ಬಳ್ಳಾರಿ : ಸಂಡೂರು ಕ್ಷೇತ್ರದ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್‌ಗೆ ಸಂಸದ ಈ. ತುಕಾರಾಮ್ ಪತ್ನಿ ಈ. ಅನ್ನಪೂರ್ಣ ಅವರಿಗೆ ಟಿಕೆಟ್ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿ ಹಲವು ದಿನಗಳ ಕುತುಹೂಲಕ್ಕೆ ತೆರೆ ಎಳೆದಿದ್ದಾರೆ.
ವಿಜಯನಗರ ಜಿಲ್ಲೆಯ ಕಮಲಾಪುರ ನಿವಾಸಿಯಾಗಿರುವ ಈ.ಅನ್ನಪೂರ್ಣ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ಪತಿಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗುವುದರ ಜತೆಯಲ್ಲಿಯೇ ಉಳಿದ ಸಮಯದಲ್ಲಿ ವಿವಿಧ ಪುಸ್ತಕಗಳನ್ನು ಓದುವ ಹವ್ಯಾಸ ಹೊಂದಿದ್ದಾರೆ. ಸಂಸದ ಈ.ತುಕಾರಾಮ್ 2008 ರಿಂದ 2023 ರವರೆಗೆ ಸತತ ನಾಲ್ಕು ಬಾರಿ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಬಿಗಿ ಹಿಡಿತ ಸಾಧಿಸಿದ್ದಾರೆ.ಲೋಕಸಭಾ ಚುನಾವಣೆ ಹಿನ್ನಲೆ ಶಾಸಕ ಸ್ಥಾನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆಯಲ್ಲಿ ತುಕಾರಾಮ್ ಕುಟುಂಬದವರಿಗೆ ಟಿಕೆಟ್ ನೀಡದೆ ಹೊಸಬರಿಗೆ ನೀಡಬೇಕು ಎಂಬ ಕೂಗು ಬಲವಾಗಿ ಕೇಳಿ ಬಂದಿತ್ತು. ಅದರಂತೆ, ಸ್ಥಳಿಯ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ನಾಯಕರಿಗೆ ನೇರವಾಗಿ ಭೇಟಿಯಾಗಿ ಕಳೆದ ಹಲವು ವರ್ಷಗಳಿಂದ ತುಕಾರಾಮ್‌ಗೆ ಟಿಕೆಟ್ ನೀಡಿದ್ದಲ್ಲದೆ, ಸಂಸದರಾಗಿ ಗೆಲ್ಲಿಸಲಾಗಿದೆ. ಈ ಬಾರಿ ಹೊಸಬರಿಗೆ ಮಣೆ ಹಾಕಿ ಕಾರ್ಯಕರ್ತರನ್ನು ಗುರುತಿಸಬೇಕು ಇಲ್ಲದಿದ್ದರೆ ಬಂಡಾಯ ಏಳುವುದಾಗಿಯೂ ಎಚ್ಚರಿಸಿದ್ದರು. ಆದರೆ, ವಿರೋಧ ನಡುವೆಯೂ ಅನ್ನಪೂರ್ಣಗೆ ಟಿಕೆಟ್ ನೀಡಿರುವುದು ಸ್ಥಳಿಯರಿಗೆ ಹೈಕಮಾಂಡ್ ವಿರುದ್ಧ ಅಸಮಾಧಾನ ಮೂಡಿದೆ.
