

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಪ್ರವಾಹ ಪೀಡಿತ ಹಾಗೂ ಮಳೆಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಜಾಂಬೋಟಿ ರಸ್ತೆಯ ಕುಸುಮಳ್ಳಿ ಸೇತುವೆ ವೀಕ್ಷಿಸಿ, ಬಳಿಕ ಖಾನಾಪುರದಿಂದ ಜಾಂಬೋಟಿಗೆ ಸಂಪರ್ಕ ಕಲ್ಪಿಸುವ ಮಧ್ಯದಲ್ಲಿ ಮಲಪ್ರಭಾ ನದಿಗೆ ನಿರ್ಮಿಸಿರುವ ಸೇತುವೆ ಸ್ಥಿತಿಗತಿ ಪರಿಶೀಲಿಸಿದರು. ಖಾನಾಪುರ ಪ್ರವಾಸಿಮಂದಿರದಲ್ಲಿ ವಿವಿಧ ಗ್ರಾಮಗಳ ಜನರ ಅಹವಾಲು ಆಲಿಸಿದರು. ಈ ವೇಳೆ ಮಲಪ್ರಭಾ ನದಿತೀರದ ಹಿರೇಹಟ್ಟಿಹೊಳಿ ಗ್ರಾಮಸ್ಥರು ನಮ್ಮ ಗ್ರಾಮ ಪ್ರತಿ ವರ್ಷ ಜಲಾವೃತಗೊಂಡು ವೈದ್ಯಕೀಯ ಸೌಲಭ್ಯ, ಶಿಕ್ಷಣ ಮತ್ತಿತರ ಮೂಲ ಸೌಕರ್ಯ ಸಿಗುತ್ತಿಲ್ಲ. ಆದ್ದರಿಂದ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
15 ಗ್ರಾಮಗಳ ಜನರ ಸ್ಥಳಾಂತರಕ್ಕೆ ಸಿದ್ಧ:
ಸಚಿವ ಸತೀಶ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿ, ಖಾನಾಪುರ ತಾಲೂಕಿನ ಕಾಡಂಚಿನ 15 ಗ್ರಾಮಗಳನ್ನು ಪಟ್ಟಿ ಮಾಡಲಾಗಿದ್ದು, ಅವರಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಇಲ್ಲವೆ ಅಲ್ಲಿನ ಜನರನ್ನು ಸ್ಥಳಾಂತರಿಸುವ ಕುರಿತು ಯೋಚಿಸಲಾಗುವುದು ಎಂದರು. ಹೊಸ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆಯಿಂದ ಅನುಮತಿಯಿಲ್ಲ. ನೂರಾರು ವರ್ಷಗಳಿಂದ ಜನರು ಅಂತಹ ಪ್ರದೇಶದಲ್ಲಿ ವಾಸವಿದ್ದಾರೆ. ಈ ಕುರಿತು ಈಗಾಗಲೇ ಅರಣ್ಯ ಸಚಿವರು ಹಾಗೂ ಸ್ಥಳೀಯ ಶಾಸಕರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಅರಣ್ಯ ಸಚಿವರಿಗೆ ಇಲ್ಲಿನ ಸ್ಥಿತಿಗತಿಗಳನ್ನು ವಿವರಿಸಲಾಗುವುದು ಎಂದರು.
ಈಚೆಗೆ ಕಾಡಂಚಿನ ಅಮಗಾಂವ ಗ್ರಾಮದ ಮಹಿಳೆ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿರುವ ಪ್ರಕರಣಕದ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆಯಲಾಗಿದೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಲು ವಾಹನ ವ್ಯವಸ್ಥೆ, ಆಂಬುಲೆನ್ಸ್ ಹೋಗಲು ಸರಿಯಾದ ರಸ್ತೆ ಇಲ್ಲ, ನೆಟವರ್ಕ್ ಸಮಸ್ಯೆ ಇದೆ ಎಂಬುದು ತಿಳಿದುಬಂದಿದೆ. ರೇಶನ್ ಪಡೆಯಲು ಕಾಡಂಚಿನ ಗ್ರಾಮಸ್ಥರು ಪರದಾಡುವಂತಾಗಿದೆ. ಶೇ.80 ಜನರು ಒಪ್ಪಿದರೆ ಅವರನ್ನು ಬೇರೆಡೆ ಸ್ಥಳಾಂತರಿಸಬಹುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಖಾನಾಪುರದ ಹಳೆಯ ಸೇತುವೆಗಳ ಮೇಲೆ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಮಳೆಗಾಲ ಮುಗಿದ ಬಳಿಕ ಹೊಸ ಸೇತುವೆ ನಿರ್ಮಾಣಕ್ಕೆ ಸೂಚಿಸಲಾಗುವುದು ಎಂದರು.
ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್ಪಿ ಡಾ.ಭೀಮಾಶಂಕರ ಗುಳೇದ ಇತರರಿದ್ದರು.