

ತುಮಕೂರು ಸ್ಮಾರ್ಟ್ಸಿಟಿಯಲ್ಲಿ ಅವಾಂತರ | ಬಗೆಹರಿಯದ ಸಮಸ್ಯೆಯಿಂದ ಸಂಕಷ್ಟ
ಮೂರ್ತಿ ಟಿ.ಸಿ.ಎಸ್. ತಿಪಟೂರು
ನಗರದ ಹಾಲ್ಕುರಿಕೆ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ನಂತರದ ಬಾಲಕರ ವಿದ್ಯಾರ್ಥಿನಿಲಯ ಅವ್ಯವಸ್ಥೆಯ ಆಗರವಾಗಿದೆ. ಅಡುಗೆ ಕೋಣೆೆ, ಉಗ್ರಾಣ, ವಿದ್ಯಾರ್ಥಿಗಳು ಮಲಗುವ ಕೊಠಡಿ, ಶೌಚಗೃಹ ದುಸ್ಥಿತಿಯಲ್ಲಿದ್ದು, ದಿನಸಿ ಶೇಖರಿಸಿಡುವ ಉಗ್ರಾಣದೆಲ್ಲೆಡೆ ಇಲಿಗಳ ತ್ಯಾಜ್ಯ ರಾರಾಜಿಸುತ್ತಿದೆ.
ವಿದ್ಯಾರ್ಥಿಗಳಿಗೆ ಮಲಗಲು ಹಾಸಿಗೆ ಮತ್ತು ಹೊದಿಕೆ ಕೊಟ್ಟು 3 ವರ್ಷಗಳಾಗಿವೆ. ಕಳೆದ ವರ್ಷ ನಗರಸಭೆ, ಎಸ್ಸಿಪಿ-, ಟಿಎಸ್ಪಿ ಅನುದಾನದಡಿ ಕೊಟ್ಟ ಹಾಸಿಗೆ, -ದಿಂಬುಗಳು ಕಳಪೆಯಾಗಿವೆ. ರಾತ್ರಿ ತಂದಿಟ್ಟ ಊಟ ಮರುದಿನ ಮಧ್ಯಾಹ್ನವಾದರೂ ಹಾಸಿಗೆ ಮೇಲೆಯೇ ಇರುತ್ತದೆ. ಕೈ ತೊಳೆಯುವ ಸಿಂಕ್ ಸಹ ಬಂದ್ ಆಗಿ ಅದೆಷ್ಟೋ ಕಾಲವಾಯಿತೋ ಏನೋ... ಇನ್ನು ಉಗ್ರಾಣದ ನಾಮಫಲಕ ಹೆಸರಿಗಷ್ಟೇ ಸೀಮಿತವಾಗಿದ್ದು, ಒಳಗಡೆ ಅಕ್ಕಿ ಚೀಲಗಳ ಜತೆ ಕಬ್ಬಿಣ, ಪೈಪುಗಳು, ಹುಲ್ಲು ಕತ್ತರಿಸುವ ಯಂತ್ರ, ಹಾರೆ, ಗುದ್ದಲಿ, ಪಿಕಾಸಿ ಸೇರಿ ಎಲ್ಲ ತರಹದ ವಸ್ತುಗಳನ್ನು ಇಡಲಾಗಿದ್ದು, ಇಲಿ, ಹೆಗ್ಗಣಗಳ ತಾಣವಾಗಿದೆ. ಮೇಲ್ಛಾವಣಿಯಿಂದ ಉದುರುತ್ತಿರುವ ಸಿಮೆಂಟ್ ಸಹ ಕೊಠಡಿಯೊಳಗಿದ್ದು, ಅಚ್ಚುಕಟ್ಟಾಗಿಟ್ಟುಕೊಳ್ಳಬೇಕಿದ್ದ ಆಹಾರ ಪದಾರ್ಥದ ಉಗ್ರಾಣ ಗುಜರಿ ಸ್ಥಳದಂತಾಗಿದೆ.
