ಇದು ನನ್ನ ಕೊನೆಯ ನಿಲ್ದಾಣ: ಆಯನೂರು

ayanoor
ಆಯನೂರು ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಹೇಂದ್ರನಾಥ್, ರಿಯಾಜ್ ಅಹಮದ್ ಇದ್ದರು
Published on

ಶಿವಮೊಗ್ಗ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಲು ಪ್ರಯತ್ನಿಸಿ ವಿಫಲರಾಗಿದ್ದ ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್ ಇದೀಗ 19 ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಆ.24ರಂದು ಕೆಪಿಸಿಸಿ ಕಚೇರಿಯಲ್ಲಿ ಕೈ ಹಿಡಿಯಲು ಮುಹೂರ್ತ ಫಿಕ್ಸ್ ಆಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದೆ. ಆದರೆ ಈಗ ಸ್ಥಳೀಯ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಕಾಂಗ್ರೆಸ್ ಸೇರುವ ತೀರ್ಮಾನ ಮಾಡಿದ್ದೇನೆ. ಇದು ನನ್ನ ಕೊನೆಯ ನಿಲ್ದಾಣ. ಭವಿಷ್ಯದಲ್ಲಿ ಕಾಂಗ್ರೆಸ್ ತೊರೆಯುವುದಿಲ್ಲ. ಯಾವ ಕಾರಣಕ್ಕೂ ಬಿಜೆಪಿಗೆ ಮರಳುವ ಮನಸ್ಥಿತಿಯಲ್ಲಿ ನಾನಿಲ್ಲ ಎಂದು ಆಯನೂರು ಘೋಷಿಸಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ನಿರ್ಧಾರವನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ಬಳಿಕ ಕಾಂಗ್ರೆಸ್ ಸೇರಲು ಮುಂದಾಗಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಭೆಯಲ್ಲೂ ನಾನು ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಚರ್ಚೆ ನಡೆದಿದೆ. ನನ್ನೊಂದಿಗೆ ಕೆಲವು ಬೆಂಬಲಿಗರೂ ಬರಲಿದ್ದಾರೆ. ಶಿಕಾರಿಪುರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾಗರಾಜ ಗೌಡ ಹೆಸರು ಪಕ್ಷ ಸೇರ್ಪಡೆಯಾಗುವವರ ಮೊದಲ ಪಟ್ಟಿಯಲ್ಲಿದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಆಸಕ್ತಿ ಹೊಂದಿದ್ದೆ. ಆದರೆ ಸಾಧ್ಯವಾಗಿರಲಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸುವ ಬದಲು ಯಾವುದಾದರೂ ರಾಜಕೀಯ ಪಕ್ಷದಿಂದಲೇ ಕಣಕ್ಕಿಳಿಯಲು ತೀರ್ಮಾನಿಸಿ ಜೆಡಿಎಸ್ ಅಭ್ಯರ್ಥಿಯಾದೆ. ಈಗಲೂ ನನಗೆ ಜೆಡಿಎಸ್ ಮೇಲೆ ಯಾವುದೆ ಬೇಸರವಿಲ್ಲ. ಅಲ್ಲಿ ನನ್ನನ್ನು ಪ್ರೀತಿಯಿಂದ ಕಂಡು ಚುನಾವಣೆಯಲ್ಲಿ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಎಲ್ಲರೂ ಅವಕಾಶವಾದಿಗಳು: ಅವಕಾಶವಾದಿ ರಾಜಕಾರಣ ಎಂಬುದಕ್ಕಿಂತ ರಾಜಕಾರಣವೇ ಒಂದು ಅವಕಾಶ ಎನ್ನುವುದು ಸೂಕ್ತ. ರಾಜಕಾರಣದಲ್ಲಿ ಅವಕಾಶವಾದಿಗಳಲ್ಲ ಎಂದು ಹೇಳಬಹುದಾದ ನಾಲ್ಕು ಹೆಸರುಗಳೂ ಸಿಗುವುದಿಲ್ಲ. ಕೆಲವರು ಬಹಿರಂಗವಾಗಿ ಅವಕಾಶವಾದಿಗಳು ಎನಿಸಿಕೊಂಡರೆ, ಇನ್ನು ಕೆಲವರು ಆಂತರಿಕವಾಗಿ ಅವಕಾಶವಾದಿಗಳಾಗಿರುತ್ತಾರೆ ಎಂದು ತಮ್ಮ ರಾಜಕೀಯ ಹಾದಿಯನ್ನು ಆಯನೂರು ಸಮರ್ಥಿಸಿಕೊಂಡರು. ನಾನು ಯಾವುದೇ ಷರತ್ತಿನ ಮೇಲೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿಲ್ಲ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸುತ್ತೇನೆ ಎಂದರು.
