ನೀತಿ ಸಂಹಿತೆಗೆ ಸೊರಗಿದ ಯೋಗ

yoga
Published on

ಸದೇಶ್ ಕಾರ್ಮಾಡ್ ಮೈಸೂರು
ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯೂ ‘ಚುನಾವಣಾ ನೀತಿ ಸಂಹಿತೆ’ಯಿಂದ ಸೊರಗಿದೆ.

ಯೋಗ ದಿನಾಚರಣೆಯನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲು ಕನಿಷ್ಠ ಒಂದು ತಿಂಗಳ ತಯಾರಿ ಅವಶ್ಯಕತೆ ಇದೆ. ಯೋಗದಲ್ಲಿ ಗಿನ್ನೆಸ್ ಸೇರಿದಂತೆ ವಿವಿಧ ದಾಖಲೆಗನ್ನು ಮಾಡಲು ಕನಿಷ್ಠ ಮೂರ‌್ನಾಲ್ಕು ತಿಂಗಳ ಅವಶ್ಯಕತೆ ಇದೆ. ಆದರೆ, ಈ ಬಾರಿ ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಯೋಗ ದಿನಾಚರಣೆಗೆ ಯಾವುದೇ ರೀತಿಯ ಸಿದ್ಧತೆ ಕೈಗೊಳ್ಳಲು ಸಾಧ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಸುವ ಬದಲು ಕಳೆದ ಬಾರಿಯಂತೆ ಈ ಬಾರಿಯೂ ಅರಮನೆ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಅರಮನೆ ಆವರಣದಲ್ಲಿ 2022ರಲ್ಲಿ ಹಮ್ಮಿಕೊಂಡಿದ್ದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. 15 ಸಾವಿರಕ್ಕೂ ಹೆಚ್ಚು ಯೋಗ ಪಟುಗಳು ನರೇಂದ್ರ ಮೋದಿ ಅವರೊಂದಿಗೆ ಯೋಗಾಭ್ಯಾಸ ಮಾಡಿದ್ದರು. 2022ರಲ್ಲಿ ರೇಸ್‌ಕೋರ್ಸ್ ಮೈದಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ, ಭದ್ರತೆಯ ಕಾರಣದಿಂದ ಅರಮನೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಸಾಮೂಹಿಕ ಯೋಗ ಪ್ರದರ್ಶನ ನಡೆಸಲಾಯಿತು.

ಕಳೆದ ಬಾರಿ ವಿಧಾನಸಭಾ ಚುನಾವಣೆ ಹಾಗೂ ಸಮಯದ ಕೊರತೆಯಿಂದ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಹಮ್ಮಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಈ ಬಾರಿಯೂ ನೀತಿಸಂಹಿತೆ ಕಾರಣಕ್ಕೆ ಯೋಗ ದಿನಾಚರಣೆಗೆ ಸಿದ್ಧತೆ ಕೈಗೊಳ್ಳಲು ಸಾಧ್ಯವಾಗದೆ ಇರುವುದು ಯೋಗ ಪ್ರಿಯರಲ್ಲಿ ನಿರಾಸೆ ಮೂಡಿಸಿದೆ.

ಈ ಬಾರಿ ಅರಮನೆ ಆವರಣದಲ್ಲಿ ಹಮ್ಮಿಕೊಳ್ಳುವ ಯೋಗ ದಿನಾಚರಣೆ ಹಾಗೂ ಸಾಮೂಹಿಕ ಯೋಗ ಪ್ರದರ್ಶನದಲ್ಲಿ 10 ಸಾವಿರ ಯೋಗಪಟುಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇದರೊಂದಿಗೆ ಎಂದಿನಂತೆ ಶಾಲಾ, ಕಾಲೇಜುಗಳಲ್ಲಿ ಯೋಗ ದಿನಾಚರಣೆ ಹಾಗೂ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದೆ.

