

ಮದ್ದೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿರುವ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಹೈಟೆಕ್ ಕಟ್ಟಡ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಶನಿವಾರ ಆಗಮಿಸಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪ್ರವಾಸಿ ಮಂದಿರದಲ್ಲಿ ತುಂಬಾ ಹಳೆಯದಾದ ಕಟ್ಟಡವಿದ್ದು, ಅದನ್ನು ತೆರವುಗೊಳಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯ ಮಾರ್ಗ ಮಧ್ಯೆ ಪ್ರವಾಸಿ ಮಂದಿರ ಇರುವುದರಿಂದ ಪ್ರತಿನಿತ್ಯ ಹಲವಾರು ಪ್ರಮುಖ ವ್ಯಕ್ತಿಗಳು ಇಲ್ಲಿಗೆ ಬಂದು ಹೋಗುತ್ತಾರೆ. ಆದ್ದರಿಂದ ಅವರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಹೈಟೆಕ್ ಪ್ರವಾಸಿ ಮಂದಿರ ಕಟ್ಟಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅವರು ಈ ಸಂಬಂಧ ಅಂದಾಜು ವೆಚ್ಚ, ನೀಲಿನಕ್ಷೆಯನ್ನು ತಯಾರು ಮಾಡಲಿದ್ದು, ಶೀಘ್ರವಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಿರ್ಮಾಣವಾಗಿರುವ ಕಟ್ಟಡಕ್ಕೂ ಹೈ ಟೆಕ್ ಸ್ಪರ್ಶ ನೀಡಲು ಚಿಂತನೆ ನಡೆಸಲಾಗಿದೆ ಎಂದರು. ಮುಖ್ಯ ವಾಸ್ತು ಶಿಲ್ಪಿ ರಾಮಸ್ವಾಮಿ ಶ್ರೀಧರ್, ಲೋಕೋಪಯೋಗಿ ಇಲಾಖೆಯ ಇಇ ಹರ್ಷ, ಉಪ ವಾಸ್ತು ಶಿಲ್ಪಿ ರಾಜೇಶ್ವರಿ, ಎಇಇ ದೇವಾನಂದ್ ಇದ್ದರು.