

ಬೆಂಗಳೂರು ವಿದ್ಯಾರ್ಥಿಗಳು ತರಗತಿ ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳು ಎಲ್ಲ ಕಡೆ ಪ್ರಾಮುಖ್ಯತೆ ಪಡೆಯುವುದಿಲ್ಲ. ಆದರೆ, ತಮ್ಮಲ್ಲಿರುವ ಆತ್ಮವಿಶ್ವಾಸ ಮತ್ತು ಕೌಶಲ ಬಹಳ ಮುಖ್ಯವಾಗಲಿದೆ ಎಂದು ಜೈಪುರದ ಮಾಳವೀಯ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ನಿರ್ದೇಶಕ ಹಾಗೂ ಐಐಟಿ ರೂರ್ಕಿ ಪ್ರಾಧ್ಯಾಪಕ ಪ್ರೊ. ನಾರಾಯಣ ಪ್ರಸಾದ್ ಪಧಿ ತಿಳಿಸಿದರು.
ರಾಮಯ್ಯ ತಾಂತ್ರಿಕ ಸಂಸ್ಥೆ (ಆರ್‌ಐಟಿ) 2024-25ನೇ ಸಾಲಿನ ಮೊದಲ ವರ್ಷದ ಇಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ (ಆರ್ಕಿಟೆಕ್) ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಪ್ರೆಷರ್ಸ್ ಡೇ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಅಂಕಗಳು ಲೆಕ್ಕಕ್ಕೆ ಬಾರದಿರಬಹುದು. ಆದರೆ, ಕೈಗಾರಿಕಗಳು ವಿದ್ಯಾರ್ಥಿಗಳನ್ನು ಇಂಟರ್ನ್‌ಶಿಪ್ ಮತ್ತು ಉದ್ಯೋಗಕ್ಕೆ ಪರಿಗಣಿಸುವ ವೇಳೆ ಸಿಜಿಪಿಎ ಅನ್ನು ಪರಿಗಣಿಸುತ್ತಾರೆ. ಆದ್ದರಿಂದ ತಮ್ಮಲ್ಲಿರುವ ಕೌಶಲದ ಜತೆಗೆ ಕನಿಷ್ಠ ಶೇ.7.5 ಸಿಜಿಪಿಎ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ತೊಡಗಿಸಿಕೊಳ್ಳುವ ಜತೆಗೆ ಖಾಸಗಿ ಜೀವನಕ್ಕೂ ಸಮಯ ನೀಡಬೇಕು. ಪಾಲಕರೊಂದಿಗೆ ಪ್ರತಿ ನಿತ್ಯ ಮಾತನಾಡುವುದು, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹಾಗೆಯೇ, ಪಾಲಕರ ಒತ್ತಾಯದ ಮೇರೆಗೆ ಓದಬೇಡಿ. ಇಷ್ಟ ಇಟ್ಟಿಕೊಂಡು ಕಲಿಯಿರಿ. ಒಂದಲ್ಲ ಒಂದು ದಿನ ತಮ್ಮ ಯಶಸ್ಸಿನ ಕತೆಯನ್ನು ಓದುವಂತಾಗಲಿ ಎಂದು ಆಶಿಸಿದರು.
ಗುವಾಹಟಿ ಐಐಟಿ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಹಾಗೂ ರಾಮಯ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಪ್ರೊ. ಕೌಸ್ತುಭ ಮೊಹಂತಿ ಮಾತನಾಡಿ, ತಾವು ಜೀವನದಲ್ಲಿ ಮುಂದೆ ಏನಾಗಬೇಕು ಎಂಬುದನ್ನು 4 ವರ್ಷದ ಪದವಿಯಲ್ಲಿರುವಾಗಲೇ ನಿರ್ಧರಿಸಿ ವ್ಯಾಸಂಗ ಮಾಡಿ. ಅದು ನಾಗರಿಕ ಸೇವೆ, ಸ್‌ಟಾವೇರ್ ಇಂಜಿನಿಯರ್, ಹಣಕಾಸಿ ವಹಿವಾಟು, ಉನ್ನತ ಶಿಕ್ಷಣ ಯಾವುದೇ ಇರಲಿ ಅದರ ಸ್ಪಷ್ಟತೆ ಹೊಂದಿ ಕಲಿಯುವ ಕಡೆ ಗಮನ ನೀಡುವಂತೆ ಸಲಹೆ ನೀಡಿದರು.
