ಇದು ಕಡೆಯ ಮೇಯರ್ ಚುನಾವಣೆ..!

mcc
Published on
  • ಸಕಾಲದಲ್ಲಿ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಒಂದು ಅವಧಿ ಕಡಿತ
  • 2023 ನವೆಂಬರ್‌ಗೆ ಪಾಲಿಕೆ ಕೌನ್ಸಿಲ್ ಅಧಿಕಾರಾವಧಿ ಅಂತ್ಯ

ಸದೇಶ್ ಕಾರ್ಮಾಡ್ ಮೈಸೂರು
ನಗರ ಪಾಲಿಕೆಯಲ್ಲಿ ಪ್ರತಿ ವರ್ಷಕ್ಕೊಂದು ಹೊಸ ಮೇಯರ್ ಹಾಗೂ ಉಪ ಮೇಯರ್ ಚುನಾಯಿತರಾಗಬೇಕು. 5 ವರ್ಷದ ಅಧಿಕಾರಾವಧಿಯಲ್ಲಿ ತಲಾ 5 ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಾಗಬೇಕು. ಆದರೆ, ಮೀಸಲಾತಿ ಪ್ರಕಟಿಸಲು ಸರ್ಕಾರ ವಿಳಂಬ ನೀತಿ ಅನುಸರಿಸಿದ ಪರಿಣಾಮ ಈ ಬಾರಿ ಒಂದು ಅವಧಿಯ ಮೇಯರ್ ಮತ್ತು ಉಪ ಮೇಯರ್ ಅಧಿಕಾರಾವಧಿ ಕಡಿತಗೊ ಳ್ಳಲಿದ್ದು, 5 ಅವಧಿಯ ಬದಲು ನಾಲ್ಕು ಅವಧಿಗೆ ಮಾತ್ರ ಸೀಮಿತಗೊಳ್ಳಲಿದೆ.

ನಗರ ಪಾಲಿಕೆಯ 65 ವಾರ್ಡ್‌ಗಳಿಗೆ 31 ಆಗಸ್ಟ್ 2018 ರಂದು ಚುನಾವಣೆ ನಡೆಯಿತು. ನಂತರ ನ.17 ರಂದು ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಅದೇ ದಿನ ಪಾಲಿಕೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಹಾಗಾಗಿ ಈ ಬಾರಿಯ ಕೌನ್ಸಿಲ್‌ನ ಅಧಿಕಾರಾವಧಿ ನ.16ಕ್ಕೆ ಮುಕ್ತಾಯಗೊಳ್ಳಲಿದೆ.
ನಾಲ್ಕನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸೆ.6 ರಂದು ಚುನಾವಣೆ ನಿಗದಿ ಪಡಿಸಿ ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ಆದೇಶ ಹೊರಡಿಸಿದ್ದಾರೆ. ಈ ನಾಲ್ಕನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಅಧಿಕಾರಾವಧಿ 5 ಸೆಪ್ಟೆಂಬರ್ 2023 ರಂದು ಅಂತ್ಯಗೊಳ್ಳಲಿದೆ. ನಂತರ ಕೌನ್ಸಿಲ್ ಅವಧಿ ಉಳಿಯುವುದು ಒಂದೂವರೆ ತಿಂಗಳು ಮಾತ್ರ. ಒಂದೂವರೆ ತಿಂಗಳ ಅವಧಿಗೋಸ್ಕರ ಮೀಸಲಾತಿ ಪ್ರಕಟಿಸಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯನ್ನು ಸರ್ಕಾರ ನಡೆಸುವುದಿಲ್ಲ. ಹಾಗಾಗಿ ಈ ಬಾರಿ ನಾಲ್ಕು ಅವಧಿಗೆ ಮಾತ್ರ ಮೇಯರ್, ಉಪ ಮೇಯರ್ ಸ್ಥಾನ ಸೀಮಿತಗೊಳ್ಳುವುದು ಖಚಿತ. ಕಾಲ ಕಾಲಕ್ಕೆ ಸರಿಯಾಗಿ ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸಿದ್ದರೆ 5 ಅವಧಿಗೂ ನೂತನ ಮೇಯರ್, ಉಪ ಮೇಯರ್ ಆಯ್ಕೆಗೊಳ್ಳುತ್ತಿದ್ದರು.

