

ಸಂತೋಷ ಮುರಡಿ ಮುಂಡರಗಿ
ಅನತಿ ದೂರದಲ್ಲೆ ತುಂಗಭದ್ರಾ ನದಿ ಹರಿಯುತ್ತಿದೆ. ಆದರೆ, ಜನತಗೆ ಇಂದಿಗೂ ಸಮರ್ಪಕವಾಗಿ ಕುಡಿಯಲು ನೀರು ಸಿಗುತ್ತಿಲ್ಲ. ಬೇಸಿಗೆ ಬಿಡಿ, ಮಳೆಗಾಲದಲ್ಲೂ ಜನರ ದಾಹ ನೀಗುತ್ತಿಲ್ಲ. ಇನ್ನೆಷ್ಟು ದಿನ ಈ ಸಂಕಷ್ಟ ಎನ್ನುವ ಮುಂಡರಗಿ ಜನರ ಪ್ರಶ್ನೆಗೆ ಸಮರ್ಪಕ ಉತ್ತರವೇ ಸಿಗುತ್ತಿಲ್ಲ.
ಸ್ಥಳೀಯರ ದಾಹ ನೀಗಿಸಲೆಂದೇ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ)ವತಿಯಿಂದ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯಡಿ ನೀರು ಪೂರೈಸಲು 2018 ಮಾರ್ಚ್ 2ರಂದು 17.43 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೊಳ್ಳಲಾಯಿತು. ಎ.ಎಸ್.ಆರ್. ಇಂಜಿನಿಯರಿಂಗ್ ಕಂಪನಿಯು ಗುತ್ತಿಗೆ ಪಡೆದು ಕಾಮಗಾರಿ ಪ್ರಾರಂಭಿಸಿತು. ಪುರಸಭೆ ವ್ಯಾಪ್ತಿಯ 130 ಕಿ.ಮೀ.ನಲ್ಲಿ ಪೈಪ್‌ಲೈನ್ ಜೋಡಿಸಿ ಮನೆ-ಮನೆಗೆ ನಿರಂತರ ನೀರು ಪೂರೈಸುವುದು, ಮೇಲ್ಮಟ್ಟದ ಜಲಾಗಾರ ನಿರ್ಮಿಸುವುದು, ಪ್ರತಿ ನಳಕ್ಕೆ ಮೀಟರ್ ಅಳವಡಿಸುವ ಉದ್ದೇಶವಿತ್ತು.ಗುತ್ತಿಗೆದಾರರಿಗೆ 18 ತಿಂಗಳ ಗಡುವು ನೀಡಲಾಗಿತ್ತು. ಆದರೆ, ಐದು ವರ್ಷ ಕಳೆದರೂ ಕೇವಲ ಶೇ. 22ರಷ್ಟು ಕಾಮಗಾರಿ ಮಾಡಿ ಕೆಲಸ ಸ್ಥಗಿತಗೊಳಿಸಲಾಯಿತು. ಅವಧಿಗಿಂತಲೂ ಸುಮಾರು 4 ವರ್ಷ ಕಾಲವಕಾಶ ವಿಸ್ತರಿಸಿದರೂ ವಿಳಂಬ ಮಾಡಿದ್ದರಿಂದ ಕೆಯುಐಡಿಎಫ್‌ಸಿಯು 2023ರಲ್ಲಿಯೇ ಯೋಜನೆಯ ಗುತ್ತಿಗೆ ಟೆಂಡರ್ ರದ್ದುಗೊಳಿಸಿ ಈಯೋಜನೆಯನ್ನು ಪೂರ್ಣಪ್ರಮಾಣದಲ್ಲಿಯೇ ರದ್ದುಪಡಿಸಿತು.
ಕೆಯುಐಡಿಎಫ್‌ಸಿಯು ಪುರಸಭೆಗೂ ಈಬಗ್ಗೆ ಮಾಹಿತಿ ನೀಡಿದೆ. ಈ ಕುರಿತು ಈಗಾಗಲೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ್ದು, ಸರ್ಕಾರದ ಅಮೃತ 2.0 ಯೋಜನೆಯಡಿ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಠರಾವು ನಿರ್ಣಯ ಕೈಗೊಂಡು ಪುರಸಭೆಯಿಂದ ಸರ್ಕಾರಕ್ಕೆ ಪ್ರಾಸ್ತವನೆ ಕೂಡ ಸಲ್ಲಿಸಲಾಗಿದೆ.