ಬಂಡಾಯದ ಬಿಸಿ : ಸಂಡೂರಿನಲ್ಲಿ ಕಾಂಗ್ರೆಸ್‌ನಿಂದ ಅನ್ನಪೂರ್ಣಗೆ ಟಿಕೆಟ್ ಖಚಿತವಾಗಲಿದೆ ಎಂಬ ಬಹಿರಂಗವಾಗುತ್ತಿದ್ದಂತೆ ಹಲವು ವರ್ಷಗಳಿಂದ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿದ್ದ ಎನ್. ವೆಂಕಣ್ಣ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.ಅದರಂತೆ ಕೆ.ಲಕ್ಷ್ಮಣ ಸೇರಿದಂತೆ ಹೊಸಬರಿಗೆ ಟಿಕೆಟ್ ನೀಡಿ ಎಂಬ ಚರ್ಚೆ ಜೋರಾಗಿ ನಡೆದಿತ್ತು. ಇದು ಯಾವುದನ್ನು ಲೆಕ್ಕಿಸದ ಕಾಂಗ್ರೆಸ್ ನಾಯಕರು ಸಚಿವ ಸಂತೋಷ ಲಾಡ್ ಹಾಗೂ ಈ. ತುಕಾರಾಮ್ ಒತ್ತಾಯದ ಮೇರೆಗೆ ಟಿಕೆಟ್ ಘೋಷಿಸಿದ್ದಾರೆ. ಈ ಜೋಡಿ ಜತೆಗೂಡಿ ಬಿಜೆಪಿಯನ್ನು ಸೋಲಿಸಿ ಮತ್ತೋಮ್ಮೆ ಕ್ಷೇತ್ರವನ್ನು ಉಳಿಸಿಕೊಳ್ಳುವುದೆ ಎಂಬುದು ಕಾದು ನೋಡಬೇಕಿದೆ.
ಲಾಡ್ ವಶದಲ್ಲಿರುವ ಕ್ಷೇತ್ರ : ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯ ಎನಿಸಿಕೊಂಡಿರುವ ಕ್ಷೇತ್ರವೆಂದರೆ ಸಂಡೂರು ಮಾತ್ರ. ಇದರಲ್ಲಿ ಈವರೆಗೆ ನಡೆದ ಹದಿನಾರು ಚುನಾವಣೆಯಲ್ಲಿ ಕಾಂಗ್ರೆಸ್ ಹದಿನಾಲ್ಕು ಬಾರಿ ಗೆದ್ದಿದೆ. ರಾಜಮನೆತನದ ಎಂ.ವೈ. ಘೋರ್ಪಡೆ ಸತತ ಏಳು ಬಾರಿ ಗೆದ್ದಿದ್ದಾರೆ. ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಘೋರ್ಪಡೆ ಬೆಂಬಲಿಗರಿಗೆ ಟಿಕೆಟ್ ನೀಡಲಾಗಿ ಆ ಅಭ್ಯರ್ಥಿಯೇ ಗೆಲ್ಲುತ್ತಿದ್ದರು. 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೆಂಕಟರಾವ್ ಘೋರ್ಪಡೆ ಅವರನ್ನು ಜೆಡಿಎಸ್‌ನಿಂದ ಸ್ಪರ್ಧಿಸಿದ ಸಂತೋಷ ಲಾಡ್ ಮೊದಲ ಬಾರಿಗೆ 35 ಸಾವಿರ ಮತಗಳ ಅಂತರದಲ್ಲಿ ಸೋಲಿಸುವ ಮೂಲಕ ಇತಿಹಾಸ ಸೃಷ್ಠಿಸಿದರು. 2008 ರಲ್ಲಿ ಕ್ಷೇತ್ರ ಮರುವಿಂಗಡಣೆಯಾಗಿದ್ದರಿಂದ ಸಂಡೂರು ಎಸ್ಪಿ ಮೀಸಲು ಕ್ಷೇತ್ರವಾಯಿತು. ಬಳಿಕ ಲಾಡ್ ಕ್ಷೇತ್ರವನ್ನು ತನ್ನ ಬಿಗಿಹಿಡಿತದಲ್ಲಿಯೇ ಇಟ್ಟುಕೊಳ್ಳಲು ತಮ್ಮೊಂದಿಗೆ ಇದ್ದ ಈ. ತುಕಾರಾಮ್ 2008ರಿಂದ 2023ರವರೆಗೆ ಕಾಂಗ್ರೆಸ್‌ನಿಂದ ಗೆಲ್ಲಿಸುಕೊಳ್ಳುತ್ತಾ ಬಂದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕ್ಷೇತ್ರ ಮರುವಿಂಗಡೆಯಾಗುವ ಸಾಧ್ಯತೆಯಿದ್ದು ಮರಳಿ ಸಂಡೂರು ಸಾಮಾನ್ಯ ಕ್ಷೇತ್ರವಾಗಿ ಬದಲಾದರೆ ಮತ್ತೆ ಲಾಡ್ ಅಥವಾ ಅವರ ಕುಟುಂಬದವರನ್ನು ಸ್ಪರ್ಧಿಸಿ ಗೆಲ್ಲಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾತುಗಳು ಜೋರಾಗಿವೆ.