‘ಬೆಲೆ ಏರಿಕೆ ನಿಶ್ಚಿತ, ಖಚಿತ’ ಇದು ಕಾಂಗ್ರೆಸ್‌ನ 6ನೇ ಗ್ಯಾರಂಟಿ

Published on

ಪಾಂಡವಪುರ : ಬೆಲೆ ಏರಿಕೆ ನಿಶ್ಚಿತ ಮತ್ತು ಖಚಿತ ಇದು ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ನೀಡಿರುವ 6ನೇ ಗ್ಯಾರಂಟಿಯಾಗಿದ್ದು, ಬಿತ್ತನೆ ಬೀಜಗಳ ಬೆಲೆ ಏರಿಸುವ ಮೂಲಕ ರೈತರಿಗೆ ದ್ರೋಹ ಬಗೆಯುತ್ತಿದೆ ಎಂದು ಬಿಜೆಪಿ ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ.ಆರ್.ಕುಮಾರಸ್ವಾಮಿ ಟೀಕಿಸಿದರು.

ರಾಜ್ಯದ ಜನತೆಗೆ ಉಚಿತ ಗ್ಯಾರಂಟಿಗಳ ಆಮಿಷ ಒಡ್ಡಿ ಅಧಿಕಾರಿಕ್ಕೆ ಬಂದ ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲು ಹೊರಟಿದೆ. ಇದರ ಜತೆಗೆ ಭತ್ತ, ರಾಗಿ, ತೊಗರಿ ಮತ್ತು ಜೋಳ ಮುಂತಾದ ಬಿತ್ತನೆ ಬೀಜಗಳ ದರವನ್ನು ದುಬಾರಿಗೊಳಿಸಿ ರೈತರನ್ನು ಆತ್ಮಹತ್ಯೆದೆಡೆಗೆ ದೂಡುತ್ತಿದೆ. ಇದರಿಂದ ಸಣ್ಣ ರೈತರು ನಿರ್ಣಾಮವಾಗಿ, ರಾಜ್ಯದ ಆಹಾರ ಭದ್ರತೆಗೆ ಧಕ್ಕೆಯಾಗುತ್ತದೆ. ಬರದಿಂದ ಕಂಗೆಟ್ಟ ರೈತರು ಬೆಲೆ ಏರಿಕೆಯಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ನೀಡಿದ್ದ ಕಿಸಾನ್ ಸಮ್ಮಾನ್ ಯೋಜನೆಗೂ ಕತ್ತರಿ ಹಾಕಿದ್ದ ಸರ್ಕಾರ ಈಗ ಬಿತ್ತನೆ ಬೀಜದ ಹೆಸರಿನಲ್ಲಿ ರೈತರನ್ನು ಲೂಟಿ ಮಾಡಲು ಹೊರಟಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಎಂ.ಆರ್.ಕುಮಾರಸ್ವಾಮಿ, ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ
ಎಂ.ಆರ್.ಕುಮಾರಸ್ವಾಮಿ, ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ

ಬರಪರಿಹಾರ ವಿತರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಸರ್ಕಾರದ ನಿರ್ಧಾರದಿಂದ ರೈತರು ಸಾಲ ಮಾಡಿ ವ್ಯವಸಾಯ ಮಾಡುವ ಪರಿಸ್ಥಿತಿಗೆ ತಲುಪಿದ್ದಾರೆ. ಮುಂಗಾರಿನ ಬಿತ್ತನೆಗೆ ಅನುಕೂಲವಾಗುವಂತೆ ಬಿತ್ತನೆ ಬೀಜದ ದರ ನಿಗದಿಪಡಿಸಬೇಕು. ಹತ್ತಾರು ಎಕರೆಗೆ ಬಿತ್ತನೆ ಬೀಜ ಖರೀದಿಸಲು ಮುಂದಾದರೆ ಸಾವಿರಾರು ರೂ. ಸಾಲ ಮಾಡಿ ಹೊರೆಯಾಗಿ ರೈತ ವ್ಯವಸಾಯದಿಂದಲೇ ವಿಮುಖನಾಗುತ್ತಾನೆ. ಅದರಲ್ಲೂ ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಾದ ತೊಗರಿ, ಹೆಸರು, ಜೋಳದ ಬಿತ್ತನೆ ಬೀಜದ ಬೆಲೆ ಹೆಚ್ಚಿಸಲಾಗಿದೆ. ಸರ್ಕಾರದ ಬೆಲೆ ಏರಿಕೆ ನಿರ್ಧಾರದಿಂದ ಒಟ್ಟಾರೆ ರೈತ ಕುಲ ಸಂಕಷ್ಟ ಸಿಲುಕಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳ ಕೃಷಿ ಇಲಾಖೆ ಮುಂದೆ ರೈತರ ಪರವಾಗಿ ಪ್ರತಿಭಟನೆ ನಡೆಸಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net