ಇದು ಹೆದ್ದಾರಿಯಲ್ಲ ಸಾವಿನ ರಹದಾರಿ!

11 web
Published on

ಪಾವಗಡ&ತುಮಕೂರು ರಸ್ತೆಯಲ್ಲಿ 6 ತಿಂಗಳ ಅಂತರದಲ್ಲಿ 203 ಅಪಘಾತ, 103 ಜನ ಸಾವು!

ಮಾರುತಿ ಪ್ರಸನ್ನಕುಮಾರ್​ ಮಧುಗಿರಿ
ಸರಣಿ ಅಪಘಾತಗಳಿಂದಾಗಿ ತುಮಕೂರು&ಪಾವಗಡ ರಾಜ್ಯ ಹೆದ್ದಾರಿ ಸಾವಿನ ಹೈವೇ ಆಗಿ ಮಾರ್ಪಟ್ಟಿದ್ದು, ಆರು ತಿಂಗಳ ಅಂತರದಲ್ಲಿ 203 ಅಪಘಾತ ಪ್ರಕರಣಗಳು ವರದಿಯಾಗಿವೆ. 103 ಜನ ಜೀವ ತೆತ್ತಿದ್ದಾರೆ.
ಹೌದು, ಪಾವಗಡ&ತುಮಕೂರು ರಸ್ತೆಯಲ್ಲಿ ದಿನನಿತ್ಯ ಅಪಘಾತಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ. ಗಣೇಶ ಹಬ್ಬದ ಮಾರನೇ ದಿನ ಎರಡು ಕಾರುಗಳ ನಡುವಿನ ಭೀಕರ ಅಪಘಾತದಲ್ಲಿ 6 ಜನ ಸ್ಥಳದಲ್ಲೆ ಮೃತಪಟ್ಟಿರುವುದು ರಸ್ತೆಯ ಸುರತೆ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ವರ್ಷದಿಂದ ವರ್ಷಕ್ಕೆ ಇಲ್ಲಿ ಸಾವು ನೋವುಗಳ ಸಂಖ್ಯೆ ಏರುತ್ತಲೇ ಇದೆ. 2024ರ ಜನವರಿಯಿಂದ ಆಗಸ್ಟ್​ ಅಂತ್ಯದ ವೇಳೆಗೆ ಈ ರಸ್ತೆಯಲ್ಲಿ ಬರೋಬ್ಬರಿ 203 ಅಪಘಾತ ಪ್ರಕರಣ ವರದಿಯಾಗಿದ್ದು, 103 ಜನ ಮೃತಪಟ್ಟಿದ್ದಾರೆ ಎಂದರೆ ಕಳೆದ 5 ವರ್ಷದಲ್ಲಿ ಇನ್ನೆಷ್ಟು ಸಾವು&ನೋವುಗಳು ಸಂಭವಿಸಿರಬಹುದು ಎಂಬುದು ಊಹೆಗೂ ನಿಲುಕದ್ದಾಗಿದೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡವರೆಷ್ಟೋ ಬಲ್ಲವರಾರು…? ಇನ್ನು ಸಣ್ಣಪುಟ್ಟ ಅಪಘಾತಗಳ ಸಂಖ್ಯೆಲೆಕ್ಕಕ್ಕಿಲ್ಲದಂತಾಗಿದೆ. ಮಧುಗಿರಿ&ಪಾವಗಡ ರಸ್ತೆಯು 97 ಕಿಮೀ ದೂರವನ್ನು ಒಳಗೊಂಡಿದ್ದು, ಈ ಭಾಗದಲ್ಲೆ ಇಷ್ಟೊಂದು ಸರಣಿ ಅಪಘಾತಗಳಾಗಿದ್ದರೆ ಇನ್ನು ಪಾವಗಡ& ಮಳವಳ್ಳಿ ರಸ್ತೆಯು 193 ಕಿಮೀ ದೂರವನ್ನು ಒಳಗೊಂಡಿದ್ದು, ಈ ಭಾಗದಲ್ಲಿ ಇನ್ನೆಷ್ಟು ಅಪಘಾತಗಳಾಗಿವೆಯೋ…?

