ಈ ಬಾರಿ ಜಿಲ್ಲೆಯಲ್ಲಿ ಶೇ.5 ರಷ್ಟು ಭತ್ತ ಬಿತ್ತನೆ

11mnd1-Bhatta
Published on

ಅವಿನಾಶ್ ಜೈನಹಳ್ಳಿ ಮೈಸೂರು
ಬಿರು ಬೇಸಿಗೆಯ ದಿನಗಳಲ್ಲೂ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದ ಭತ್ತದ ಬೆಳೆ ಈ ಬಾರಿ ಶೇ.5ರಷ್ಟು ಮಾತ್ರ ಗುರಿ ತಲುಪಲಾಗಿದೆ. ಭತ್ತದ ನಾಡು ಕೃಷ್ಣರಾಜನಗರ ಸೇರಿದಂತೆ ಸಾಲಿಗ್ರಾಮ, ಮೈಸೂರು ತಾಲೂಕು, ನಂಜನಗೂಡು ಹಾಗೂ ತಿ.ನರಸೀಪುರದಲ್ಲಿ ಅತಿ ಹೆಚ್ಚು ಭತ್ತ ಬೆಳೆಯಲಾಗುತ್ತಿತ್ತು. ಆದರೆ, 2023-24ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಕೇವಲ 587 ಹೆಕ್ಟೇರ್‌ನಲ್ಲಷ್ಟೇ ಭತ್ತ ಬಿತ್ತನೆಯಾಗಿದೆ.

ಬೇಸಿಗೆ ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ 12,710 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ, ಮಳೆ ಕೊರತೆಯಿಂದಾಗಿ ಕೇವಲ 587 ಹೆಕ್ಟೇರ್‌ಗಷ್ಟೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಎಚ್.ಡಿ.ಕೋಟೆಯಲ್ಲಿ 900-0, ಸರಗೂರು 600-0, ಹುಣಸೂರಿನಲ್ಲಿ 0, ಕೆ.ಆರ್.ನಗರ 500 ಪೈಕಿ 75 ಹೆಕ್ಟೇರ್, ಸಾಲಿಗ್ರಾಮ 500ರ ಪೈಕಿ 80, ಮೈಸೂರು 850ರ ಪೈಕಿ 300, ನಂಜನಗೂಡು 5500ರ ಪೈಕಿ 20 ಹೆಕ್ಟೇರ್, ಪಿರಿಯಾಪಟ್ಟಣ 0, ತಿ.ನರಸೀಪುರ 3860 ರ ಪೈಕಿ 112 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆಯಾಗಿದ್ದು, ಒಟ್ಟಾರೆ ಶೇ.5ರಷ್ಟು ಗುರಿ ಸಾಧಿಸಲಾಗಿದೆ. 2022-23ನೇ ಸಾಲಿನಲ್ಲಿ ಇದೇ ಅವಧಿಯಲ್ಲಿ 10,002 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿತ್ತು.

ಮೈಸೂರು ತಾಲೂಕಿನಲ್ಲಿ ತುಸು ಸಮಾಧಾನಕರ

ಮೈಸೂರು ತಾಲೂಕಿನಾದ್ಯಂತ ಈ ಬಾರಿ 850 ಪೈಕಿ 300 ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆಯಾಗಿರುವುದು ತುಸು ಸಮಾಧಾನ ತಂದಿದೆ. ಇನ್ನುಳಿದಂತೆ ಹೆಗ್ಗಡದೇವನಕೊಟೆ, ಸರಗೂರು, ಹುಣಸೂರು, ಪಿರಿಯಾಪಟ್ಟಣ ತಾಲೂಕುಗಳಲ್ಲಿ ನೀರಿನ ಕೊರತೆಯಿಂದ ಬಿತ್ತನೆ ಕಾರ್ಯವೇ ನಡೆಯದೆ ಶೂನ್ಯ ಸಾಧನೆಯಾಗಿದೆ.

ಮಳೆ ಆಶ್ರಿತ ಪ್ರದೇಶದಲ್ಲಿ ಜಿಲ್ಲೆಯಲ್ಲಿ ಈ ಬಾರಿ ಶೂನ್ಯ ಸಾಧನೆಯಾಗಿದ್ದು, ಭತ್ತ, ಜೋಳ, ರಾಗಿ, ಮುಸುಕಿನಜೋಳ ಸೇರಿದಂತೆ ಯಾವೊಂದು ಬೆಳೆಗೂ ನೀರು ಲಭಿಸಿದೆ ರೈತ ಕಂಗಾಲಾಗಿ ಆಕಾಶ ನೋಡುವಂತಾಗಿದೆ. ಅದೇ ರೀತಿ ಬೋರ್‌ವೆಲ್, ಇತರ ನೀರಾವರಿ ಸೌಲಭ್ಯ ಹೊಂದಿರುವ ರೈತರಷ್ಟೇ ಈ ಬಾರಿ ಒಂದಷ್ಟು ಬೆಳೆ ಬೆಳೆದಿದ್ದಾರೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾವಾರು ಸಾಕಷ್ಟು ಕ್ಷೀಣಿಸಿದೆ.