ಪುಷ್ಪಲತಾ ಜಗನ್ನಾಥ್
ಪುಷ್ಪಲತಾ ಜಗನ್ನಾಥ್

ಮೇಯರ್, ಉಪ ಮೇಯರ್ ವಿವರ:
ಪಾಲಿಕೆಯ ಮೊದಲ ಅವಧಿಯ ಮೇಯರ್ ಚುನಾವಣೆ 17 ನವೆಂಬರ್ 2018 ರಂದು ನಡೆಯಿತು. ಕಾಂಗ್ರೆಸ್‌ನ ಪುಷ್ಪಲತಾ ಜಗನ್ನಾಥ್ ಮೇಯರ್ ಆಗಿ, ಜೆಡಿಎಸ್‌ನ ಶಫಿ ಅಹ್ಮದ್ ಉಪ ಮೇಯರ್ ಆಗಿ ಆಯ್ಕೆಗೊಂಡರು. ಎರಡನೇ ಅವಧಿಗೆ 18 ಜನವರಿ 2020 ರಂದು ಚುನಾವಣೆ ನಡೆದು ಜೆಡಿಎಸ್‌ನ ತಸ್ನಿಂ ಮೇಯರ್ ಅಗಿ, ಕಾಂಗ್ರೆಸ್‌ನ ಸಿ. ಶ್ರೀಧರ್ ಉಪ ಮೇಯರ್ ಆಗಿ ಆಯ್ಕೆಗೊ ಂಡರು. 3ನೇ ಅವಧಿಗೆ 24 ಫೆಬ್ರವರಿ 2021 ರಂದು ಚುನಾವಣೆ ನಡೆದು ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ, ಕಾಂಗ್ರೆಸ್‌ನ ಅನ್ವರ್ ಬೇಗ್ ಉಪ ಮೇಯರ್ ಆಗಿ ಆಯ್ಕೆಗೊಂಡರು. 2ನೇ ಅವಧಿಯ ಚುನಾವಣೆಯನ್ನು ನಾಲ್ಕು ತಿಂಗಳು ತಡವಾಗಿ, 3ನೇ ಅವಧಿ ಚುನಾವಣೆಯನ್ನು ಒಂದು ತಿಂಗಳು ತಡವಾಗಿ ಹಾಗೂ 4ನೇ ಅವಧಿ ಚುನಾವಣೆಯನ್ನು ಆರು ತಿಂಗಳು ತಡವಾಗಿ ನಡೆಸುತ್ತಿರುವ ಪರಿಣಾಮ 5ನೇ ಅವಧಿಯ ಮೇಯರ್, ಉಪ ಮೇಯರ್ ಚುನಾವಣೆ ಬರುವಷ್ಟರೊಳಗೆ ಪಾಲಿಕೆಗೆ ಚುನಾವಣೆ ಎದುರಾಗಲಿದೆ.

ಸುನಂದಾ ಪಾಲನೇತ್ರ
ಸುನಂದಾ ಪಾಲನೇತ್ರ

5 ಮೇಯರ್, 4 ಉಪ ಮೇಯರ್:
ಈ ಬಾರಿ ನಾಲ್ಕು ಅವಧಿಗೆ ಮಾತ್ರ ಚುನಾವಣೆ ನಡೆದರೂ ಒಟ್ಟು 5 ಮೇಯರ್ ಹಾಗೂ 4 ಉಪ ಮೇಯರ್‌ಗಳನ್ನು ಪಾಲಿಕೆ ಕಾಣಲಿದೆ. 3ನೇ ಅವಧಿಯಲ್ಲಿ ಮೇಯರ್ ಆದ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ಮಾಹಿತಿ ಮರೆಮಾಚಿದ ಹಿನ್ನೆಲೆಯಲ್ಲಿ ಅವರ ಸದಸ್ಯತ್ವವನ್ನು ಹೈಕೋರ್ಟ್ ಅನರ್ಹಗೊಳಿಸಿತು. ಹೀಗಾಗಿ ಮೇಯರ್ ಸ್ಥಾನಕ್ಕೆ 25 ಆಗಸ್ಟ್ 2021 ರಂದು ಚುನಾವಣೆ ನಡೆದು ಬಿಜೆಪಿಯ ಸುನಂದಾ ಪಾಲನೇತ್ರ ಮೇಯರ್ ಆಗಿ ಆಯ್ಕೆಗೊಂಡರು. 3ನೇ ಅವಧಿಯಲ್ಲಿ ಪಾಲಿಕೆ ಇಬ್ಬರು ಮೇಯರ್‌ಅನ್ನು ಕಂಡಿತು. ಹೀಗಾಗಿ ಈ ಬಾರಿ ಆಯ್ಕೆಯಾಗಲಿರುವ ಮೇಯರ್ ಸೇರಿದಂತೆ ಒಟ್ಟು 5 ಮೇಯರ್‌ಗಳನ್ನು ಪಾಲಿಕೆ ಕಾಣಲಿದೆ.

