡವ ಸಾಂಸ್ಕೃತಿಕ ಕೂಟದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ೨೦೧೯ ರಿಂದ ವಿವಿಧ ಸಾಧಕರಿಗೆ "ಕೊಡವ ವಿಭೂಷಣ ಪ್ರಶಸ್ತಿ" ನೀಡುತ್ತಾ ಬರಲಾಗಿದ್ದು, ಈ ಬಾರಿಯೂ ೬ ಜನರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮಕ್ಕೆ ಖಡ್ಡಾಯವಾಗಿ ಎಲ್ಲರೂ ಗನ್ ತರುವುದರೊಂದಿಗೆ ಕೊಡವ ಸಾಂಪ್ರದಾಯಿಕ ಉಡುಪು ಕುಪ್ಯ-ಚಾಲೆ-ಮಂಡೆ ಚೆಕ್ ವಸ್ತ್ರ, ಮಹಿಳೆಯರು ಕೊಡವತಿ ಪೊಡಿಯ-ಮಂಡೆ ವಸ್ತ್ರ ಸಹಿತ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ನಾಚಪ್ಪ ಮನವಿ ಮಾಡಿದರು.
ಮುಂದಿನ ಪೀಳಿಗೆಗೆ ಗನ್‌ನ ಹಕ್ಕಿನ ಕುರಿತು ಅರಿವಿಕೆ ಮೂಡಿಸಿ ನಮ್ಮ ಸಂವಿಧಾನಿಕ ಹಕ್ಕುಗಳ ಉಲ್ಲಂಘನೆ ಮಾಡದಂತೆ ಸರ್ಕಾರವನ್ನು ಕಾಲಕಾಲಕ್ಕೆ ಎಚ್ಚರಿಸುವ ಸಲುವಾಗಿಯೂ ತೋಕ್ ನಮ್ಮೆ ಆಚರಿಸಲಾಗುತ್ತಿದೆ. ಸಿಖ್‌ರ ಕಿರ್‌ಪಾಣ್ ಮಾದರಿಯಲ್ಲಿ ಸಂವಿಧಾನದ ೨೫ ಮತ್ತು ೨೬ನೇ ವಿಧಿಯಂತೆ ಶಾಶ್ವತ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿ ನಮ್ಮೆಯಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು. ಮಧ್ಯ ಏಷ್ಯದ ಪರ್ವತವಾಸಿ ಬುಡಕಟ್ಟು ಜನಾಂಗಗಳ ಜಾನಪದ ಕ್ರೀಡೆ "ಬುಜ್‌ಕಾಶಿ" ಉತ್ಸವಕ್ಕೆ ಯಾವ ರೀತಿ ಅಲ್ಲಿನ ಸರ್ಕಾರಗಳೇ ಉತ್ತೇಜನ ನೀಡುತ್ತಿವೆಯೋ ಅದೇ ರೀತಿಯ ಪ್ರೋತ್ಸಾಹ ಕೊಡವರ ತೋಕ್‌ನಮ್ಮೆಗೂ ನೀಡಬೇಕು ಎಂದು ಒತ್ತಾಯಿಸಿದರು.