ನಿತ್ಯ 4.5 ಎಂಎಲ್‌ಡಿ ಅಗತ್ಯ: ಸಿಂಗಟಾಲೂರು ಬ್ಯಾರೇಜ್ ಹಿನ್ನೀರಿನಿಂದ ಜಾಲವಾಡಗಿ ಕುಡಿಯುವ ನೀರು ಶುದ್ಧೀಕರಣ ಘಟಕದ ಮೂಲಕ ಪಟ್ಟಣದ ಕುಡಿಯುವ ನೀರು ಸರಬುರಾಜು ಸಂಸ್ಕರಣ ಘಟಕದ ನೆಲ ಮಟ್ಟದ ಜಲಾಗಾರಕ್ಕೆ ನೀರು ಪೂರೈಸಲಾಗುತ್ತಿದೆ. ಅಲ್ಲಿಂದ ದುರ್ಗಾದೇವಿ ನಗರ, ಹುಡ್ಕೋ ಕಾಲನಿಯಲ್ಲಿರುವ ಮೇಲ್ಮಟ್ಟದ ಜಲಾಗಾರಕ್ಕೆ ಪೂರೈಸಿ ಮನೆ-ಮನೆಗೆ ನೀರು ಪೂರೈಸಲಾಗುತ್ತಿದೆ. ಈಗ ನದಿತುಂಬಿ ಹರಿಯುತ್ತಿದ್ದರೂ ಐದಾರು ದಿನಕ್ಕೊಮ್ಮೆ ನದಿ ನೀರು ಸಿಗುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಎಂಟು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಪಟ್ಟಣಕ್ಕೆ ಪ್ರತಿದಿನ 4.5 ಎಂಎಲ್‌ಡಿ ನೀರಿನ ಅಗತ್ಯವಿದೆ. ಆದರೆ, ಜಾಲವಾಡಗಿ ಘಟಕದಿಂದ 3.5 ಎಂಎಲ್‌ಡಿ ನೀರು ಮಾತ್ರ ಪೂರೈಸಲಾಗುತ್ತಿದೆ. ಜನರಿಗೆ ಸಮರ್ಪಕ ನೀರು ಸಿಗುವಂತೆ ಕ್ರಮ ಕೈಗೊಳ್ಳಬೇಕು. ಸ್ಥಗಿತಗೊಂಡ ಕಾಮಗಾರಿ ಪೂರ್ಣಗೊಳಿಸಿ ನಿತ್ಯವೂ ಸಮರ್ಪಕವಾಗಿ ಜೀವಜಲ ಸಿಗುವಂತೆ ಕ್ರಮವಹಿಸಬೇಕು ಎನುವುದು ಸ್ಥಳೀಯರ ಆಶಯವಾಗಿದೆ.
ನಿರಂತರ ಕುಡಿಯುವ ನೀರು ಯೋಜನೆಯನ್ನು ರದ್ದುಗೊಳಿಸಿರುವುದರಿಂದ ಸ್ಥಳೀಯರಿಗೆ ತೀವ್ರ ನಿರಾಸೆ ಉಂಟಾಗಿದೆ. ಸರ್ಕಾರ ಬೇರೆ ಯೋಜನೆ ಮೂಲಕ ಉಳಿದ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ನಿರಂತರ ಕುಡಿಯುವ ನೀರು ಸಿಗುವಂತೆ ಕ್ರಮ ವಹಿಸಬೇಕು. ಈ ಬಗ್ಗೆ ಪುರಸಭೆಯು ತ್ವರಿತಗತಿ ಕಾರ್ಯ ಕೈಗೊಳ್ಳಬೇಕು.ಮರಿಯಪ್ಪ ರಾಮೇನಹಳ್ಳಿ, ಸ್ಥಳೀಯ ನಿವಾಸಿ
ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಗುತ್ತಿಗೆದಾರರು ಟೆಂಡರ್ ನಿಯಮಾನುಸಾರ ಕಾಮಗಾರಿ ನಡೆಸದ ಕಾರಣ ಕೆಯುಐಡಿಎಫ್‌ಸಿನಿಂದ ಟೆಂಡರ್ ರದ್ದು ಪಡಿಸಿ ಯೋಜನೆಯನ್ನೇ ರದ್ದುಗೊಳಿಸಿದ್ದಾರೆ. ಬಾಕಿ ಕಾಮಗಾರಿ ಕೈಗೊಳ್ಳುವಷ್ಟು ಅನುದಾನ ಪುರಸಭೆಯಲ್ಲಿ ಇರುವುದಿಲ್ಲ. ಸರ್ಕಾರದ ಕುಡಿಯುವ ನೀರಿನ ಅಮೃತ 2.0 ಯೋಜನೆಯಡಿ ಮನೆ-ಮನೆಗೆ ನಳ ಜೋಡಣೆ, ನೀರು ಪೂರೈಕೆ ಲೈನ್, ಮೇಲ್ಮಟ್ಟದ ಜಲಾಗಾರ ಮಾಡಲು ಅವಕಾಶವಿದೆ. ಹೀಗಾಗಿ ಬಾಕಿ ಕಾಮಗಾರಿಯನ್ನು ಅಮೃತ 2.0 ಯೋಜನೆಯಡಿ ಪರಿಗಣಿಸಿ ಯೋಜನೆ ಅನುಷ್ಠಾನ ಮಾಡಬೇಕೆಂದು ಪುರಸಭೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಶಂಕರ ಹುಲ್ಲಮ್ಮನವರ, ಪುರಸಭೆ ಮುಖ್ಯಾಧಿಕಾರಿ ಮುಂಡರಗಿ