ಈ ಬಾರಿ ಭಾರಿ ಗಣೇಶೋತ್ಸವ : ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿಕೆ

Appu Patanshetti
ವಿಜಯಪುರದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸುದ್ದಿಗೋಷ್ಠಿ ನಡೆಸಿದರು. ಶ್ರೀಕಾಂತ ಶಿಂಧೆ, ಮಹೇಶ ಜಾಧವ ಮತ್ತಿತರರಿದ್ದರು.
Published on

ವಿಜಯಪುರ: ಕರೊನಾದಿಂದಾಗಿ ಕಳೆಗುಂದಿದ್ದ ಗಣೇಶೋತ್ಸವವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಈ ವಿಷಯ ತಿಳಿಸಿದ ಅವರು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುತ್ತಿದ್ದು, ಪುಣೆಯ ಸಂಘರ್ಷ ಡೋಲು ಸೇರಿದಂತೆ ಹಲವು ಕಲಾಪ್ರಕಾರಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಒಂಬತ್ತನೇ ದಿನದಂದು ಬೆಳಗ್ಗೆ ೧೧ಕ್ಕೆ ಶಿವಾಜಿ ವೃತ್ತದಿಂದ ಭವ್ಯ ಮೆರವಣಿಗೆ ನಡೆಸಲಾಗುವುದು. ಸಂಪ್ರದಾಯದಂತೆ ತಾಜ್‌ಬಾವಡಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುವುದು ಎಂದರು.

ಸಾವರ್ಕರ್ ಫೋಟೊ ಅಳವಡಿಸುವ ಬಗ್ಗೆ ಮಹಾಮಂಡಲ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕೆಲವು ಸಂಘಟನೆಗಳು ಸಾವರ್ಕರ್ ಫೋಟೊ ನೀಡುತ್ತಿವೆ. ಆ ಬಗ್ಗೆ ಮಹಾಮಂಡಲ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಹಿನ್ನೆಲೆ ರಾಷ್ಟ್ರಪ್ರೇಮ ಬಿಂಬಿಸುವ ನಿಟ್ಟಿನಲ್ಲಿ ಒಂಬತ್ತು ದಿನ ವಿವಿಧ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಪಟ್ಟಣಶೆಟ್ಟಿ ತಿಳಿಸಿದರು.

ನಮಗೇನು ಶಾಂತಿಭಂಗ ಮಾಡಬೇಕೆಂಬ ಉದ್ದೇಶ ಇಲ್ಲ. ರಾಜಕೀಯ ಲಾಭ ಪಡೆಯುವ ಉದ್ದೇಶವೂ ಇಲ್ಲ. ಗಾಬರಿಯಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ ವಾಗ್ದಾಳಿ ನಡೆಸಿದರು.

ತಾಜ್‌ಬಾವಡಿ ನೀರು ಎಲ್ಲಿಯೂ ಪೂರೈಸಲಾಗುತ್ತಿಲ್ಲ. ಅಲ್ಲಿನ ಶುದ್ಧೀಕರಣ ಯಂತ್ರವೂ ಹಾಳಾಗಿದೆ. ಅದನ್ನಾದರೂ ರಿಪೇರಿ ಮಾಡಲಿ. ಇದೇ ಶಾಸಕರು ಅದರ ನಿರ್ವಹಣೆ ಮಾಡಬಹುದಿತ್ತಲ್ಲ. ಇಷ್ಟು ದಿನ ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದರು.

ಗಜಾನನ ಮಹಾಮಂಡಲ ಅಧ್ಯಕ್ಷ ಶ್ರೀಕಾಂತ ಶಿಂಧೆ ಕಾರ್ಯಕ್ರಮದ ರೂಪುರೇಷೆ ನೀಡಿದರು. ಮಾಜಿ ಅಧ್ಯಕ್ಷ ಮಹೇಶ ಜಾಧವ, ಪ್ರಭಾಕರ ಬೋಸಲೆ, ಗೋಪಾಲ ಘಟಕಾಂಬಳೆ, ವಿಜಯ ಜೋಷಿ, ಸಿದ್ದು ಮಲ್ಲಿಕಾರ್ಜುನ ಮಠ ಮತ್ತಿತರರು ಇದ್ದರು.

ಶಾಸಕರೇನು ಪೊಲೀಸರೇ?
ತಾಜ್‌ಬಾವಡಿಯಲ್ಲೇ ಗಣೇಶ ವಿಸರ್ಜನೆ ಮಾಡಬೇಕೆಂಬ ಹಠ ಇಲ್ಲ. ಸಾರ್ವಜನಿಕರು ಧಾರ್ಮಿಕ ಕಾರ್ಯಕ್ರಮಗಳಿಗೆ ತಾಜ್ ಬಾವಡಿಯಲ್ಲಿ ಅವಕಾಶ ಕಲ್ಪಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ವರ್ಷಕ್ಕೆ ಒಮ್ಮೆಯಾದರೂ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದ್ದೇವಷ್ಟೆ. ಜಿಲ್ಲಾಡಳಿತಕ್ಕೆ ಇನ್ನೂ ಮನವಿ ಮಾಡಿಲ್ಲ. ಆಗಲೇ ನಗರ ಶಾಸಕರು ಕೇಸ್ ಹಾಕುತ್ತೇನೆ, ಗುಂಡಾ ಕಾಯ್ದೆ ಅಡಿ ಕೇಸ್ ದಾಖಲಿಸುತ್ತೇನೆ ಎನ್ನುತ್ತಿದ್ದಾರೆ. ಕೇಸ್ ದಾಖಲಿಸಲು ಇವರೇನು ಪೊಲೀಸರಾ? ಶಾಸಕರಲ್ಲಿಯೇ ಗೂಂಡಾ ಪ್ರವೃತ್ತಿ ಇದೆ. ಪೊಲೀಸ್ ಇಲಾಖೆ ಇವರನ್ನೇ ಗಂಭೀರವಾಗಿ ಪರಿಗಣಿಸಬೇಕು ಎಂದು ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net