ಈ ವರ್ಷ ನವರಾತ್ರಿ ಅಷ್ಟರಾತ್ರಿ ಮಾತ್ರ!; ಎಂಟೇ ದಿನಗಳಲ್ಲಿ ಎಲ್ಲ ಆಚರಣೆ..

Dasara
ಸಂಗ್ರಹ ಚಿತ್ರ
Published on

| ಗುರುಪ್ರಸಾದ್ ತುಂಬಸೋಗೆ ಮೈಸೂರು

ಸಾಮಾನ್ಯವಾಗಿ ದಸರೆಯನ್ನು ಒಂಬತ್ತು ರಾತ್ರಿಗಳು ದೇವಿಯ ಆರಾಧನೆ ಮಾಡುತ್ತಾ ನವರಾತ್ರಿಯನ್ನಾಗಿ ಆಚರಿಸುವುದು ವಾಡಿಕೆ. ಆದರೆ ಈ ಬಾರಿ ತಿಥಿಗಳ ಮೇಲೆ ತಿಥಿ (ಉಪರಿ) ಬಂದಿರುವುದರಿಂದ ‘ಅಷ್ಟರಾತ್ರಿ’ಯನ್ನಾಗಿ ಆಚರಿಸಬೇಕಾಗಿ ಬಂದಿದೆ. ಅಕ್ಟೋಬರ್ 7ರಿಂದ 15ರವರೆಗೆ ದಸರಾ ಆಚರಣೆ ಇರಲಿದ್ದು, 7ರಿಂದ ಪಾಡ್ಯದಿಂದ 14ರ ಎಂಟನೇ ದಿನಕ್ಕೆ ನವಮಿ, 15ರಂದು ಒಂಬತ್ತನೇ ದಿನ ವಿಜಯದಶಮಿ ಆಚರಣೆ ಬರಲಿದೆ. ಪರಿಣಾಮ ಒಂಬತ್ತು ದಿನದ ನವರಾತ್ರಿ ಆಚರಣೆಗಳನ್ನು ಮತ್ತು ದೇವಿಯ ಪೂಜೆಯನ್ನು ಎಂಟು ದಿನಗಳಲ್ಲಿ ಮಾಡಬೇಕಾಗಿದೆ.

ಶರನ್ನವರಾತ್ರಿಯ ಮೊದಲನೆ ದಿನವಾದ ಅ.7ರಂದು ಪಾಡ್ಯದ ದಿನ ಪ್ರಥಮವಾಗಿ ಶೈಲಾಪುತ್ರಿಯನ್ನು ಶೈಲಾವ್ರತ ಆಚರಣೆಯಿದೆ(ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ಪೂಜೆ). 8ರಂದು ಎರಡನೇ ದಿನ ಬ್ರಹ್ಮಚಾರಿಣಿ ಪೂಜೆ ಮಾಡಲಾಗುತ್ತದೆ. 9ರಂದು ತೃತೀಯ ದಿನ ಚಂದ್ರಘಂಟಾ ಮತ್ತು ಚತುರ್ಥಿ ದಿನದ (ನಾಲ್ಕನೇ ದಿನ) ಕೂಷ್ಮಾಂಡಾ ಸ್ವರೂಪವನ್ನು ಒಟ್ಟಿಗೆ ಪೂಜಿಸಲಾಗುತ್ತದೆ. ಅಥವಾ 10ರಂದು ಚತುರ್ಥಿ ದಿನದ ಕೂಷ್ಮಾಂಡಾ ಸ್ವರೂಪ ಮತ್ತು ಪಂಚಮಿ ದಿನದ ಸ್ಕಂದಮಾತಾ ಸ್ವರೂಪವನ್ನು ಒಟ್ಟಿಗೆ ಪೂಜಿಸಲಾಗುತ್ತದೆ. ಮುಖ್ಯವಾಗಿ ಈ ಎರಡು ದಿನಗಳಲ್ಲೇ ವ್ಯತ್ಯಾಸ ಕಂಡುಬರುತ್ತಿದೆ. ಮೂರನೇ ದಿನ ತೃತೀಯ ಮತ್ತು ಚತುರ್ಥಿಯ ಆಚರಣೆಗಳು ಅಥವಾ ನಾಲ್ಕನೇ ದಿನ ಚತುರ್ಥಿ ಮತ್ತು ಪಂಚಮಿ ತಿಥಿಯ ಆಚರಣೆಗಳನ್ನು ಒಂದೇ ದಿನ ಮಾಡಲಾಗುತ್ತಿದೆ. ಇನ್ನು ಮಿಕ್ಕ ದಿನಗಳಲ್ಲಿ ಎಂದಿನಂತೆ ಇರಲಿದ್ದು, 15ರಂದು ವಿಜಯದಶಮಿಯ ದಿನ ಜಂಬೂಸವಾರಿ ನಡೆಯಲಿದೆ. ಈ ಲೆಕ್ಕಚಾರವೂ ಮೈಸೂರು ಅರಮನೆ ಪಂಚಾಂಗ, ಒಂಟಿಕೊಪ್ಪಲ್ ಪಂಚಾಂಗ ಮತ್ತು ಮೇಲುಕೋಟೆಯ ಪಂಚಾಂಗವನ್ನು ಆಧರಿಸಿದ್ದಾಗಿದೆ.

