

ಶಿವಮೊಗ್ಗ: ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕೆಂಬ ಸಂದೇಶವೇ ಮೂರು ರಾಜ್ಯಗಳ ವಿಧಾನಸಭೆ ಫಲಿತಾಂಶವಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಭಾನುವಾರ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಲ್ಕು ರಾಜ್ಯಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಜತೆಗೆ ಛತ್ತೀಸ್‌ಗಢವನ್ನು ಜನತೆ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಈ ಫಲಿತಾಂಶದಿಂದ ದೇಶದ ಜನತೆಗೆ ದೊಡ್ಡ ಆನಂದ ಆಗಿದೆ ಎಂದರು.
ಕಾಂಗ್ರೆಸ್‌ನವರು ಚುನಾವಣಾ ಪೂರ್ವದಲ್ಲಿ ಐದೂ ರಾಜ್ಯಗಳಲ್ಲಿ ಗೆಲ್ಲುತ್ತೇವೆ ಎಂದಿದ್ದರು. ತೆಲಂಗಾಣ ರಾಜ್ಯದಲ್ಲಿ ನಮ್ಮ ಮುಖ್ಯಮಂತ್ರಿ ಮೇಲಿದ್ದ ಬೇಸರ ಮತ್ತು ಕರ್ನಾಟಕದಲ್ಲಿನ ಗ್ಯಾರಂಟಿ ಮೂಲಕ ಮೋಸದಿಂದ ಕಾಂಗ್ರೆಸ್ ಗೆದ್ದಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೆಲಂಗಾಣವನ್ನು ಗೆಲ್ಲಲು ಆಗಲ್ಲ. ಈಗ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಗೆದ್ದಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶ ಗೆಲ್ಲುತ್ತೇವೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗುತ್ತಾರೆ ಎಂದರು.
ಕರ್ನಾಟಕ ಮಾದರಿಯಲ್ಲಿ ಗ್ಯಾರಂಟಿ ಕೊಡುತ್ತೇವೆ ಅಂದಿದ್ದರು. ಕರ್ನಾಟಕದಲ್ಲಿ ಆರು ತಿಂಗಳಲ್ಲೇ ಗ್ಯಾರಂಟಿ ಭರವಸೆ ವಿಫಲವಾಗಿವೆ. ಮೋದಿ ಅವರನ್ನು ಪ್ರಧಾನಿ ಮಾಡುವ ದಿಕ್ಕಿನಲ್ಲಿ ಈ ಚುನಾವಣಾ ಫಲಿತಾಂಶ ಸ್ಫೂರ್ತಿಯಾಗಿದೆ. ಗ್ಯಾರಂಟಿ ಯೋಜನೆ ಬಗ್ಗೆ ದೇಶದ ಜನರಿಗೆ ಭರವಸೆ ಇಲ್ಲ. ಗ್ಯಾರಂಟಿ ಯೋಜನೆ ಮೂಲಕ ಕಾಂಗ್ರೆಸ್ ಮತದಾರರಿಗೆ ಮೋಸ ಮಾಡಿದೆ ಎಂದು ದೂರಿದರು.