

ಅವಿನಾಶ್ ಜೈನಹಳ್ಳಿ ಮೈಸೂರು
ಜಿಲ್ಲಾಡಳಿತ ಅಂಗವಿಕಲರ ಬಾಳಿಗೆ ‘ದೀಪ’ವಾಗಲು ಮುಂದಾಗಿದೆ. ಜಿಲ್ಲೆಯಲ್ಲಿ ವಾಸಿಸುತ್ತಿರುವ ಅಂಗವಿಕಲರಿಗೆ ಸ್ವಂತ ಸೂರು ಕಲ್ಪಿಸುವ ಉದ್ದೇಶದಿಂದ ಜಿಲ್ಲಾಡಳಿತ ‘ಪ್ರತ್ಯೇಕ ಕಾಲನಿ’ ನಿರ್ಮಾಣ ಮಾಡಲು ಚಿಂತನೆ ನಡೆಸಿದೆ. ಇದು ಅಂಗವಿಕಲರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ.
ಸಾಮಾನ್ಯರಂತೆ ಅಂಗವಿಕಲರು ಬದುಕು ನಡೆಸಬೇಕೆಂಬ ಆಶಯದೊಂದಿಗೆ ಸರ್ಕಾರ ನಾನಾ ಯೋಜನೆಗಳನ್ನು ಹಮ್ಮಿಕೊಂಡಿದೆ. ಆದರೆ, ಇಂದಿಗೂ ಅಂಗವಿಕಲರಿಗೆ ನಿರ್ದಿಷ್ಟ ಕೆಲಸವಾಗಲಿ, ವಾಸಿಸಲು ಮನೆಯಾಗಲಿ ಇಲ್ಲ. ಪಿಂಚಣಿ ಸೌಲಭ್ಯವೂ ನಿಯಮಿತವಾಗಿ ಬರುತ್ತಿಲ್ಲ. ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯವೂ ಸಿಗುತ್ತಿಲ್ಲ. ಸ್ವಾವಲಂಬಿ ಜೀವನ ನಡೆಸಲು ನೂರಾರು ಸಂಕಷ್ಟಗಳನ್ನು ಅಂಗವಿಕಲರು ಎದುರಿಸುತ್ತಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ 44,094 ಜನ ಅಂಗವಿಕಲರು ಇದ್ದಾರೆ. ಇವರೆಲ್ಲರೂ ಶೇ.40ರಷ್ಟು ಅಂಗವೈಕಲ್ಯ ಹೊಂದಿದ್ದಾರೆ. ಆದರೆ, ಇವರಲ್ಲಿ ಬಹುತೇಕರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಎಷ್ಟೋ ಜನರಿಗೆ ಬಾಡಿಗೆ ಕಟ್ಟಲೂ ಆಗದಂತಹ ಆರ್ಥಿಕ ಸಂಕಷ್ಟ ಇದೆ. ಹೀಗಾಗಿ ಜಿಲ್ಲಾಡಳಿತ ಅಂಗವಿಕಲರಿಗಾಗಿ ನಗರದಲ್ಲಿ ಪ್ರತ್ಯೇಕ ಬಡಾವಣೆ ಮಾಡಲು ಮುಂದಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮುಡಾ ಆಯುಕ್ತರಿಗೆ ನಗರದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವನ್ನು ಗುರುತಿಸುವಂತೆ ಸೂಚಿಸಿದ್ದಾರೆ. ಇದು ಅಂಗವಿಕಲರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ನಾವು ಸದ್ಯ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ಮನೆ ಮಾಲೀಕರಿಗೆ 4 ತಿಂಗಳಿಂದ ಬಾಡಿಗೆ ಕಟ್ಟಿಲ್ಲ. ಯಾವಾಗ ಮನೆ ಯಿಂದ ಆಚೆ ಹಾಕುತ್ತಾರೋ ಗೊತ್ತಿಲ್ಲ. ನಮಗೂ ಸಾಮಾನ್ಯರಂತೆ ಬದುಕು ನಡೆಸಲು ಸಾಧ್ಯವಿಲ್ಲವೇ? ಸಾಕಷ್ಟು ಅಂಗವಿಕಲರು ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಇದೀಗ ಪ್ರತ್ಯೇಕ ಬಡಾವಣೆ ನಿರ್ಮಿಸಿ ಕೊಟ್ಟರೆ ಸಾಕಷ್ಟು ಅಂಗವಿಕಲರ ಬದುಕು ಬೆಳಕಾಗುತ್ತದೆ ಎಂದು ಹಿರಿಯ ಅಂಗವಿಕಲರೊಬ್ಬರು ತಿಳಿಸಿದ್ದಾರೆ.
