

ಮೈಸೂರು: ‘ದಸರಾ ವಸ್ತುಪ್ರದರ್ಶನ’ ಈ ಬಾರಿ ಹೆಚ್ಚು ಜನರನ್ನು ಆಕರ್ಷಿಸಿದ್ದು, 15 ಲಕ್ಷ ಜನ ಭೇಟಿ ನೀಡಿದ್ದು, ದಸರಾ ವಸ್ತು ಪ್ರದರ್ಶನ ಯಶಸ್ವಿಯಾಗಿದೆ ಎಂದು ಶಾಸಕ ಶ್ರೀವತ್ಸ ಹೇಳಿದರು.
ವಸ್ತು ಪ್ರದರ್ಶನ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಸರಾ ವಸ್ತು ಪ್ರದರ್ಶನ ಈ ಬಾರಿ 90 ದಿನಗಳ ಕಾಲ ಯಶಸ್ವಿಯಾಗಿದ್ದು, ವ್ಯಾಪಾರ ವಹಿವಾಟು ಉತ್ತಮವಾಗಿ ನಡೆದಿದೆ. ದೇಶದ ಮೂಲೆ ಮೂಲೆಯಿಂದ ಜನರು ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ. ಮಳಿಗೆ ತೆರೆದಿರುವ ಮಳಿಗೆದಾರರು ಉತ್ತಮ ಆದಾಯವನ್ನು ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಜಿ.ಗೌಡ ಮಾತನಾಡಿ, ಈ ಬಾರಿಯ ದಸರಾ ವಸ್ತುಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರದ ಶಕ್ತಿ ಯೋಜನೆಯೂ ಸಹಕಾರಿ ಆಗಿರುವುದರಿಂದ ಪ್ರಾಧಿಕಾರದ ಇತಿಹಾಸದಲ್ಲಿಯೇ ಹೆಚ್ಚು ಆದಾಯ ಬಂದಿದೆ ಎಂದರು.
ಇದೇ ವೇಳೆ ದಸರಾ ವಸ್ತು ಪ್ರದರ್ಶನದಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ನಿಗಮ ಮಂಡಳಿಗಳು ಹಾಗೂ ಜಿಲ್ಲಾ ಪಂಚಾಯಿತಿ ಗಳಿಂದ ತೆರೆದ ಮಳಿಗೆಗಳಲ್ಲಿ ಬಹುಮಾನಕ್ಕೆ ಆಯ್ಕೆಯಾದ ಮಳಿಗೆಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ರಾಜ್ಯ ಸರ್ಕಾರದ ಇಲಾಖೆಗಳ ವಿಭಾಗದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ(ಪ್ರಥಮ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ(ದ್ವಿತೀಯ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ತೃತೀಯ), ಕೇಂದ್ರ ಸರ್ಕಾರದ ಇಲಾಖೆ ವಿಭಾಗದಲ್ಲಿ ಅಂಚೆ ಇಲಾಖೆ (ಪ್ರ), ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(ದ್ವಿ), ನಬಾರ್ಡ್ ಬ್ಯಾಂಕ್(ತೃ), ನಿಗಮ/ಮಂಡಳಿ/ಪ್ರಾಧಿಕಾರ ವಿಭಾಗದಲ್ಲಿ ಕಾವೇರಿ ನೀರಾವರಿ ನಿಗಮ(ಪ್ರ), ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ದ್ವಿ), ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಸಂಶೋಧನಾ ಸಂಸ್ಥೆ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ(ತೃ), ಜಿಲ್ಲಾ ಪಂಚಾಯಿತಿ ವಿಭಾಗದಲ್ಲಿ ಮಂಡ್ಯ ಜಿಪಂ(ಪ್ರ), ಮೈಸೂರು ಜಿಪಂ(ದ್ವಿ), ರಾಮನಗರ ಜಿಪಂ(ತೃ) ಬಹುಮಾನ ಪಡೆದವು.
ಉತ್ತಮವಾಗಿ ಚಿತ್ರ ಬಿಡಿಸಿದ ಮಕ್ಕಳಿಗೆ, ವಿಶೇಷ ವಿಭಾಗದಲ್ಲಿ ಕಲಾಕೃತಿ ನಿರ್ಮಾಣ, ಪೆನ್ಸಿಲ್ ಶೇಡಿಂಗ್ ವಿಭಾಗದಲ್ಲಿ ಬಹುಮಾನ ವಿತರಣೆ, ಮಹಿಳಾ ವಿಭಾಗದ ಸಾಂಪ್ರದಾಯಿಕ ಕಲೆ, ಪ್ರಕೃತಿ ಚಿತ್ರಣ ವಿಭಾಗದಲ್ಲಿ ಉತ್ತಮ ಕಲೆ ಪ್ರದರ್ಶಿಸಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತ ರಾವ್ ಪಾಟೀಲ್, ನಗರ ಪಾಲಿಕೆ ಮಾಜಿ ಸದಸ್ಯೆ ಛಾಯಾದೇವಿ ಸೇರಿದಂತೆ ಇತರರಿದ್ದರು.