ಈ ಬಾರಿ ಸುಂಟಿಕೊಪ್ಪದಲ್ಲಿ ಕಸಾಪ ಜಿಲ್ಲಾ ಸಮ್ಮೇಳನ

This time Kasapa District Conference at Sunticoppa
Published on

ಮಡಿಕೇರಿ:

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾರ್ಚ್ ಎರಡನೇ ವಾರ ಸುಂಟಿಕೊಪ್ಪದಲ್ಲಿ ನಡೆಯಲಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಜಿಲ್ಲಾ ಸಮಿತಿಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.
2022-23ನೇ ಸಾಲಿನ 24 ದತ್ತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ನಿರ್ವಹಿಸಿದಕ್ಕಾಗಿ ಜಿಲ್ಲಾ ಸಮಿತಿಯ ಕಾರ್ಯಕಾರಿ ಮಂಡಳಿ, ತಾಲೂಕು ಮತ್ತು ಹೋಬಳಿಯ ಕಾರ್ಯಕಾರಿ ಮಂಡಳಿಯನ್ನು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಭಿನಂದಿಸಿದರು. ಮಾರ್ಚ್ ಒಳಗಾಗಿ 23 - 24 ನೇ ಸಾಲಿನ 28 ದತ್ತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಹಕಾರ ಕೋರಿದರು.

2023 - 24 ನೇ ಸಾಲಿನ ದತ್ತಿ ಕಾರ್ಯಕ್ರಮದಲ್ಲಿ ಈಗಾಗಲೇ ಗೌರಮ್ಮ ದತ್ತಿ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಲಾಗಿದ್ದು ಎಂಟು ಮಹಿಳಾ ಲೇಖಕರು ತಮ್ಮ ಕೃತಿಗಳನ್ನು ಸ್ಪರ್ಧೆಗೆ ಕಳುಹಿಸಿದ್ದಾರೆ. ಅದನ್ನು ಉತ್ತಮ ತೀರ್ಪುಗಾರರಿಂದ ವಿಶ್ಲೇಷಣೆಗೆ ಒಳಪಡಿಸಿ ಪ್ರಶಸ್ತಿ ನೀಡಲಾಗುವುದು. ಪ್ರೌಢಶಾಲಾ ಮಕ್ಕಳಿಗೆ ಗೌರಮ್ಮ ಸಣ್ಣ ಕಥೆಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಗೋಪಾಲಕೃಷ್ಣ ದತ್ತಿನಿಧಿ ಕಾರ್ಯಕ್ರಮವನ್ನು ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನಿರ್ವಹಿಸುತ್ತಿದ್ದು 25ಕ್ಕೂ ಹೆಚ್ಚು ಕಥೆಗಾರರು ಸ್ಪರ್ಧೆಗೆ ಬರಹಗಳನ್ನು ಕಳಿಸಿರುತ್ತಾರೆ. ಈ ಬಾರಿ ನಾ. ಡಿಸೋಜಾ ದತ್ತಿ ಕಾರ್ಯಕ್ರಮದ ಆಶಯದಂತೆ ನಾಟಕ ತರಬೇತಿ ಶಿಬಿರ ಮತ್ತು ಪ್ರದರ್ಶನ ಏರ್ಪಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸದಸ್ಯತ್ವ ಆಂದೋಲನ ಯಶಸ್ವಿಯಾಗಿ ನಡೆಸುವ ಮೂಲಕ ಮಾರ್ಚ್ ಅಂತ್ಯದೊಳಗಾಗಿ 1,000 ನೂತನ ಸದಸ್ಯರನ್ನು ಮಾಡುವಂತೆ ತೀರ್ಮಾನಿಸಲಾಯಿತು. ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಈಗಾಗಲೇ 14 ನೂತನ ದತ್ತಿಗಳನ್ನು ಸ್ಥಾಪನೆ ಮಾಡಲಾಗಿದ್ದು ಒಟ್ಟಾಗಿ ಜಿಲ್ಲೆಯಲ್ಲಿ ಈಗ 30 ದತ್ತಿಗಳು ಸ್ಥಾಪನೆ ಆಗಿದೆ. ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ದತ್ತಿ ಸ್ಥಾಪನೆಗೆ ಪ್ರಯತ್ನ ಪಡುವಂತೆ ತೀರ್ಮಾನಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕೇಂದ್ರ ಸಮಿತಿ ನೀಡುವ ಸತ್ಯವತಿ ವಿಜಯ ರಾಘವ ಚಾರಿಟೇಬಲ್ ಟ್ರಸ್ಟ್ ದತ್ತಿ ಪ್ರಶಸ್ತಿಗೆ ಆಯ್ಕೆ ಆಗಿರುವ ಜಿಲ್ಲಾ ಕಾರ್ಯಕಾರಿ ಸಮಿತಿಯ ನಿರ್ದೇಶಕರೂ ಆದ ಬರಹಗಾರ್ತಿ ಹಂಚೆಟೀರ ಫ್ಯಾನ್ಸಿ ಮುತ್ತಣ್ಣ ಅವರನ್ನು ಇದೇ ಸಂದರ್ಭ ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಹಂಚಿಟೀರ ಫ್ಯಾನ್ಸಿ ಮುತ್ತಣ್ಣ ಅವರು ಕೊಡಗು ಜಿಲ್ಲೆಯ ಇತಿಹಾಸ ಮತ್ತು ಮಹಿಳೆಯ ಸಮಸ್ಯೆ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಕಾಡು ಹಕ್ಕಿಯ ಹಾಡು, ಸಾವಿರಾರು ನೆನಪುಗಳು, ಕನವರಿಕೆ, ಒಡಲ ಉರಿ ಸೇರಿದಂತೆ ಹಲವಾರು ಕೃತಿಗಳನ್ನು, ವಿಶೇಷ ಲೇಖನಗಳನ್ನು ಬರೆದಿರುವ ಫ್ಯಾನ್ಸಿ ಅವರು ಈ ಪ್ರಶಸ್ತಿಗೆ ಅರ್ಹ ವ್ಯಕ್ತಿ ಎಂದು ಅಭಿನಂದಿಸಿದರು.

ಗೌರವ ಕಾರ್ಯದರ್ಶಿ ಎಸ್.ಐ ಮುನಿರ್ ಅಹಮದ್, ರೇವತಿ ರಮೇಶ್, ಕೋಶಾಧಿಕಾರಿ ಎಸ್. ಎಸ್. ಸಂಪತ್ ಕುಮಾರ್, ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ನಿರ್ದೇಶಕರುಗಳಾದ ಕೆ. ಓ. ಬೇಬಿಮ್ಯಾಥ್ಯೂ, ರಮ್ಯಾ, ಚಂದನ್ ಕಾಮತ್ ರೇಣುಕಾ ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net