

ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜನ ತಿರುಗಿ ಬಿದ್ದಿದ್ದಾರೆ. ಈ ಅಲೆಗೆ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುವುದು ಗ್ಯಾರಂಟಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ವಕ್ಪ್ ಆಸ್ತಿ ಹೆಸರಿನಲ್ಲಿ ನೋಟಿಸ್ ಕೊಟ್ಟಿರುವುದಕ್ಕೆ ರಾಜ್ಯಾದ್ಯಂತ ಜನರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಮುಖ್ಯಮಂತ್ರಿ ಅವರಿಗೆ ತಮ್ಮ ತಪ್ಪಿನ ಅರಿವಾಗಿ ನೋಟಿಸ್ ವಾಪಸ್ ತೆಗೆದುಕೊಳ್ಳಲು ಹೇಳಿದ್ದಾರೆ. ಸರ್ಕಾರ ತಪ್ಪು ಮಾಡದಿದ್ದರೆ ರೈತರಿಗೆ ನೀಡಿದ್ದ ನೋಟಿಸ್ ಯಾಕೆ ವಾಪಸ್ ಪಡೆಯುತ್ತಿದ್ದರು ? ಎಂದು ಪ್ರಶ್ನಿಸಿದರು.
ವಕ್ಪ್ ಸಚಿವ ಜಮೀರ್ ಮುಖ್ಯಮಂತ್ರಿಯವರ ಆದೇಶದ ಮೇರೆಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದಾರೆ. ಡಿಸಿಗಳು ಸಚಿವರ ಆದೇಶದ ಮೇರೆಗೆ ನೋಟಿಸ್ ನೀಡಿರುವುದಾಗಿ ಹೇಳಿದ್ದಾರೆ. ಈಗ ಜನ ತಿರುಗಿ ಬೀಳುತ್ತಾರೆ ಎನ್ನುವುದು ಗೊತ್ತಾದ ತಕ್ಷಣ ಯು ಟರ್ನ್ ಹೊಡೆಯುತ್ತಿದ್ದಾರೆ. ಇದೊಂದು ರೀತಿ ಯು ಟರ್ನ್ ಸರ್ಕಾರ ಎಂದು ಟೀಕಿಸಿದರು.
ಮುಡಾದಲ್ಲಿ ಸೈಟ್ ಪಡೆದು ವಾಪಸ್ ಕೊಡುತ್ತಾರೆ. ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿ ಅದನ್ನು ವಾಪಸ್ ಹಾಕುವುದಾಗಿ ಹೇಳುತ್ತಾರೆ. ಈಗ ವಕ್ಪ್ ವಿಚಾರದಲ್ಲಿ ರೈತರಿಗೆ ನೋಟಿಸ್ ನೀಡಿ, ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನೋಟಿಸ್ ವಾಪಸ್ ಪಡೆಯುತ್ತಾರೆ. ರಾಜ್ಯ ಸರ್ಕಾರ ನಿರಂತರ ಇದೇ ರೀತಿ ಮಾಡುತ್ತ ಬಂದಿದೆ ಎಂದು ವಾಗ್ದಾಳಿ ನಡೆಸಿದರು.