

ಬೆಂಗಳೂರು: ಇದೇ ಮೊದಲನೆಯ ಬಾರಿಗೆ ಐತಿಹಾಸಿಕ ಕಡಲೆಕಾಯಿ ಪರಿಷೆಯಲ್ಲಿ ಕಡಲೆಕಾಯಿ, ಆಟಿಕೆ ಮಾರಾಟಗಾರರಿಂದ ಯಾವುದೇ ರೀತಿಯಾದಂತ ಶುಲ್ಕ ಅಥವಾ ತೆರಿಗೆ ಸಂಗ್ರಹ ಮಾಡದೇ ಇರಲು ನಿರ್ಧರಿಸಲಾಗಿದೆ.
ನವೆಂಬರ್ 25 ಮತ್ತು 26ರಂದು ಕಡಲೆಕಾಯಿ ಪರಿಷೆ ನಡೆಸಲಾಗುತ್ತಿದ್ದು, ಈ ಸಂಬಂಧ ಬಸವನಗುಡಿ ಶ್ರೀ ದೊಡ್ಡ ಗಣಪತಿ ದೇವಾಲಯದಲ್ಲಿ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿಯವರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯಲ್ಲಿ ಶುಲ್ಕ ಸಂಗ್ರಹಿಸದೇ ಇರುವ ನಿರ್ಧಾರಕ್ಕೆ ಬರಲಾಗಿದೆ.
ಕಡಲೆಕಾಯಿ ಪರಿಷೆ ದಿನಗಳಂದು ಸ್ವಚ್ಛತೆ ನೈರ್ಮಲ್ಯಗಳನ್ನು ಕಾಯ್ದುಕೊಳ್ಳಲು ಸಭೆಯು ಬಿಬಿಎಂಪಿಗೆ ಸೂಚನೆ ನೀಡಿತು. ಜತೆಗೆ ದೀಪಾಲಂಕಾರ, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ಶೌಚಾಲಯ ಸ್ಥಾಪನೆ, ಸಿಸಿ ಕ್ಯಾಮರಾ ಅಳವಡಿಕೆ, ಬಿಎಂಟಿಸಿ ಮಾರ್ಗ ಬದಲಾವಣೆ, ಸಾರ್ವಜನಿಕರ ಸುರಕ್ಷತೆಗೆ 12 ಕಡೆ ಕಾವಲು ಗೋಪುರ, ತುರ್ತು ಚಿಕಿತ್ಸಾ ವಾಹನ ವ್ಯವಸ್ಥೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಬಹು ಮುಖ್ಯವಾಗಿ ಪರಿಷೆಯಲ್ಲಿ ಪ್ಲಾಸ್ಟಿಕ್ ಕವರ್ ನಿಷೇಧ ಹೇರುವ ನಿರ್ಧಾರವನ್ನೂ ಮಾಡಲಾಯಿತು.
ಸುಂಕ ವಸೂಲಾತಿ ಕುರಿತು ಸಭೆಯಲ್ಲಿ ವಿಶೇಷ ಚರ್ಚೆ ನಡೆಯಿತು. ದೊಡ್ದ ಗಣಪತಿ ದೇವಸ್ಥಾನ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಸುಂಕ ವಸೂಲಾತಿಗೆ ಪ್ರತಿ ವರ್ಷ ಟೆಂಡರ್ ಮಾಡಲಾಗುತ್ತಿತ್ತು. ಟೆಂಡರ್‌ದಾರರು ಅಂಗಡಿಯವರಿಂದ ಬಲವಂತವಾಗಿ ಹೆಚ್ಚು ಸುಂಕ ವಸೂಲಿ ಮಾಡಿದ ಬಗ್ಗೆ ದೂರುಗಳು ಬಂದಿತ್ತು. ಹೀಗಾಗಿ ಈ ಬಾರಿ ಸುಂಕ ವಸೂಲಿ ವ್ಯವಸ್ಥೆ ಕೈಬಿಡಲು ತೀರ್ಮಾನ ಮಾಡಲಾಯಿತು.
ಒಂದು ವೇಳೆ ಯಾರಾದರೂ ಅನಧಿಕೃತ ವ್ಯಕ್ತಿಗಳು ಸುಂಕ ವಸೂಲಿ ಮಾಡುತ್ತಿರುವುದು ಕಂಡುಬಂದರೆ ಪೊಲೀಸರು ಪ್ರಕರಣ ದಾಖಲಿಸುವುದಕ್ಕೂ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದರು.
ಐತಿಹಾಸಿಕ ಪರಿಷೆಯಲ್ಲಿ ಸಾವಿರಾರು ಜನ ಬರುತ್ತಾರೆ. ಇಲ್ಲಿ ಯಾವುದೇ ತೊಂದರೆಯಾಗದಂತೆ ಸಂಬಂಧಪಟ್ಟವರು ಮುಂಜಾಗ್ರತೆ ವಹಿಸಬೇಕು. ಸಂಬಂಧ ಪಟ್ಟ ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.
ಸಭೆಯಲ್ಲಿ ಶಾಸಕ ರವಿಸುಬ್ರಹ್ಮಣ್ಯ, ಯು.ಬಿ.ವೆಂಕಟೇಶ್, ಧಾರ್ಮಿಕ ಪರಿಷತ್ ಪ್ರಮುಖರು, ಮುಜರಾಯಿ, ಬಿಬಿಎಂಪಿ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಜರಿದ್ದರು.