

ಕಡೂರು: ಸಾರ್ವಜನಿಕವಾಗಿ ಉಪಯೋಗವಾಗುವ ಕೆಲಸಗಳಿಗೆ ಎಷ್ಟೇ ವಿರೋಧ ಎದುರಾದರೂ ಬಗ್ಗದೆ ಮೂಲ ಸೌಕರ್ಯ ಕಲ್ಪಿಸಿಕೊಡಲು ಬದ್ದನಾಗಿದ್ದೇನೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಸಮೀಪ ನೂತನವಾಗಿ ನವೀಕರಣಗೊಂಡ ಬಿ.ಕೆ.ಸುಂದರೇಶ್ ಆಟೋ ನಿಲ್ದಾಣ ಮತ್ತು ಬಸವೇಶ್ವರ ವೃತ್ತದಲ್ಲಿನ ವೆಂಕಟೇಶ್ವರ ಆಟೋ ನಿಲ್ದಾಣಗಳನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದಲ್ಲಿ ಆಟೋ ಓಡಿಸುವವರಿಗೆ ನೆಲೆಯಿರಲಿಲ್ಲ. ಅದನ್ನು ಮನಗಂಡು ಎರಡು ಕಡೆ 16 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಆಟೋ ನಿಲ್ದಾಣ ನಿರ್ಮಿಸಲಾಗಿದೆ. ಪಟ್ಟಣದ 4 ಕಡೆ ಆಟೋ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಅನುದಾನ ಒದಗಿಸಲಾಗಿದೆ. ನಿವೇಶನ ರಹಿತ ಆಟೋ ಚಾಲಕರಿಗೆ ನಿಯಮಾನುಸಾರ ನಿವೇಶನ ಒದಗಿಸಲು ಚಿಂತನೆ ನಡೆಸಲಾಗಿದೆ. ಬಡ ಶ್ರಮಿಕ ವರ್ಗಕ್ಕೆ ಬೆಂಬಲವಾಗಿ ಸದಾ ನಿಲ್ಲುತ್ತೇನೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಪಟ್ಟಣದಲ್ಲಿ ಸುಸಜ್ಜಿತ ಆಟೋ ನಿಲ್ದಾಣ ಮಾಡಿರುವುದು ಶ್ಲಾಘನೀಯ. ಆದರೆ ಆ ನಿಲ್ದಾಣದ ಹಕ್ಕು ಆಟೋ ಚಾಲಕರ ಸಂಘಕ್ಕೆ ಸಿಗುವಂತೆ ಮಾಡಿದರೆ. ಹೆಚ್ಚಿನ ಸಹಕಾರಿಯಾಗಲಿದೆ. ಈ ಬಗ್ಗೆ ಶಾಸಕರು ಗಮನಹರಿಸಬೇಕು ಎಂದು ಮನವಿ ಮಾಡಿದರು.
ಭೂ ಸೇನಾ ನಿಗಮದ ಎಇಇ ಅಶ್ವಿನಿ, ಪುರಸಭೆ ಸದಸ್ಯ ತೋಟದಮನೆ ಮೋಹನ್ ಕುಮಾರ್, ನಂದೀಶ್, ಗಿರೀಶ್, ಆಟೋ ರಮೇಶ್ ಮತ್ತು ಆಟೋಚಾಲಕರು ಸಂಘದ ಪದಾಧಿಕಾರಿಗಳು ಇದ್ದರು.