ಕಂಬ ಕಿತ್ತಿದ್ದ ದೃಶ್ಯ ವೈರಲ್!
ಹಾಸ್ಟೆಲ್ ವಿದ್ಯಾರ್ಥಿಗಳು, ನಿಲಯದ ಅಂಗಳದಲ್ಲಿದ್ದ ಸಿಮೆಂಟ್ ಕಂಬವನ್ನು ತೆರವುಗೊಳಿಸುತ್ತಿರುವ ದೃಶ್ಯ ಭಾನುವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದಕ್ಕೆ ಸ್ಪಷ್ಟೀಕರಣ ನೀಡಿರುವ ವಿದ್ಯಾರ್ಥಿಗಳು, ನಿಯಮಾನುಸಾರ, ಪ್ರತಿ ಶನಿವಾರ ಶ್ರಮದಾನ ಮಾಡುವ ಅವಕಾಶವಿದೆ. ಆವರಣದಲ್ಲಿನ ಸಿಮೆಂಟ್ ಕಂಬದಲ್ಲಿದ್ದ ಕಬ್ಬಿಣದ ಕಂಬಿ ತಾಕಿ ಕೆಲವರಿಗೆ ಗಾಯವಾದ ಕಾರಣ ಎಲ್ಲರೂ ಸೇರಿ ಕಂಬ ತೆರವುಗೊಳಿಸಿದ್ದೇವೆ. ಆದರೆ ಐಟಿಐ ವಿದ್ಯಾರ್ಥಿಯೊಬ್ಬ ದುರುದ್ದೇಶದಿಂದ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ದೃಶ್ಯ ಲೀಕ್ ಆಗಿರುವ ಹಿಂದೆ ಯಾರದ್ದೊ ಕೈವಾಡವಿದೆ ಎಂದು ಕಂಬ ಕಿತ್ತಿದ್ದ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಕೆಲ ಹಿರಿಯ ವಿದ್ಯಾರ್ಥಿಗಳು ಮದ್ಯ ಸೇವಿಸಿ, ಇತರ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸರಿಪಡಿಸಲು ಯಾರೋಬ್ಬರೂ ಮುಂದಾಗುತ್ತಿಲ್ಲ. ತಿಪಟೂರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ತ್ರಿವೇಣಿ ಈ ಬಗ್ಗೆ ಗಮನಹರಿಸುತ್ತಿಲ್ಲ.
ಸರ್ಕಾರ ಮತ್ತು ನಗರಸಭೆ ನಿಯಮಾನುಸಾರ ಯುಜಿಡಿ ಸೌಲಭ್ಯ ಹೊಂದುವುದು ಕಡ್ಡಾಯ. ಇಲ್ಲವಾದಲ್ಲಿ ತ್ಯಾಜ್ಯ ನೀರು ಹರಿಯುವ ಪೈಪುಗಳಿಗೆ ಗಟ್ಟ ಹೊಡೆಯಲಾಗುವುದು ಎಂದು ಎಚ್ಚರಿಸಲಾಗುತ್ತಿದೆ. ಆದರೆ ಸರ್ಕಾರದ ಭಾಗವೇ ಆಗಿರುವ ಇಲಾಖೆಯ ವಸತಿ ನಿಲಯದಲ್ಲಿ ಇಲ್ಲಿವರೆಗೂ ಯುಜಿಡಿ ಸಂಪರ್ಕ ಇಲ್ಲ. ಇಲ್ಲಿನ ಶೌಚಗೃಹ ಗಬ್ಬು ನಾರುತ್ತಿವೆ. ವಸತಿ ನಿಲಯದ ಸುಧಾರಣೆಗೆ ಮುಂದಾದರೆ, ಈ ಹಿಂದಿನ ಕೆಲ ಸಿಬ್ಬಂದಿ ದುರುದ್ದೇಶದಿಂದ ಕಿರುಕುಳ ನೀಡುತ್ತಿದ್ದಾರೆ.
