3ನೇ ಹಂತದ ಜೆಟ್ಟಿ ಶೀಘ್ರ, ರಾಜ್ಯ ಸಚಿವ ಸಂಪುಟ ಅನುಮತಿ

Boat Jatti
Published on

ಹರೀಶ್ ಮೋಟುಕಾನ, ಮಂಗಳೂರು

ದಶಕದ ಹಿಂದೆ ಕೇಂದ್ರ ಸರ್ಕಾರದಿಂದ ಮಂಜೂರಾತಿ ದೊರೆತು ಕಾಮಗಾರಿ ಆರಂಭ ಹಂತದ ತನಕ ಬಂದು ನಾನಾ ಕಾರಣಗಳಿಂದ ಸ್ಥಗಿತಗೊಂಡಿದ್ದ ಮಂಗಳೂರು ಬಂದರಿನ ಮೂರನೇ ಹಂತದ ಜೆಟ್ಟಿ ನಿರ್ಮಾಣ ಈ ಬಾರಿ ಸಾಕಾರಗೊಳ್ಳುವ ನಿರೀಕ್ಷೆಯಲ್ಲಿದೆ. ರಾಜ್ಯ ಸಚಿವ ಸಂಪುಟ ಕಾಮಗಾರಿಗೆ ಅನುಮೋದನೆ ನೀಡಿದ್ದು, ಪ್ರಸ್ತುತ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ.

ಮೂರನೇ ಹಂತದ ಮೀನುಗಾರಿಕಾ ಬಂದರು ವಿಸ್ತರಣೆಗೆ ಬಾಕಿ ಕಾಮಗಾರಿ ಪೂರ್ಣಗೊಳಿಸಲು 22 ಕೋಟಿ ರೂ. ಅಂದಾಜು ವೆಚ್ಚಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದು ಮೀನುಗಾರರ ವಲಯದಲ್ಲಿ ನಿರೀಕ್ಷೆ ಮೂಡಿಸಿದೆ. 1 ಹಾಗೂ 2ನೇ ಜೆಟ್ಟಿ ನಿರ್ಮಾಣ ಬಳಿಕ ಬೋಟುಗಳು ಹಾಗೂ ಮೀನುಗಾರರಿಗೆ ಹಲವು ಸಮಸ್ಯೆಗಳು ಎದುರಾಗಿದ್ದವು. ಈ ಕಾರಣಕ್ಕೆ 2010ರಲ್ಲಿ ಮೂರನೇ ಹಂತದ ಜೆಟ್ಟಿ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಆದರೆ, ಇಲಾಖೆಗಳ ನಡುವೆ ಸಮನ್ವಯತೆ, ಇಚ್ಛಾಶಕ್ತಿ ಇಲ್ಲದೆ ಈ ಯೋಜನೆ ಪೂರ್ಣವಾಗಿರಲಿಲ್ಲ. ಅಗತ್ಯದ ಕಾಮಗಾರಿ ಮುಗಿಸಿದರೂ ಸಾಕು ಎಂದು ನಿರ್ಧರಿಸಿರುವ ಮೀನುಗಾರರು ತಕ್ಷಣದ ಕಾಮಗಾರಿಗಳಿಗೆ 22 ಕೋಟಿ ರೂ.ಮಂಜೂರು ಮಾಡುವಂತೆ ಬೇಡಿಕೆ ಇಟ್ಟಿದ್ದರು.