ಯೋಗೇಶ್‌ಗೆ ಪರೋಕ್ಷ ಟಾಂಗ್:ನಾನು ಕಾಂಗ್ರೆಸ್ ಸೇರುತ್ತಿರುವುದನ್ನು ಕೆಲವರು ವಿರೋಧಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಭಟನೆಯನ್ನೂ ಮಾಡಿದ್ದಾರೆ. ಅಲ್ಲಿದ್ದವರು 10 ಮಂದಿ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಶೇ.99 ಮಂದಿ ನನ್ನನ್ನು ಸ್ವಾಗತಿಸಿದ್ದಾರೆ. ಎಚ್.ಸಿ.ಯೋಗೇಶ್ ಇನ್ನೂ ಯುವಕ. ಅವರಿಗೆ ಮುಂದೆ ಇನ್ನಷ್ಟು ಅವಕಾಶ ಸಿಗುತ್ತದೆ. ವಿಧಾನಸಭೆ ಚುನಾವಣೆ ಸೋಲಿನಿಂದ ಅವರು ವಿಚಲಿತರಾದಂತಿದೆ. 2018ರಲ್ಲಿ ಕೆ.ಬಿ.ಪ್ರಸನ್ನಕುಮಾರ್‌ಗೆ ಸಿಕ್ಕಿದ್ದಕ್ಕಿಂತ 8 ಸಾವಿರ ಹೆಚ್ಚು ಮತಗಳು ಯೋಗೇಶ್‌ಗೆ ಬಂದವು. ರಾಜ್ಯಾದ್ಯಂತ ಕಾಂಗ್ರೆಸ್ ಅಲೆ, ಗ್ಯಾರಂಟಿ ಘೋಷಣೆ, ಮುಸ್ಲಿಂ, ಕುರುಬ ಸಮುದಾಯದ ಬೆಂಬಲವೂ ಇತ್ತು. ಆದರೂ ಅವರ ಸಾಧನೆ ಕಡಿಮೆಯಾಯಿತು ಎಂದು ಆಯನೂರು ಟಾಂಗ್ ನೀಡಿದರು.
ಜನ ರಿಜೆಕ್ಟ್ ಮಾಡಿಲ್ಲ: ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಜನ ರಿಜೆಕ್ಟ್ ಮಾಡಿದರು ಎಂಬುದನ್ನು ಒಪ್ಪುವುದಿಲ್ಲ. ಮತದಾನಕ್ಕೆ ಮೂರ್ನಾಲ್ಕು ದಿನ ಇರುವಾಗಲೂ ನಾನು ರೇಸ್‌ನಲ್ಲಿ ಮುಂದಿದ್ದೆ. ಕೇರಳ ಸ್ಟೋರಿ ನೋಡಿ ಹಿಂದುಗಳು ಬಿಜೆಪಿಗೆ ಮತ ನೀಡಿದರು. ಅದನ್ನು ನೋಡಿ ಸಿಟ್ಟಾದ ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿದರು. ನಾನು ಎನ್‌ಪಿಎಸ್, ಒಪಿಎಸ್ ಪರವಾಗಿ ಮಾತನಾಡುತ್ತಿದ್ದೆ. ಅದನ್ನೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಯಿತು. ನಾನು ಬಹುವಾಗಿ ನಂಬಿಕೊಂಡಿದ್ದ ಕಾರ್ಮಿಕ ವರ್ಗವೂ ನನ್ನೊಂದಿಗೆ ಸಂಪೂರ್ಣವಾಗಿ ನಿಲ್ಲಲಿಲ್ಲ. ಇದೆಲ್ಲವೂ ನನ್ನ ಹಿನ್ನಡೆಗೆ ಕಾರಣ ಎಂದು ಆಯನೂರು ವಿಶ್ಲೇಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net