ಯಾಕೆ ಈ ಬದಲಾವಣೆ?: ಚಂದ್ರ ಭೂಮಿಯನ್ನು ಸುತ್ತುತ್ತಿರುತ್ತಾನೆ. ಈ ಸಮಯದಲ್ಲಿ ವ್ಯತ್ಯಾಸವಾದ ಸಂದರ್ಭದಲ್ಲಿ ತಿಥಿಯಲ್ಲೂ ಬದಲಾವಣೆಯಾಗುತ್ತದೆ. ಆದ್ದರಿಂದ ಇಲ್ಲಿನ ಪಂಚಾಂಗ ತಜ್ಞರು ಒಂದು ದಿನ ಎರಡು ತಿಥಿಯನ್ನು ಸೇರಿಸಿ ಲೆಕ್ಕ ಹಾಕಿರುತ್ತಾರೆ. 2015ರಲ್ಲಿ ಅಷ್ಟಮಿ ಉಪರಿ ಬಂದಿದ್ದರಿಂದ ನಾಡಹಬ್ಬ ದಸರಾದ ಆಯುಧಪೂಜೆ ಮತ್ತು ವಿಜಯದಶಮಿ ಆಚರಣೆಯನ್ನು ಒಂದೇ ದಿನ ನಿಗದಿ ಮಾಡಲಾಗಿತ್ತು. ಅರಮನೆ ಕಡೆಯಿಂದ ಇದಕ್ಕೆ ವಿರೋಧವೂ ಬಂದಿತ್ತು. ಅಂತಿಮವಾಗಿ ಎರಡೂ ಆಚರಣೆಗಳನ್ನು ಬೇರೆ ಬೇರೆ ದಿನ ಮಾಡಲಾಯಿತು. ಆದರೆ ಪ್ರಥಮದಿಂದ ಪಂಚಮಿಯೊಳಗೆ ತಿಥಿ ಮೇಲೆ ತಿಥಿ ಬಂದಿರುವುದರಿಂದ ಜನರಿಗೇನು ಅಂತ ಪರಿಣಾಮ ಬೀರುವುದಿಲ್ಲ. ಶಾಸ್ತ್ರೋಕ್ತವಾಗಿ ಪೂಜೆ ಮಾಡುವವರಿಗೆ ಸ್ವಲ್ಪ ತ್ರಾಸವಾಗಬಹುದು.

ಈ ಬಾರಿ ನವರಾತ್ರಿಯು ಅಷ್ಟರಾತ್ರಿಗಳಲ್ಲಿ ಬಂದಿದೆ. ಪ್ರಥಮದಿಂದ ಪಂಚಮಿ ತಿಥಿಯ ವ್ಯತ್ಯಾಸದಿಂದ ಈ ರೀತಿಯಾಗಿದ್ದು, ನವರಾತ್ರಿಯ ಪೂಜೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಒಂದೇ ದಿನ ಎರಡು ಪೂಜೆಯನ್ನೂ ಮಾಡಬೇಕಾಗುತ್ತದೆ. ಯಾವ ದಿನ ಮಾಡಬೇಕು ಎಂಬುದು ಅವರು ಆಚರಿಸಿಕೊಂಡು ಬಂದ ಸಂಪ್ರದಾಯದ ಮೇಲೆ ಅವಲಂಬಿತವಾಗಿರುತ್ತದೆ.

| ಡಾ. ಸೆಲ್ವ ಪಿಳ್ಳೈ ಅಯ್ಯಂಗಾರ್ ಧಾರ್ವಿುಕ ಚಿಂತಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net