ಈ ಸಲ ಕಪ್​ ನಮ್ದು ಅಭಿಮಾನಿಗಳು ಖುಷ್​

05 06 2025_BGR RURAL_PAGE_03
ನೆಲಮಂಗಲದ ರಾಯನ್​ ನಗರದಲ್ಲಿ ಬೃಹತ್​ ಎಲ್​ಇಡಿ ಪರದೆಯಲ್ಲಿ ಕ್ರಿಕೆಟ್​ ವೀಕ್ಷಣೆ ಮಾಡುತ್ತಿರುವ ಅಭಿಮಾನಿಗಳು.
Published on

ನೆಲಮಂಗಲ : ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ತಂಡ ಮೊದಲ ಬಾರಿಗೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರ ಸೇರಿ ತಾಲೂಕಿನಾದ್ಯಂತ ಅಭಿಮಾನಿಗಳು ಸಂಭ್ರಮಿಸಿದರು. ಜೂ.3ರಂದು ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದ ಐಪಿಎಲ್​ ಫೈನಲ್​ ಪಂದ್ಯದಲ್ಲಿ ಪಂಜಾಬ್​ ತಂಡದ ವಿರುದ್ಧ ರೋಚಕ ಜಯಗಳಿಸಿ ಕಪ್​ ಎತ್ತಿ ಹಿಡಿದ ಆರ್​ಸಿಬಿ ತಂಡದ ಯಶಸ್ಸಿಗೆ ನಗರದಲ್ಲಿ ಆರ್​ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

ಕಳೆದ 17 ವರ್ಷಗಳಿಂದಲೂ ಐಪಿಎಲ್​ ಕಪ್​ ಎತ್ತಿ ಹಿಡಿಯಲು ಸತತ ಪ್ರಯತ್ನ ಮಾಡುತ್ತಿದ್ದರೂ ಯಶಸ್ಸು ದೊರಕಿರಲಿಲ್ಲ. ಇದೀಗ 18ನೇ ಆವೃತ್ತಿಯ ಫೈನಲ್​ ಪಂದ್ಯದಲ್ಲಿ ಪಂಜಾಬ್​ ತಂಡದ ವಿರುದ್ಧ 6 ರನ್​ಗಳ ರೋಚಕ ಜಯಗಳಿಸುತ್ತಿದ್ದಂತೆ, ನಗರದೆಲ್ಲೆಡೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ನಗರದ ವೀವರ್​ ಕಾಲನಿ, ರಾಯನ್​ನಗರ ಸೇರಿ ವಿವಿಧೆಡೆ ನೂರಾರು ಅಭಿಮಾನಿಗಳು ಪಟಾಕಿ ಸಿಡಿಸಿ, ಆರ್​ಸಿಬಿ ತಂಡಕ್ಕೆ ಹಾಗೂ ವಿರಾಟ್​ ಕೊಹ್ಲಿಗೆ ಜೈಕಾರ ಹಾಕಿ ಕುಣಿದು ಕುಪ್ಪಳಿಸಿದರು.

ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್​ಗೌಡ ಮಾತನಾಡಿ, ಐಪಿಎಲ್​ನಲ್ಲಿ ಆರ್​ಸಿಬಿ ತಂಡ ಗೆಲುವು ಸಾಧಿಸಿದ್ದು, ಸಂತೋಷ ಉಂಟು ಮಾಡಿದೆ. ಆರ್​ಸಿಬಿ ಗೆಲುವು ಸಾಧಿಸುವ ಮೂಲಕ 17 ವರ್ಷಗಳ ಕನಸ್ಸು ನನಸಾಗಿದೆ ಎಂದರು.

ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಆನಂದ್​, ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮನಾಬ್​ಪ್ರಸಾದ್​, ಸದಸ್ಯ ಅಂಜಿನಪ್ಪ, ಬಿಎಂಟಿಸಿಮಾಜಿ ನಿರ್ದೇಶಕ ಮಿಲಿಟರಿ ಮೂರ್ತಿ, ಆರ್​ಸಿಬಿ ಅಭಿಮಾನಿಗಳಾದ ಮಂಜುನಾಥ್​, ಪ್ರಸಾದ್​, ರವಿಕುಮಾರ್​, ಕುಮಾರ್​, ಆಕಾಶ್​, ಮನೋಜ್​, ಗಿರೀಶ್​ ಇತರರು ಇದ್ದರು.

ಎಲ್​ಇಡಿ ಪರದೆ ವ್ಯವಸ್ಥೆ : ನೆ.ಯೋ.ಪ್ರಾಧಿಕಾರ ಎಂ.ನಾರಾಯಣ್​ಗೌಡ ನೇತೃತ್ವದಲ್ಲಿ ನಗರದ ವೀವರ್​ ಕಾಲೋನಿಯಲ್ಲಿ ಹಾಗೂ ಉದ್ಯಮಿ ಗೋವಿಂದಸ್ವಾಮಿ ನೇತೃತ್ವದಲ್ಲಿ ರಾಯನ್​ನಗರದಲ್ಲಿ ಬೃಹತ್​ ಗಾತ್ರದ ಎಲ್​ಇಡಿ ಪರದೆ ವ್ಯವಸ್ಥೆ ಮಾಡಿದ್ದು, ಬಡಾವಣೆ ಸೇರಿ ಸಾವಿರಾರು ಆರ್​ಸಿಬಿ ಅಭಿಮಾನಿಗಳು ಪಂದ್ಯಾವಳಿಯನ್ನು ನೇರ ವೀಕ್ಷಣೆ ಮಾಡಿದರು.

ಟ್ರಾಫಿಕ್​ ಜಾಮ್​ : ನಗರದ ಬಹುತೇಕ ಮುಖ್ಯ ರಸ್ತೆಗಳಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಬಿಎಚ್​ ರಸ್ತೆ, ಕುಣಿಗಲ್​ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ, ದೊಡ್ಡಬಳ್ಳಾಪುರ ರಸ್ತೆ ಸೇರಿ ಹಲವು ಮುಖ್ಯ ರಸ್ತೆಯಲ್ಲಿ ಆರ್​ಸಿಬಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗೆದ್ದರು. ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಿಗಟ್ಟಿ ಸಂಭ್ರಮಿಸಿದರು. ಯುವಕರು ನಡುರಸ್ತೆಯಲ್ಲೇ ಬಟ್ಟೆ ಬಿಚ್ಚಿ ಕುಣಿದಾಡಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು.

ಬಿರಿಯಾನಿ ಹಂಚಿಕೆ : ನಗರದ ರಾಯನ್​ನಗರದಲ್ಲಿ ಉದ್ಯಮಿ ಗೋವಿಂದಸ್ವಾಮಿ ಹಾಗೂ ಮುಖಂಡ ಮಂಜುನಾಥ್​ ಅವರು ಆರ್​ಸಿಬಿ ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ 1 ಸಾವಿರಕ್ಕೂ ಹೆಚ್ಚು ಮಂದಿಗೆ ಬಿರಿಯಾನಿ ಹಂಚಿಕೆ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net