ಏನಿದು ಯೋಜನೆ?: ಮೂರನೇ ಹಂತದ ವಿಸ್ತರಣಾ ಕಾಮಗಾರಿಗೆ 57.60 ಕೋ.ರೂ.ಗಳ ಪ್ರಸ್ತಾವನೆಗೆ 2010ರ ಸೆ.20ರಂದು ಕೇಂದ್ರ ಸರ್ಕಾರ ಮಂಜೂರಾತಿ ನೀಡಿತ್ತು. ಇದರಲ್ಲಿ ಶೇ.75ರಷ್ಟು ಪಾಲನ್ನು(43.20 ಕೋಟಿ ರೂ) ಕೇಂದ್ರ ಸರ್ಕಾರ ಹಾಗೂ ಶೇ.25 ಪಾಲನ್ನು (14.40 ಕೋಟಿ ರೂ) ರಾಜ್ಯ ಸರ್ಕಾರ ನೀಡುವುದೆಂದು ತೀರ್ಮಾನಿಸಲಾಗಿತ್ತು. 2011-12ರಲ್ಲಿ ಈ ಕಾಮಗಾರಿಯ ಟೆಂಡರನ್ನು ಗುತ್ತಿಗೆ ದಾರರಿಗೆ ನೀಡಿ, 36 ತಿಂಗಳೊಳಗೆ (2015)ಪೂರ್ಣಗೊಳಿಸಲು ತಿಳಿಸಲಾಗಿತ್ತು. ಕಾಮಗಾರಿ ಪ್ರಗತಿ ಸಂದರ್ಭ, ಸ್ಥಳೀಯ ಮೀನುಗಾರರ ಬೇಡಿಕೆಯಂತೆ ಹಾಗೂ ರಾಜ್ಯಮಟ್ಟದ ನಿರ್ಣಯದಂತೆ ದಕ್ಷಿಣ ಭಾಗದ ಜೆಟ್ಟಿಯ ಎತ್ತರವನ್ನು +2.50ಮೀ.ನಿಂದ +3 ಮೀ.ಗೆ ಹೆಚ್ಚಿಸಲು ನಿರ್ಣಯಿಸಲಾಗಿತ್ತು. ಅನುಮೋದಿತ ವಿನ್ಯಾಸಕ್ಕೆ ಕಾಮಗಾರಿ ಪೂರ್ಣಗೊಳಿಸಲು ಪರಿಷ್ಕೃತ ಅಂದಾಜು ಪಟ್ಟಿಯನ್ನು 98.25 ಕೋಟಿ ರೂ.ಗೆ ತಯಾರಿಸಿ ಮೀನುಗಾರಿಕಾ ಇಲಾಖೆಗೆ ಸಲ್ಲಿಸಲಾಗಿತ್ತು. ಇದನ್ನು ಬೆಂಗಳೂರು ಸಭೆಯಲ್ಲಿ ಚರ್ಚಿಸಿ ಉನ್ನತ ಮಟ್ಟದ ಸಮಿತಿ ರಚಿಸಿ ಸ್ಥಳ ಪರಿಶೀಲಿಸಿ ತೀರಾ ಅಗತ್ಯದ ಕನಿಷ್ಠ ಅಂಶಗಳನ್ನು ಗುರುತಿಸಿ 72.80 ಕೋಟಿ ರೂ.ಗಳ ಪರಿಷ್ಕೃತ ಪ್ರಸ್ತಾವನೆ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ರಾಷ್ಟ್ರೀಯ ಹಸಿರು ನ್ಯಾಯಪೀಠದಲ್ಲಿ ದಾವೆ: ದಕ್ಷಿಣ ಬದಿಯ ಭಾಗಕ್ಕೆ ಸಂಬಂಧಿಸಿದ ಆಕ್ಷೇಪಗಳಿದ್ದ ಕಾರಣದಿಂದ ಕೆಲವರು ನವದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯಪೀಠದಲ್ಲಿ ದಾವೆ ಹೂಡಿದ್ದರು. ಹೀಗಾಗಿ 2014 ಏಪ್ರಿಲ್‌ನಿಂದ 2016ರ ಮೇವರೆಗೆ ಕಾಮಗಾರಿಗೆ ತಡೆಯಾಜ್ಞೆ ನೀಡಲಾಗಿತ್ತು. ಬಳಿಕ ದಕ್ಷಿಣದ ಭಾಗವನ್ನು ಅನುಮೋದಿತ ನಕ್ಷೆಯಲ್ಲಿರುವಂತೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಪೀಠ ಆದೇಶಿಸಿತ್ತು. ಬಳಿಕ ಕಾಮಗಾರಿ ವೇಗ ಪಡೆಯಲೇ ಇಲ್ಲ. ಗುತ್ತಿಗೆದಾರರು 7 ವರ್ಷದ ಹಳೆಯ ದರಕ್ಕೆ ಈಗ ಕಾಮಗಾರಿ ಸಾಧ್ಯವಿಲ್ಲ ಎಂದಿದ್ದರು. ಹೀಗಾಗಿ ಕಾಮಗಾರಿಯನ್ನು ಯಥಾಸ್ಥಿತಿಯಲ್ಲಿ ಕೈಬಿಡಲು ಗುತ್ತಿಗೆದಾರರಿಂದ ಒಪ್ಪಿಗೆ ಪತ್ರ ಪಡೆದು, ಬಾಕಿ ಕಾಮಗಾರಿಗೆ ಮರು ಪ್ರಸ್ತಾವನೆ ತಯಾರಿಸಿ ಹೊಸ ಗುತ್ತಿಗೆ ನೇಮಿಸಲು ಸೂಚಿಸಲಾಗಿತ್ತು. ಪ್ರಸ್ತುತ ತಾತ್ಕಾಲಿಕ ಯೋಜನೆ ಪ್ರಕಾರ ಕಾಮಗಾರಿ ಕೈಗೊಳ್ಳಲು ಸರ್ಕಾರದ ಒಪ್ಪಿಗೆ ದೊರೆತಿದೆ. ಹೊಸ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ತಿಳಿಸಿದ್ದಾರೆ.

ಮೂರನೇ ಹಂತದ ಜೆಟ್ಟಿ ನಿರ್ಮಾಣ ಪೈಕಿ ಬಾಕಿ ಕಾಮಗಾರಿ ನಡೆಸಲು 22 ಕೋಟಿ ರೂ.ಅಗತ್ಯವಿದೆ ಎಂದು ಮೀನುಗಾರರು ಬೇಡಿಕೆ ಇಟ್ಟಿದ್ದರು. ಅದಕ್ಕೆ ಏಪ್ರಿಲ್‌ನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಹೀಗಾಗಿ ಎಲ್ಲ ತುರ್ತು ಕಾಮಗಾರಿಯನ್ನು ಶೀಘ್ರ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಸ್.ಅಂಗಾರ ಸಚಿವರು, ಮೀನುಗಾರಿಕಾ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net