

ಕಾಸರಗೋಡು: ಕೇರಳ ಜನತೆ ರಾಷ್ಟ್ರೀಯ ಹಬ್ಬ ಓಣಂ ಸಂಭ್ರಮದಲ್ಲಿದ್ದು, ಆ.29ರಂದು ತಿರುವೋಣಂ ಆಚರಣೆಗೆ ಸಿದ್ಧರಾಗಿದ್ದಾರೆ. ಮಲೆಯಾಳಿಗರ ಮಾತಿನಂತೆ ‘ಅತ್ತಂ ಪತ್ತ್ ಪೊನ್ನೋಣಂ’ ಅಂದರೆ ‘ಅತ್ತಂ’ನಿಂದ ಆರಂಭಗೊಂಡು ಹತ್ತನೇ ದಿನದಂದು ತಿರುವೋಣಂ ಆಚರಿಸುವುದು ವಾಡಿಕೆ.
ಕೇರಳಾದ್ಯಂತ ಆ.20ರಂದು ಓಣಂ ಹಬ್ಬಕ್ಕೆ ಚಾಲನೆ ನೀಡಲಾಗಿದೆ. ನಂತರದ ಪ್ರತಿಯೊಂದು ದಿನವನ್ನೂ ಒಂದೊಂದು ಐತಿಹ್ಯದೊಂದಿಗೆ ಆಚರಿಸಿಕೊಂಡು ಬರಲಾಗುತ್ತಿದೆ. ಪೊನ್ನೋಣಂ ಮುನ್ನುಡಿಯಾಗಿ ಸೋಮವಾರ ಉತ್ರಾಡಂ ಆಚರಿಸಲಾಯಿತು. ಈ ದಿನದಂದು ಓಣಂ ಹಬ್ಬಕ್ಕೆ ಬೇಕಾದ ತರಕಾರಿ, ಹಣ್ಣುಹಂಪಲು ಖರೀದಿಯೂ ಜೋರಾಗಿ ನಡೆಯಿತು. ಉತ್ರಾಡಂನಿಂದ ತೊಡಗಿ ಮುಂದಿನ ನಾಲ್ಕು ದಿನಗಳನ್ನು ಮಹಾಬಲಿ ತನ್ನ ಪ್ರಜೆಗಳ ಯೋಗಕ್ಷೇಮ ವಿಚಾರಿಸಲು ಸಂಚಾರಕ್ಕಾಗಿ ಮೀಸಲಿರಿಸುತ್ತಾನೆ ಎಂಬುದು ಐತಿಹ್ಯ.
ತಿರುವೋಣಂ ದಿನದಂದು ತಿರುವಾದಿರ, ಹುಲಿವೇಷಧಾರಿಗಳ ಅಬ್ಬರದ ಕುಣಿತದೊಂದಿಗೆ ಓಣಂ ರಂಗೇರುತ್ತದೆ. ನವವಿವಾಹಿತರು ಹಾಗೂ ಎಳೆಯ ಕಂದಮ್ಮಗಳಿಗೆ ಮೊದಲ ಓಣಂ ವಿಶೇಷ ಪರಿಗಣನೆಯಿರುತ್ತದೆ.
ಬೆಲೆಯೇರಿಕೆ ಬಿಸಿ:
ಹೂವಿನ ಹಬ್ಬವೆಂದೇ ಖ್ಯಾತಿ ಗಳಿಸಿರುವ ಓಣಂ ಹಬ್ಬಕ್ಕೆ ಅಗತ್ಯವಾಗಿ ಬೇಕಾಗಿರುವ ಹೂವಿಗೆ ಬೆಲೆಯೇರಿಕೆ ಬಿಸಿಯೂ ಕಾಡುತ್ತಿದೆ. ಓಣಂ ಕಾಲಾವಧಿಯಲ್ಲಿ ಹೊರರಾಜ್ಯಗಳಿಂದ ಹೂವಿನ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಞಂಗಾಡು, ಕಾಸರಗೋಡಿಗೆ ಆಗಮಿಸುತ್ತಿದ್ದಾರೆ. ಈ ಬಾರಿ ಹೂವಿಗೆ ದುಬಾರಿ ಬೆಲೆಯಿರುವುದರಿಂದ ವ್ಯಾಪಾರಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಈ ಬಾರಿ ಕುಟುಂಬಶ್ರೀ ಸಿಡಿಎಸ್ ಘಟಕಗಳ ಮೂಲಕ ಜಿಲ್ಲಾದ್ಯಂತ ಚೆಂಡುಹೂವಿನ ಕೃಷಿ ನಡೆಸಲಾಗಿದ್ದು, ಮಾರುಕಟ್ಟೆಗೆ ಪೂರೈಸಲಾಗಿದೆ. ಬಟ್ಟೆ ಹಾಗೂ ಇತರ ಸಾಮಗ್ರಿಗಳ ಖರೀದಿಗಾಗಿ ಕಳೆದ ಒಂದು ವಾರದಿಂದ ನಗರದ ಮಾರುಕಟ್ಟೆಗಳಲ್ಲಿ ಭಾರಿ ದಟ್ಟಣೆ ಕಂಡುಬಂದಿತ್ತು.