ರಾಮಯ್ಯ ಕಾಲೇಜಿನಲ್ಲಿ ಉತ್ತಮ ಶಿಕ್ಷಕರು ಹಾಗೂ ಕೌನ್ಸೆಲಿಂಗ್ ಕೇಂದ್ರವಿದ್ದು, ಭವಿಷ್ಯದ ದಿನಗಳ ಬಗ್ಗೆ ಪಾಲಕರು ಮತ್ತು ಶಿಕ್ಷಕರೊಂದಿಗೆ ಚರ್ಚಿಸಿ ಉತ್ತಮ ನಿರ್ಧಾರ ಕೈಗೊಳ್ಳುವಂತೆ ಕಿವಿಮಾತು ಹೇಳಿದರು.
ಗೋಕುಲ ವಿದ್ಯಾಸಂಸ್ಥೆ ಉಪಾಧ್ಯಕ್ಷ ಡಾ. ಎಂ.ಆರ್. ಸೀತಾರಂ ಮಾತನಾಡಿ, ಗೋಕುಲ ಶಿಕ್ಷಣ ಸಂಸ್ಥೆಯು ಉತ್ತಮ ಗುರಿ ಮತ್ತು ದೂರದೃಷ್ಟಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ನೀವು 63ನೇ ಬ್ಯಾಚಿನ ವಿದ್ಯಾರ್ಥಿಗಳಾಗಿದ್ದೀರಿ. ನಂಬಿಕೆ ಇಟ್ಟು ನಮ್ಮ ಕಾಲೇಜನ್ನು ಆಯ್ಕೆ ಮಾಡಿಕೊಂಡಿರುವ ನಿಮ್ಮ ವಿಶ್ವಾಸವನ್ನು ಉಳಿಸಿಕೊಳ್ಳುವ ಕೆಲಸವನ್ನು ನಮ್ಮ ಸಂಸ್ಥೆ ಮಾಡಲಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ಕಲ್ಪಿಸಲಿದೆ ಎಂಬ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಆರ್‌ಐಟಿ ನಿರ್ದೇಶಕ ಎಂ.ಆರ್. ರಾಮಯ್ಯ, ಮುಖ್ಯ ಕಾರ್ಯನಿರ್ವಾಹಕ ಡಾ.ಎಚ್.ವಿ. ಪಾರ್ಶ್ವನಾಥ್, ಮುಖ್ಯ ಶೈಕ್ಷಣಿಕ ಸಲಹೆಗಾರ ಡಾ. ಕರಿಸಿದ್ಧಪ್ಪ ಮತ್ತು ಪ್ರಾಂಶುಪಾಲ ಡಾ. ಎನ್‌ವಿಆರ್ ನಾಯ್ಡು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಲ್ಲಿರುವ ಕೌಶಲ ಕೊರತೆಯಿಂದಾಗಿ ಇಂಜಿನಿಯರಿಂಗ್ ಪದವೀಧರರಲ್ಲಿ ಶೇ.10 ಮಂದಿಗೆ ಮಾತ್ರ ಉದ್ಯೋಗ ಪಡೆಯುತ್ತಿದ್ದಾರೆ. ಉಳಿದವರು ನಿರುದ್ಯೋಗಿಗಳಾಗುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮತ್ತು ಕೈಗಾರಿಕೆಗಳ ಇಂಟರ್ನ್‌ಶಿಪ್ ಅನ್ನು ಸವಾಲಾಗಿ ಸ್ವೀಕರಿಸಬೇಕು. ನಮ್ಮಲ್ಲಿನ ಕೌಶಲ ಕೇಂದ್ರವು ಗುಣಮಟ್ಟದ ಶಿಕ್ಷಣ ನೀಡಲಿದೆ. - ಡಾ. ಎಂ.ಆರ್. ಜಯರಾಂ, ಗೋಕುಲ ಶಿಕ್ಷಣ ಸಂಸ್ಥೆ ಅಧ್ಯಕ್ಷ