ನಗರದ ಎನ್.ಆರ್.ಮೊಹಲ್ಲಾದಲ್ಲಿ 1983-84ನೇ ಸಾಲಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಂಗವಿಕಲರ ಕಾಲನಿಯಡಿ ಮನೆಗಳನ್ನು ನಿರ್ಮಿಸಿ ವಿತರಿಸಿದ್ದರು. ಅದಾದ ನಂತರ ಇದುವರೆಗೂ ಅಂಗವಿಕಲರಿಗೆ ಜಿಲ್ಲಾಡಳಿತವಾಗಲಿ ಅಥವಾ ಸರ್ಕಾರವಾಗಲಿ ಮನೆಗಳನ್ನು ನಿರ್ಮಿಸಿಕೊಟ್ಟಿಲ್ಲ. ಈ ಸಂಬಂಧ 20 ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. 2016ರಲ್ಲಿ ಮೈಸೂರು ಮುಡಾ ಕಚೇರಿ ಎದುರು ಅಂಗವಿಕಲರೆಲ್ಲರೂ ಸೇರಿ ನಿವೇಶನ ನೀಡುವಂತೆ ಪ್ರತಿಭಟನೆ ನಡೆಸಲಾಗಿತ್ತು. ಜತೆಗೆ 2019ರಲ್ಲಿ ದೆಹಲಿಯ ಜಂತರ್‌ಮಂತರ್ ಬಳಿ ನಿವೇಶನಕ್ಕಾಗಿ ಧರಣಿ ನಡೆಸಲಾಗಿತ್ತು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ಇದೀಗ ಜಿಲ್ಲಾಡಳಿತ ಅಂಗವಿಕಲರಿಗಾಗಿ ಪ್ರತ್ಯೇಕ ಕಾಲನಿ ಮಾಡಲು ಚಿಂತನೆ ನಡೆಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಉಪಾಧ್ಯಕ್ಷ ಎಂ.ಪ್ರಭುಸ್ವಾಮಿ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಅಂಗವಿಕಲರ ಕುಂದುಕೊರತೆ ಸಭೆಯಲ್ಲಿ ಬಹುತೇಕ ಅಂಗವಿಕಲರು ತಮಗೆ ಸ್ವಂತ ಸೂರು ಕಲ್ಪಿಸಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ ನಗರದ ಸುತ್ತಮುತ್ತ 2-3 ಎಕರೆ ಜಾಗದಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಬಡಾವಣೆ ನಿರ್ಮಾಣ ಮಾಡಲು ತಿಳಿಸಿದ್ದು, ಮುಡಾದವರಿಗೆ ಜಾಗ ಗುರುತಿಸಲು ಸೂಚಿಸಿದ್ದಾರೆ. ಆ ಕಾಲನಿಯಲ್ಲಿ ವಸತಿ ಸೌಲಭ್ಯದ ಜತೆಗೆ ಕೌಶಲ್ಯಾಭಿವೃದ್ಧಿ ಮಾಡಲು ತಿಳಿಸಿದ್ದಾರೆ. ಅಂಗವಿಕಲರು ಮನೆಯಲ್ಲೇ ಕುಳಿತು ಗೃಹ ಆಧರಿತ ಕೆಲಸ ಮಾಡಬಹುದು. ಆ ಮೂಲಕ ಸ್ವಾವಲಂಬಿ ಜೀವನ ಸಾಗಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ವಿ.ಜ್ಯೋತಿ ತಿಳಿಸಿದ್ದಾರೆ.
2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 44,094 ಅಂಗವಿಕಲರು ಇದ್ದಾರೆ. ಈ ಪೈಕಿ ದೈಹಿಕ ಅಂಗವಿಕಲರು 22,732, ದೃಷ್ಟಿ ದೋಷವುಳ್ಳವರು 7,964, ಶ್ರವಣ ದೋಷವುಳ್ಳವರು 784, ಬುದ್ಧಿಮಾಂದ್ಯರು 3,558, ಮಾನಸಿಕ ಅಸ್ವಸ್ಥರು 981, ಕುಷ್ಠರೋಗ ನಿವಾರಿತರು 846 ಹಾಗೂ ಬಹುವಿಧ ವಿಶೇಷಚೇತನರು 929 ಜನ ಇದ್ದಾರೆ.
ಮುಡಾಗೆ ಸೇರಿರುವ ಎರಡು-ಮೂರು ಎಕರೆ ಇರುವ ಸರ್ಕಾರಿ ಜಾಗದಲ್ಲಿ ವಿಶೇಷಚೇತನರ ಕಾಲನಿ ನಿರ್ಮಾಣ ಮಾಡಬಹುದು. ವಿಶೇಷಚೇತನರು ಆ ಮನೆಯಲ್ಲೇ ಉದ್ಯೊಗ ಮಾಡಬಹುದು. ಅಲ್ಲದೆ, ಮುಡಾದಲ್ಲಿ ಶೇ.5ರಷ್ಟು ನಿವೇಶನವನ್ನು ವಿಶೇಷಚೇತನರಿಗೆ ಮೀಸಲಿಡಲು ಸೂಚನೆ ನೀಡಿದ್ದೇನೆ.ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ ಮೈಸೂರು ನಗರದಲ್ಲಿರುವ ನಿರಾಶ್ರಿತ ವಿಶೇಷಚೇತನರಿಗೆ ನಗರ ವಸತಿ ಯೋಜನೆ ಅಥವಾ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟರೆ ನಾವು ಕೂಡ ಸಾಮಾನ್ಯರಂತೆ ಜೀವನ ನಡೆಸಲು ಅವಕಾಶ ಸಿಗುತ್ತದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸಬೇಕು.ಪ್ರಭುಸ್ವಾಮಿ, ಉಪಾಧ್ಯಕ್ಷ, ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