ಗಿನ್ನೆಸ್ ದಾಖಲೆಯ ಗರಿ

ನಗರದ ರೇಸ್‌ಕೋರ್ಸ್ ಮೈದಾನದಲ್ಲಿ 2017ರ ಜೂನ್ 21 ರಂದು ಹಮ್ಮಿಕೊಂಡಿದ್ದ ತೃತೀಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 55,506 ಯೋಗ ಪಟುಗಳು ಪಾಲ್ಗೊಂಡು ಸಾಮೂಹಿಕ ಯೋಗ ಪ್ರದರ್ಶಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಈ ಗಿನ್ನೆಸ್ ದಾಖಲೆ ಮೂಲಕ ಮೈಸೂರು ಜಾಗತಿಕವಾಗಿ ಗಮನ ಸೆಳೆಯಿತು.

ಯೋಗ ವಿವಿ ಅವಶ್ಯಕ

ನಗರದಲ್ಲಿ ಯೋಗ ಕಲಿಕೆಗೆ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ದೇಶ, ವಿದೇಶದಿಂದ ಜನರು ನಗರಕ್ಕೆ ಆಗಮಿಸುತ್ತಿದ್ದಾರೆ. ಆನ್‌ಲೈನ್ ಮೂಲಕ ಸಹ ತರಬೇತಿ ನೀಡಲಾಗುತ್ತಿದೆ. ನಗರದಲ್ಲಿ 100ಕ್ಕೂ ಹೆಚ್ಚು ಯೋಗ ತರಬೇತಿ ಕೇಂದ್ರಗಳು ಇದ್ದು, 20 ಸಾವಿರಕ್ಕೂ ಹೆಚ್ಚು ಜನರು ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಿದ್ದಾರೆ. ನಗರದ ಆರ್ಥಿಕ ಬೆಳವಣಿಗೆಯಲ್ಲೂ ಯೋಗ ಕೊಡುಗೆಗಳನ್ನು ನೀಡುತ್ತಿದೆ.
ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಯೋಗ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಯೋಗ ವಿಶ್ವ ವಿದ್ಯಾಲಯ ಪ್ರಾರಂಭಿಸಬೇಕು ಎಂಬುದು ಯೋಗಪಟಗಳು ಒತ್ತಾಯವಾಗಿದೆ. ವಿಶ್ವವಿದ್ಯಾಲಯ ಪ್ರಾರಂಭಗೊಂಡರೆ ನಗರದಲ್ಲಿ ಯೋಗ ಚಟುವಟಿಕೆಗೆ ಮತ್ತಷ್ಟು ಪ್ರೋತ್ಸಾಹ ದೊರೆಯಲಿದೆ. ಆದರೆ, ಈ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಯಾವುದೇ ರೀತಿಯ ಪ್ರಯತ್ನಗಳು ನಡೆಯದೆ ಇರುವುದು ಬೇಸರದ ವಿಚಾರ.

ಪ್ರಥಮ ಯೋಗ ಸಮ್ಮೇಳನ

ನಗರದ ಕಲಾಮಂದಿರದಲ್ಲಿ ಜೂ.22, 23 ರಂದು ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟ ವತಿಯಿಂದ ರಾಜ್ಯ ಮಟ್ಟದ ಪ್ರಥಮ ಯೋಗ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನಾಧ್ಯಕ್ಷರಾಗಿ ಯೋಗಗುರು ಡಾ.ಕೆ.ಎಲ್. ಶಂಕರನಾರಾಯಣ ಜೋಯಿಸ್ ಅವರನ್ನು ಆಯ್ಕೆ ಮಾಡಲಾಗಿದೆ. ಯೋಗದ ಮಹತ್ವವನ್ನು ಜನರಿಗೆ ತಿಳಿಸುವ ಮಹತ್ವದ ಗೋಷ್ಠಿಗಳು ಸಮ್ಮೇಳನದಲ್ಲಿ ನಡೆಯಲಿವೆ. ಯೋಗವನ್ನು ಉತ್ತೇಜಿಸಲು ಯೋಗ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಬಾರಿ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ, ಲೋಕಸಭೆ ಹಾಗೂ ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಸಿದ್ಧತೆ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಈ ಬಾರಿ 10 ಸಾವಿರ ಯೋಗಪಟುಗಳನ್ನು ಸೇರಿಸಿ ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ನಡೆಸಲಾಗುವುದು.
ಶ್ರೀಹರಿ ದ್ವಾರಕನಾಥ್
ಅಧ್ಯಕ್ಷ, ಮೈಸೂರು ಯೋಗ ಒಕ್ಕೂಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net