ಹೋಮದ ಮೊರೆ ಹೋಗಿದ್ದ ಗ್ರಾಮಸ್ಥರು:ಕೆಶಿಪ್​ ರಸ್ತೆಯ ನಿರ್ಮಾಣವಾದ ನಂತರ ಕಸಬಾ ವ್ಯಾಪ್ತಿಯ ಕೆರೆಗಳಪಾಳ್ಯದ ಒಂದೇ ಸ್ಥಳದಲ್ಲಿ 50ಕ್ಕೂ ಹೆಚ್ಚು ಅಪಘಾತ ಸಂಭವಿಸಿ 35 ಜನರ ಸಾವು ಸಂಭವಿಸಿದ್ದ ಹಿನ್ನೆಲೆಯಲ್ಲಿ ಗಾಬರಿಯಾದ ಗ್ರಾಮಸ್ಥರು 2020 ಫೆ.16ರಲ್ಲಿ ಶ್ರೀ ದಂಡಿನಮಾರಮ್ಮ ದೇವಸ್ಥಾನದ ಹಿಂದಿನ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಸುತ್ತಮುತ್ತಲಿನ ಗ್ರಾಮದವರ ನೆರವಿನೊಂದಿಗೆ ಡೋಲು&ತಮಟೆ ವಾದ್ಯಗಳೊಂದಿಗೆ ಸುತ್ತಲಿನ ಆಂಜನೇಯ, ಈಶ್ವರ, ಗುರಿಕಲ್ಲು, ಮರಿಯಮ್ಮ, ಶನಿಮಹಾತ್ಮ ಹಾಗೂ ಶೆಟ್ಟಿಹಳ್ಳಿ ಮಾರಮ್ಮನಿಗೆ ಗ್ರಾಮದ ಬಸ್​ ನಿಲ್ದಾಣದಲ್ಲೆ ವಿಶೇಷ ಪೂಜೆ ನೆರವೇರಿಸಿ ಗ್ರಾಮಸ್ಥರ ಪ್ರಾಣ ಕಾಪಾಡುವಂತೆ ಸತತ 48 ಗಂಟೆಗಳ ಕಾಲ ಭೈರವ ಭೂತ ಹೋಮ ನಡೆಸಿ, ಗ್ರಾಮದಲ್ಲಿ ಹಾದು ಹೋಗಿರುವ ಪ್ರತಿ 10 ಮೀ.ಗೆ ರಸ್ತೆ ಎಲ್ಲ ದಿಕ್ಕುಗಳಲ್ಲೂ ನಿಂಬೆ ಹಣ್ಣು ಮತ್ತು ಮೊಸರನ್ನ ಅರಿಶಿಣ, ಕುಂಕುಮ, ಬೇವಿನ ಸೊಪ್ಪಿನಿಂದ ತೆಂಗಿನಕಾಯಿ ಒಡೆದು ನಿಂಬೆಹಣ್ಣು ಸಿಗಿದು ಶಾಂತಿ ಹೋಮ ಮಾಡಿದ್ದರು. ಕಾಕತಾಳೀಯವೆಂದರೆ ಹೋಮದ ನಂತರ ಗ್ರಾಮದ ಸುತ್ತಮುತ್ತ ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು ಎನ್ನುತ್ತಾರೆ ಗ್ರಾಮಸ್ಥರು.