ಎಲ್ಲರಿಗೂ ಮೇಯರ್ ಸ್ಥಾನದ ಮೇಲೆ ಕಣ್ಣು…!
ಇದೇ ಕೊನೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಾಗಿರುವ ಹಿನ್ನೆಲೆಯಲ್ಲಿ ಮೇಯರ್ ಸ್ಥಾನಕ್ಕೆ ಈ ಬಾರಿ ಭಾರಿ ಪೈಪೋಟಿ ಎದುರಾಗಲಿದೆ. ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಹಿನ್ನೆಲೆಯಲ್ಲಿ ಮೈತ್ರಿ ಅನಿವಾರ್ಯವಾಗಿದೆ. ಆದರೆ, ಕಾಂಗ್ರೆಸ್‌ನೊಂದಿಗೆ ಮೈತ್ರಿ ಇಲ್ಲ ಎಂದು ಶಾಸಕ ಸಾ.ರಾ. ಮಹೇಶ್ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ ಕಾಂಗ್ರೆಸ್ ಸಹ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಮೇಯರ್ ಸ್ಥಾನವನ್ನು ಬಿಟ್ಟುಕೊಟ್ಟರೆ ಮಾತ್ರ ಕಾಂಗ್ರೆಸ್ ಜೆಡಿಎಸ್‌ನೊ ಂದಿಗೆ ಮೈತ್ರಿ ಸಾಧಿಸುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಸಾಧ್ಯತೆ ಹೆಚ್ಚಾಗಿದೆ.

ಕಳೆದ ಬಾರಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಏರ್ಪಡದೆ ಇದ್ದರೂ ಬಿಜೆಪಿ ಮೇಯರ್ ಆಗಲು ಜೆಡಿಎಸ್ ಪರೋಕ್ಷವಾಗಿ ಸಹಕಾರ ನೀಡಿತ್ತು. ಹೀಗಾಗಿ ಪಾಲಿಕೆ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಮೇಯರ್ ಸ್ಥಾನ ಅಲಂಕರಿಸಿತು. ಹಾಗಾಗಿ ಈ ಬಾರಿ ಮೇಯರ್ ಸ್ಥಾನವನ್ನು ನಮಗೆ ಬಿಟ್ಟುಕೊಡಬೇಕು ಎಂಬುದು ಜೆಡಿಎಸ್ ಸದಸ್ಯರ ಬೇಡಿಕೆಯಾಗಿದೆ. ಆದರೆ, ಕಳೆದ ಬಾರಿ ಅಧಿಕೃತವಾಗಿ ಮೈತ್ರಿ ಏರ್ಪಡದೆ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಿ ಮೇಯರ್ ಸ್ಥಾನ ಪಡೆದಿದ್ದು, ಈ ಬಾರಿಯೂ ಅದೇ ರೀತಿ ಸ್ವತಂತ್ರವಾಗಿ ಸ್ಪರ್ಧಿಸಿ ಮೇಯರ್ ಸ್ಥಾನ ಪಡೆಯಬೇಕು ಎಂಬುದು ಬಿಜೆಪಿ ಸದಸ್ಯರ ಲೆಕ್ಕಾಚಾರವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಅಭಿಪ್ರಾಯಕ್ಕೆ ಪಕ್ಷದ ವರಿಷ್ಠರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net