ರಾಗಿ, ಜೋಳವೂ ಕ್ಷೀಣ: ಜಿಲ್ಲೆಯಲ್ಲಿ 905 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಇದ್ದು, ಕೇವಲ 127 ಹೆಕ್ಟೇರ್‌ನಲ್ಲಷ್ಟೇ ಗುರಿ ಸಾಧಿಸಲಾಗಿದೆ. ಅದೇ ರೀತಿ ಮುಸುಕಿನ ಜೋಳ 795ರ ಪೈಕಿ 280 ಹೆಕ್ಟೇರ್‌ನಲ್ಲಿ ನಾಟಿ ಕಾರ್ಯವಾಗಿದೆ. ಇನ್ನು ಹುರುಳಿ -0, ಉದ್ದು 10 , ಹೆಸರು-5, ಅಲಸಂದೆ-35 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ. ನೆಲಗಡಲೆ, ಹತ್ತಿ, ಕಬ್ಬು, ಹೊಗೆಸೊಪ್ಪು ಸೇರಿದಂತೆ ಒಟ್ಟಾರೆ 15,965 ಪೈಕಿ 1,434 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆಯಾಗಿದೆ.

10.8 ಮಿ.ಮೀ. ಮಳೆ:

ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಾರ್ಚ್, ಏಪ್ರಿಲ್, ಮೇನಲ್ಲಿ ಸರಾಸರಿ 177.6 ಮಿ.ಮೀ. ಮಳೆಯಾಗುತ್ತಿತ್ತು. ಕಳೆದ 50 ವರ್ಷಗಳ ಬೇಸಿಗೆ ಮಳೆ ಆಧರಿಸಿ ಹವಾಮಾನ ಇಲಾಖೆ ಈ ಅಂಕಿ-ಸಂಖ್ಯೆ ನೀಡಿದೆ. ಇದಕ್ಕೆ ಹೋಲಿಸಿದರೆ 2023ರ ಮಾರ್ಚ್, ಏಪ್ರಿಲ್‌ನಲ್ಲಿ ಕೇವಲ 10.8 ಮಿ.ಮೀ. ಮಳೆಯಷ್ಟೇ ಸುರಿದಿದೆ.

ಜಲಾಶಯಗಳಿಂದ ಬೆಳೆಗಳಿಗೆ ನೀರಿಲ್ಲ:

ಈ ಬಾರಿ ಕಾವೇರಿ ಮತ್ತು ಕಬಿನಿ ಜಲಾಶಯದಲ್ಲೂ ನೀರಿನ ಮಟ್ಟ ಕುಸಿದಿರುವುದರಿಂದ ಬೆಳೆಗಳಿಗೆ ನೀರು ಬಿಡಲು ಸಾಧ್ಯವಿಲ್ಲ. ಇನ್ನುಳಿದಿರುವ ನೀರು ಕುಡಿಯುವುದಕ್ಕಷ್ಟೇ ಲಭ್ಯ ಎಂದು ಈಗಾಗಲೇ ಸರ್ಕಾರ ಹೇಳಿದೆ. ಆದರೆ, ಈಗಿನ ಪರಿಸ್ಥಿತಿ ಗಮನಿಸಿದರೆ ಮಳೆಗಾಲದವರೆಗೂ ಕುಡಿಯುವುದಕ್ಕೂ ಜೀವಜಲದ ಕೊರತೆ ಎದುರಾಗಬಹುದು ಎಂದು ಅಂದಾಜಿಸಲಾಗುತ್ತಿದೆ.

ಜಿಲ್ಲೆಯು ಕಬಿನಿ, ಕೆಆರ್‌ಎಸ್ ಹಾಗೂ ಹಾರಂಗಿ ಜಲಾಶಯದ ನೀರನ್ನು ಆಶ್ರಯಿಸಿದೆ. ಈ ಪೈಕಿ 2284.00 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯದಲ್ಲಿ ಪ್ರಸ್ತುತ 2267.07 ಅಡಿ ನೀರು ಸಂಗ್ರಹವಿದೆ. ಜಲಾಶಯಕ್ಕೆ 64 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 500 ಕ್ಯೂಸೆಕ್ ನೀರನ್ನು ಬಳಸಿಕೊಳ್ಳಲಾಗುತ್ತಿದೆ. 19.52 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 10.29 ಟಿಎಂಸಿ ನೀರು ಇದೆ. ಕೆಆರ್‌ಎಸ್ ಜಲಾಶಯದಲ್ಲಿ 87.31 ಅಡಿ ನೀರು ಮಾತ್ರ ಇದೆ. ಇನ್ನು ಹಾರಂಗಿ ಜಲಾಶಯದಲ್ಲಿ 2829.59 ಅಡಿ ಮಾತ್ರ ನೀರು ಇದ್ದು, ಕುಡಿಯಲು ಮಾತ್ರ ಬಳಸಲು ಸಾಧ್ಯವಾಗಿದೆ.

ಈ ಬಾರಿ ಕಾವೇರಿ ಮತ್ತು ಕಬಿನಿ ಜಲಾಶಯದಲ್ಲೂ ನೀರಿನ ಮಟ್ಟ ಕುಸಿದಿರುವುದರಿಂದ ಬೇಸಿಗೆ ಹಂಗಾಮಿನ ಬೆಳೆಗಳ ನಾಟಿ ಕಾರ್ಯದಲ್ಲಿ ಕುಂಠಿತವಾಗಿದೆ.-ಡಾ.ಬಿ.ಎಸ್.ಚಂದ್ರಶೇಖರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಮೈಸೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net