ಬೆಂಗಳೂರಿನ ಈ ರಸ್ತೆ ಸಂಚಾರಕ್ಕೆ ಮುಕ್ತ; ನಿರ್ಬಂಧ ಆದೇಶ ವಾಪಸ್ ಪಡೆದ ಟ್ರಾಫಿಕ್ ಪೊಲೀಸ್

Untitled-1
Published on

ಬೆಂಗಳೂರು: ಮೈಸೂರು ರಸ್ತೆಯಲ್ಲಿನ ಸಂಚಾರ ದಟ್ಟಣೆಯಿಂದಾಗಿ ಗೂಡ್ ಶೆಡ್ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ವಿಧಿಸಿದ್ದ ನಿರ್ಬಂಧವನ್ನು ಸಂಚಾರ ಪೊಲೀಸ್ ಇಲಾಖೆ ತೆರವುಗೊಳಿಸಿದೆ.

ಮೈಸೂರು ರಸ್ತೆಯ ಬಿಜಿಎಸ್ ಮೇಲ್ಸೇತುವೆಯ ಎನ್‌.ಆರ್.ರಸ್ತೆ ಡೌನ್ ರ‌್ಯಾಂಪ್ ವೈಟ್ ಟಾಪಿಂಗ್ ಕಾಮಗಾರಿ ಮುಗಿಯುವವರೆಗೂ ಗೂಡ್ಸ್ ಶೆಡ್ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಅಲ್ಲಿನ ಕಾಮಗಾರಿ ಪೂರ್ಣಗೊಂಡ ನಂತರ ಮತ್ತೊಮ್ಮೆ ಗೂಡ್ಸ್ ಶೆಡ್ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಿ ವೈಟ್ ಟಾಪಿಂಗ್ ಕಾಮಗಾರಿಗೆ ನಡೆಸಲು ಅವಕಾಶ ಕೊಡಲಾಗುತ್ತದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ. ಬಿ. ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

ಬಿಬಿಎಂಪಿ ವತಿಯಿಂದ ಗೂಡ್ಸ್ ಶೆಡ್ (ಡಾ.ಟಿಸಿಎಂ ರಾಯನ್ ರಸ್ತೆ ಒಳಗೊಂಡಂತೆ) ರಸ್ತೆಯಲ್ಲಿ ವೈಟ್ ಟಾಪಿಂಗ್ ಪ್ರಯುಕ್ತ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲು ಆದೇಶಿಸಲಾಗಿತ್ತು. ಸಂಚಾರ ನಿರ್ಬಂಧಕ್ಕೆ ಬಿಬಿಎಂಪಿ ಮುಖ್ಯ ಇಂಜಿನಿಯರ್, ಬಿಜಿಎಸ್ ಮೇಲ್ಸೇತುವೆ ಸಮೀಪ ಡೌನ್ ರ‌್ಯಾಂಪ್‌ನಲ್ಲಿ ಮಳೆ ನೀರು ನಿಲ್ಲುವ ಕಾರಣ ಕಾಮಗಾರಿಯನ್ನು ತುರ್ತಾಗಿ ಕೈಗೊಳ್ಳಬೇಕಿದೆ ಎಂದು ಸಂಚಾರ ನಿರ್ಬಂಧಕ್ಕೆ ಮನವಿ ಮಾಡಿದ್ದರು.

ಆ ಪ್ರಕಾರ ಗೂಡ್ಸ್ ಶೆಡ್ ರಸ್ತೆಯಲ್ಲಿ ವಾಹನ ಓಡಾಟಕ್ಕೆ ನಿಷೇಧಿಸಲಾಗಿತ್ತು. ಗೂಡ್ಸ್ ಶೆಡ್ ರಸ್ತೆಗೆ ಬದಲಿಗೆ ಪರ್ಯಾಯ ರಸ್ತೆ ಬಹಳ ಕಿರಿದಾಗಿದೆ. ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಕಾರಣಕ್ಕೆ ಗೂಡ್ಸ್ ಶೆಡ್ ರಸ್ತೆಯಲ್ಲಿ ಸಂಚಾರ ನಿರ್ಬಂಧ ತೆರವುಗೊಳಿಸುವುದು ಅನಿರ್ವಾಯವಾಗಿದೆ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net