

ಧಾರವಾಡ: ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಆರ್ಥಿಕ (ಜಾತಿ ಗಣತಿ) ಸಮೀಕ್ಷೆಯು ಹಿಂದುಗಳನ್ನು ಮತಾಂತರ ಮಾಡಲು ಪ್ರೋತ್ಸಾಹ ನೀಡುವಂತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರವೇ ಜಾತಿ ಗಣತಿ ಮಾಡಲು ನಿರ್ಧರಿಸಿದೆ. ಹೀಗಾಗಿ ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಆದರೆ, ಇದೀಗ ನಡೆಯುತ್ತಿರುವ ಗಣತಿಯಲ್ಲಿ ವಯಕ್ತಿಕ ಪ್ರಶ್ನೆಗಳನ್ನು ಸೇರಿಸಲಾಗಿದೆ. ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಬ್ರಾಹ್ಮಣ ಅಂದರೇನು ಅರ್ಥ? ನೀವು ಯಾವುದಾದರೂ ಸಾಮಾಜಿಕ ಸಂಘಟನೆಗೆ ಸೇರಿದ್ದೀರಾ? ಎನ್ನುವ ಪ್ರಶ್ನೆಗಳು ಇವೆ. ಇವು ಬೇಕಿತ್ತಾ ಎಂದು ಪ್ರಶ್ನಿಸಿದರು. ಜಾತಿಗೆ ಸಂಬಂಧಿಸಿದ ಮಾಹಿತಿ ನೀಡಲು ತಕರಾರಿಲ್ಲ. ಆದರೆ, ಅನಾವಶ್ಯಕ ಪ್ರಶ್ನೆಗಳಿಗೆ ನಮ್ಮ ತಕರಾರಿದೆ. ಹೀಗಾಗಿ ಅಂತಹ ಪ್ರಶ್ನೆಗಳಿಗೆ ನಮ್ಮ ವಿರೋಧವಿದೆ. ಹಿಂದು ಸಮಾಜ ಇಬ್ಭಾಗ ಮಾಡಬೇಕು ಎನ್ನುವ ಪ್ರಯತ್ನದಲ್ಲಿ ಜಾತಿ ಗಣತಿ ಸಹ ಒಂದು ಎಂದು ಅಪಾದಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬೆಂಬಲಿಗರು ಮುಂದಿನ ತಿಂಗಳು ಮುಖ್ಯಮಂತ್ರಿ ಬದಲಾವಣೆ ಎಂದು ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಇಲ್ಲ ಎನ್ನುತ್ತಿದ್ದಾರೆ. ತಮ್ಮ ಸೀಟು ಉಳಿಸಿಕೊಳ್ಳಲು ಈ ಗಣತಿ ಮಾಡುತ್ತಿದ್ದಾರೆ. ಆದರೆ, ನಮಗೆ ಗಣತಿ ವಿರೋಧಿಗಳು ಎಂದು ಹೇಳುತ್ತಿದ್ದಾರೆ. ಒಕ್ಕಲಿಗ ಸ್ವಾಮಿಗಳು, ಡಿಕೆಶಿ ಇದ್ದ ಸಭೆಯಲ್ಲಿ ಗಣತಿ ಮುಂದೂಡಬೇಕೆಂದು ಹೇಳಿದರಲ್ಲವೇ?ಇದರ ಅರ್ಥವೇನು? ಹಾಗಾದರೆ ಡಿಕೆಶಿ ಗಣತಿ ವಿರೋಧಿ ಅಲ್ಲದೇ ಇನ್ನೇನು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಖ್ಯಮಂತ್ರಿ ಕುರ್ಚಿ ಹೋಗಲಿದೆ ಎನ್ನುವ ಭಯಕ್ಕೆ ಹಾಗೂ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಮೆಚ್ಚಿಸಲು ಜಾತಿ ಗಣತಿ ಮಾಡಲಾಗುತ್ತಿದೆ ಎಂದರು.