ಎಲ್ಲೆಲ್ಲಿ ಹಾದು ಹೋಗಿದೆ ರಸ್ತೆ?: ಪಾವಗಡದಿಂದ& ಮಳವಳ್ಳಿವರೆಗೆ ಸುಮಾರು 560 ಕೋಟಿ ರೂ. ವೆಚ್ಚದ ಕರ್ನಾಟಕ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್​) ಅಡಿ 3/33 ರಾಜ್ಯ ಹೆದ್ದಾರಿ ನಿರ್ಮಾಣವಾಗಿದ್ದು, ಅಂತರ ರಾಜ್ಯ ಹಾಗೂ ಅಂತರ ಜಿಲ್ಲೆಯನ್ನು ಬೆಸೆದಿದೆ. ತುಮಕೂರು&ರಾಯದುರ್ಗ ರೈಲ್ವೆ ಯೋಜನೆ ಸಾಗುವ ಮಾರ್ಗದಲ್ಲೆ ಈ ಪಾವಗಡ&ಮಳವಳ್ಳಿ ರಸ್ತೆ ಹಾದು ಹೋಗಲಿದ್ದು, 193.34 ಕಿ.ಮೀ. ಉದ್ದದ ರಸ್ತೆಯು ಪಾವಗಡ& ಮಧುಗಿರಿ& ಕೊರಟಗೆರೆ& ತುಮಕೂರು& ಕುಣಿಗಲ್​& ಮದ್ದೂರು& ಮಳವಳ್ಳಿ ತಲುಪಲಿದೆ. ಆಂಧ್ರದಲ್ಲೂ ಹಾದು ಹೋಗುವ ಈ ರಸ್ತೆ ಪಾವಗಡ&ಮಧುಗಿರಿ 35.98 ಕಿ.ಮೀ., ಮಧುಗಿರಿ&ಕೊರಟಗೆರೆ 20.02 ಕಿ.ಮೀ., ಕೊರಟಗೆರೆ&ತುಮಕೂರು 27.89 ಕಿ.ಮೀ., ತುಮಕೂರು&ಕುಣಿಗಲ್​35.01 ಕಿ.ಮೀ., ಕುಣಿಗಲ್​&ಹುಲಿಯೂರುದುರ್ಗ 21.13 ಕಿ.ಮೀ, ಹುಲಿಯೂರು ದುರ್ಗ&ಮದ್ದೂರು 27.53 ಕಿ.ಮೀ. ಹಾಗೂ ಮದ್ದೂರು&ಮಳವಳ್ಳಿ 22.80 ಕಿ.ಮೀ, ಮಳವಳ್ಳಿ&ಎನ್​ಎಚ್​&209ವರೆಗೆ 0.97 ಕಿ.ಮೀ. ಸೇರಿದಂತೆ ಒಟ್ಟು 193.34 ಕಿ.ಮೀ. ಉದ್ದದ ರಸ್ತೆಯಾಗಿದೆ. ಇದರಲ್ಲಿ 13.7 ಕಿ.ಮೀ. ಉದ್ದದ ರಸ್ತೆ ಆಂಧ್ರಪ್ರದೇಶದಲ್ಲಿ ಹಾದು ಹೋಗಿದೆ. ರಸ್ತೆಯನ್ನು 9 ಮೀಟರ್​ ಅಗಲದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದರಲ್ಲಿ 7 ಮೀಟರ್​ ದ್ವಿಪಥರಸ್ತೆ, ಎರಡೂ ಬದಿಯಲ್ಲಿ ತಲಾ 1 ಮೀ ಶೋಲ್ಡರ್​ ವಿಸ್ತರಣೆ ಒಳಗೊಂಡಿದೆ. ಇದಲ್ಲದೆ 13 ಪ್ರಮುಖ ಮತ್ತು 180 ಸಣ್ಣ ಜಂನ್​, 76 ಸೇತುವೆಗಳು ಮತ್ತು 367 ಚರಂಡಿಗಳನ್ನು ರಸ್ತೆಯು ಒಳಗೊಂಡಿದೆ. 193 ಕಿ.ಮೀ. ಉದ್ದದ ರಸ್ತೆ ಪೈಕಿ 150 ಕಿ.ಮೀ. ಉದ್ದದ ರಸ್ತೆ ತುಮಕೂರು ಜಿಲ್ಲೆಯಲ್ಲಿ ಹಾದು ಹೋದರೆ, 43 ಕಿ.ಮೀ ಉದ್ದದ ರಸ್ತೆ ಮಂಡ್ಯ ಜಿಲ್ಲೆಯಲ್ಲಿ ಹಾದು ಹೋಗಿದೆ.

ಕಾಟಗಾನಹಟ್ಟಿಯಿಂದ ಹರಿಹರ ರೊಪ್ಪ ತಿರುವಿನವರೆಗೂ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ. ವಾಹನಗಳ ಚಾಲನೆ ವೇಳೆ ನಿಯಮ ಪಾಲನೆ ಮಾಡದ ಕಾರಣ ರಸ್ತೆ ಅಪಘಾತಗಳಾಗುತ್ತಿವೆ. ಇನ್ನು ಈ ಭಾಗದಲ್ಲಿ ದ್ವಿಚಕ್ರ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಿದೆ. ಸಂಬಂದಪಟ್ಟವರು ರಸ್ತೆ ಸುರಕ್ಷತಾ ಕ್ರಮ ಅನುಸರಿಸುವ ಮೂಲಕ ಅಪಘಾತಗಳಿಗೆ ಕಡಿವಾಣ ಹಾಕಬೇಕಿದೆ.

ಕಂಸಾನಹಳ್ಳಿ ಸಿದ್ದೇಶ್​ ಮಧುಗಿರಿ

ಪಾವಗಡ&ತುಮಕೂರು ಹೆದ್ದಾರಿ ಸುಗಮ ಸಂಚಾರಕ್ಕೆ ಯೋಗ್ಯವಾಗಿದೆ. ಆದರೆ ಚಾಲಕರು ರಸ್ತೆ ನಿಯಮ ಪಾಲಿಸಬೇಕು. ವಾಹನಗಳನ್ನು ವೇಗವಾಗಿ ಮತ್ತು ಓವರ್​ ಟೆಕ್​ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸುತ್ತಿದ್ದು, ಚಾಲಕರು ಜಾಗೃಕತೆಯಿಂದ ಚಾಲನೆ ಮಾಡಿದಲ್ಲಿ ಅಪಘಾತ ನಿಯಂತ್ರಣ ಸಾಧ್ಯ.

ಎಂ.ಎನ್​.ನರಸಿಂಹಮೂರ್ತಿನಿವೃತ್ತ ಶಿಕ ಮಧುಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net