| ಜಿ.ಬಿ.ಮಂಜುನಾಥ್ ವಾರ್ಡನ್, ತಿಪಟೂರು
ಸಹಕಾರ ಸಿಗುತ್ತಿಲ್ಲ
ವಾರ್ಡನ್ ಜಿ.ಆರ್.ಮಂಜುನಾಥ್, 3 ತಿಂಗಳ ಹಿಂದಷ್ಟೇ ನಿಯೋಜನೆಗೊಂಡಿದ್ದು, ಬರುವುದಕ್ಕೂ ಮುಂಚೆ ಶಾರ್ಟ್ ಸಕ್ಯೂರ್ಟ್ ಆಗಿ ಇಡೀ ಕಟ್ಟಡದಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ನಾನು ನಿಯೋಜನೆಗೊಂಡ ಬಳಿಕ ಬದಲಿ ವಿದ್ಯುತ್ ಲೈನ್ ಮಾಡಿಸಿದೆ ಎನ್ನುವ ಮಂಜುನಾಥ್ಗೆ, ನಿಲಯದಲ್ಲಿನ ಅವ್ಯವಸ್ಥೆ ಸರಿಪಡಿಸುವ ಹುಮ್ಮಸ್ಸಿದೆಯಾದರೂ ಅಗತ್ಯ ಸಹಕಾರ ಸಿಗುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಸಿಬ್ಬಂದಿ ಕೊರತೆ
ಸದ್ಯ, ಇಲ್ಲಿ ಪೋಸ್ಟ್ ಮೆಟ್ರಿಕ್ನ 103 ವಿದ್ಯಾರ್ಥಿಗಳು ಹಾಗೂ ಪ್ರಿ ಮೆಟ್ರಿಕ್ನ 43 ವಿದ್ಯಾರ್ಥಿಗಳು ದಾಖಲಾಗಿದ್ದು, ದಾಖಲಾತಿ ಮುಂದುವರಿದಿದೆ. ವಾರ್ಡನ್, ಸಹಾಯಕ ವಾರ್ಡನ್, ಅಡುಗೆ ಸಿಬ್ಬಂದಿ ಮತ್ತು ಅಡುಗೆ ಸಹಾಯಕ ಸಿಬ್ಬಂದಿ, ಕಾವಲುಗಾರ ಸೇರಿ ಒಟ್ಟು 8 ಮಂದಿ ಸಿಬ್ಬಂದಿ ಇರಬೇಕಾದ ಕಡೆ ಕೇವಲ ಒಬ್ಬ ವಾರ್ಡನ್ ಮತ್ತು ಕಾವಲುಗಾರ ಕಾರ್ಯನಿರ್ವಹಿಸುತ್ತಿದ್ದು, ಅಡುಗೆ ತಯಾರಿಗೆ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲಾಗಿದೆ.
ತಿಪಟೂರು ವಸತಿ ನಿಲಯದ ನವೀಕರಣಕ್ಕೆ 30 ಲಕ್ಷ ರೂಪಾಯಿ ಅಂದಾಜು ವೆಚ್ಚ ಪಟ್ಟಿ ಸಿದ್ಧವಾಗಿದೆ. ಉಪವಿಭಾಗಾಧಿಕಾರಿಗಳು ಸ್ಥಳ ಪರಿಶೀಲಿಸಿ ಅನುಮೋದನೆ ನೀಡಿದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಯುಜಿಡಿ ಸಂಪರ್ಕ ಅನುದಾನದ ಕೊರತೆಯಿಂದ ವಿಳಂಬವಾಗಿತ್ತು. ಈ ಬಾರಿ ನವೀಕರಣ ಕಾಮಗಾರಿಯಲ್ಲಿ ಅದನ್ನೂ ಸೇರಿಸಲಾಗುವುದು.
| ತ್ರಿವೇಣಿ ಸಹಾಯಕ ನಿರ್ದೇಶಕಿತಾಲೂಕು ಸಮಾಜ ಕಲ್ಯಾಣ ಇಲಾಖೆ, ತಿಪಟೂರು