ಮೈಸೂರು ಹೊರ ವಲಯದಲ್ಲಿ ಯುವ ದಸರಾ

dasara
Published on

ಮೈಸೂರು: ಯುವ ದಸರಾವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಿಸಬೇಕು ಎಂಬ ಉದ್ದೇಶದಿಂದ ನಗರದ ಹೊರವಲಯದ ಉತ್ತನಹಳ್ಳಿ ಮೈದಾನಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಪ್ರತಿ ವರ್ಷ ಯುವ ದಸರಾ ವೀಕ್ಷಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ, ಮಹಾರಾಜ ಕಾಲೇಜು ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಯುವ ದಸರಾ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಮಹಾರಾಜ ಕಾಲೇಜು ಮೈದಾನ ನಗರದ ಹೃದಯ ಭಾಗದಲ್ಲಿ ಇರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆಯೂ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ನಗರದ ಹೊರವರ್ತುಲ ರಸ್ತೆ (ಉತ್ತನಹಳ್ಳಿ) ಬಳಿಯಲ್ಲಿ ಇರುವ ಮೈದಾನದಲ್ಲಿ ಯುವ ದಸರಾ ಆಯೋಜಿಸಲು ಸಿದ್ಧತೆ ನಡೆದಿದೆ. ಇಲ್ಲಿ 1 ಲಕ್ಷ ಜನರು ಯುವ ದಸರಾ ವೀಕ್ಷಿಸಲು ಅವಕಾಶವಿದೆ.

ಹೆಚ್ಚು ಜನರು ಯುವ ದಸರಾ ವೀಕ್ಷಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಜಿಲ್ಲಾಡಳಿತ ಸ್ಥಳ ಬದಲಾವಣೆ ಮಾಡುವ ನಿರ್ಧಾರ ಕೈಗೊಂಡು ನಗರದ ವಿವಿಧ ಸ್ಥಳಗಳನ್ನು ಪರಿಶೀಲಿಸಿ ಅಂತಿಮವಾಗಿ ಉತ್ತನಹಳ್ಳಿ ಮೈದಾನವನ್ನು ಆಯ್ಕೆ ಮಾಡಲಾಗಿದೆ. ಈ ಮೈದಾನವು ಸುಮಾರು 100 ಎಕರೆ ವಿಸ್ತೀರ್ಣ ಹೊಂದಿದೆ. ಈ ವಿಸ್ತೀರ್ಣಕ್ಕೆ ಅನುಗುಣವಾಗಿ ಬೃಹತ್ ವೇದಿಕೆ ನಿರ್ಮಿಸಲು ಉದ್ದೇಶಿಸಲಾಗಿದೆ.

ವಿಐಪಿಗಳು ಹಾಗೂ ಜನಸಾಮಾನ್ಯರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಕಲ್ಪಿಸಲಾಗುವುದು. ಸ್ಥಳದಲ್ಲಿ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೆ, ನಗರ ಬಸ್ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ ಒದಗಿಸಲು ನಿರ್ಧರಿಸಲಾಗಿದೆ. ವಿಶಾಲವಾದ ಜಾಗ ಇರುವ ಹಿನ್ನೆಲೆಯಲ್ಲಿ ಪಾರ್ಕಿಂಗ್ ಸಮಸ್ಯೆಯೂ ಉದ್ಭವಿಸುವುದಿಲ್ಲ.

ಯುವ ದಸರೆಯಲ್ಲಿ ಈ ಬಾರಿ ಸಂಗೀತ ಲೋಕದ ದಿಗ್ಗಜರು ಆಗಮಿಸಿ ಜನರನ್ನು ರಂಜಿಸಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ, ಎ.ಆರ್. ರೆಹಮಾನ್, ಗಾಯಕಿ ಶ್ರೇಯಾ ಘೋಷಲ್, ಕೆಜಿಎಫ್ ಖ್ಯಾತಿಯ ಸಂಗೀತ ಸಂಯೋಜಕ ರವಿ ಬಸರೂರ್ ಸೇರಿದಂತೆ ಹಲವು ದಿಗ್ಗಜರು ಆಗಮಿಸುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net