

ಮೈಸೂರು: ಸರ್ಕಾರ ಯಾರನ್ನು ರಕ್ಷಣೆ ಮಾಡುತ್ತಿಲ್ಲ. ಇದೊಂದು ರಾಜಕೀಯ ಸೇಡಿನಿಂದ ಮಾಡಿದ ಪ್ರಕರಣವಾಗಿದ್ದು, ಹಾಗಾಗಿ ಹಿಂಪಡೆಯಲಾಗಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರ ಪ್ರಕರಣವನ್ನು ಸಿಬಿಐನಿಂದ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದರು.
ಎಲ್ಲರ ಒಮ್ಮತದಿಂದ ಸಚಿವ ಸಂಪುಟದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಕಾನೂನಾತ್ಮಕ ವಿಚಾರ. ಅಂದಿನ ಸಿಎಂ ಓರಲ್ ಇನ್ ಸ್ಟ್ರಕ್ಷನ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೇಳಿದ್ದಾರೆ. ಅಂದಿನ ಅಡ್ವಕೇಟ್ ಜನರಲ್ ಅವರ ಅಭಿಪ್ರಾಯ ಪಡೆಯುವುದಕ್ಕೂ ಮುನ್ನ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಅಂದಿನ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಶಾಸಕರಾಗಿದ್ದರು. ಶಾಸಕರ ಮೇಲೆ ತನಿಖೆ ನಡೆಯಬೇಕಾದರೆ ಸ್ಪೀಕರ್ ಅನುಮತಿ ಪಡೆಯಬೇಕು. ಅಡ್ವಕೇಟ್ ಜನರಲ್ ವರದಿ ಕೈ ಸೇರುವ ಮುನ್ನ ಮುಖ್ಯಕಾರ್ಯದರ್ಶಿ ತನಿಖೆಗೆ ಅನುಮತಿ ನೀಡಿದ್ದಾರೆ. ಈಗಿನ ಅಡ್ವಕೇಟ್ ಜನರಲ್ ಅಭಿಪ್ರಾಯ ಪಡೆದು ಈ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.