

ಮಡಿಕೇರಿ: ತಿತಿಮತಿ ಸಮೀಪದ ಭದ್ರಗೋಳದಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಹರೀಶ್ ಮತ್ತು ಸನತ್ ಅವರ ಮನೆಗೆ ಭಾನುವಾರ ತೆರಳಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಸನತ್, ಹರೀಶ್, ಸಣ್ಣುವಂಡ ಜಯ ಅವರು ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿದ್ದ ಸಂದರ್ಭದಲ್ಲಿ ಪಾನಮತ್ತನಾಗಿ ಜೀಪ್ ಚಾಲನೆ ಮಾಡುತ್ತಿದ್ದ ಚಾಲಕ ಮೂವರ ಮೇಲೆ ಜೀಪ್ ಹರಿಸಿದ್ದ. ಪರಿಣಾಮ ಸ್ಥಳದಲ್ಲೇ ಸನತ್ ಮತ್ತು ಜಯ ಸಾವನ್ನಪ್ಪಿ, ಹರೀಶ್ ಗಂಭೀರ ಗಾಯಗೊಂಡಿದ್ದರು. ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರೀಶ್ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ನಿಧನರಾಗಿದ್ದರು.
ಕುಟುಂಬಕ್ಕೆ ಆಧಾರವಾಗಿದ್ದ ಹರೀಶ್ ಮತ್ತು ಸನತ್ ಸಾವನ್ನಪ್ಪಿದ ವಿಚಾರ ತಿಳಿದ ಶಾಸಕರು, ಭಾನುವಾರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಕುಟುಂಬಸ್ಥರಿಗೆ ರೂ ೨೫,೦೦೦ ನಗದು ನೀಡಿದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು, ವಾಹನದ ಮಾಲೀಕ ಮತ್ತು ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮೃತ ಹರೀಶ್ ಅವರ ಪತ್ನಿ ಜೀವಿತ ಅವರಿಗೆ ಉದ್ಯೋಗ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೃತಪಟ್ಟ ಸನತ್ ಮತ್ತು ಹರೀಶ್ ಅವರ ತಂದೆ ನಾರಾಯಣ್, ತಾಯಿ ಶಾರದ, ಹರೀಶ್ ಪತ್ನಿ ಜೀವಿತ ಸೇರಿದಂತೆ ಕುಟುಂಬಸ್ಥರಿದ್ದರು.