

ಬ್ಯಾಡಗಿ: ಮುಖ್ಯಮಂತ್ರಿಗಳೇ ಖುದ್ದಾಗಿ ಆಸಕ್ತಿ ವಹಿಸಿ ರಾಜ್ಯದ ಕೆರೆ-ಕಟ್ಟೆಗಳನ್ನು ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಿದ್ದು, ಎಲ್ಲ ತಾಲೂಕುಗಳಲ್ಲಿ ಯೋಜನೆಗೆ ಚಾಲನೆ ಸಿಗಲಿದೆ. ಬ್ಯಾಡಗಿ ವಿಧಾನಸಭೆ ಕ್ಷೇತ್ರದ ಬಹುತೇಕ ಕೆರೆಗಳಿಗೆ ಈ ಭಾಗ್ಯ ದೊರಕಲಿದೆ ಎಂದು ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಚಿಕ್ಕಣಜಿ ತಾಂಡಾದಲ್ಲಿ ಬಸ್ ನಿಲ್ದಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 2013ರಲ್ಲಿ ಶಾಸಕನಾಗಿದ್ದಾಗ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಗೆ ಪೂರ್ಣಗೊಳಿಸಿ ಸುಮಾರು 13 ಸಾವಿರ ಹೆಕ್ಟೇರ್ ಜಮೀನಿಗೆ ನೀರು ಒದಗಿಸಲಾಗಿದೆ. ಈಗ ಹೆಚ್ಚುವರಿಯಾಗಿ 120 ಕೋಟಿ ರೂ.ವೆಚ್ಚದಲ್ಲಿ ಏತ ನೀರಾವರಿ ಕಾಲುವೆಗಳಲ್ಲಿ ಪೈಪ್ಲೈನ್ ಅಳವಡಿಸಲು ಡಿಪಿಆರ್ ಸಿದ್ಧಪಡಿಸಿದ್ದು, ೕಘ್ರದಲ್ಲೆ ಮಂಜೂರಾತಿ ಸಿಗಲಿದೆ. ಇದರಿಂದ 150ಕ್ಕೂ ಹೆಚ್ಚು ಕೆರೆಗಳಿಗೆ ನದಿನೀರು ತುಂಬಿಸಲಾಗುತ್ತದೆ ಎಂದರು.
ಐದು ವರ್ಷದ ಅವಧಿಯಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಎಲ್ಲ ಮೂಲಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಹರಿದು ಹೋಗುವ ನೀರನ್ನು ತಡೆಗಟ್ಟಿದಲ್ಲಿ ಅಂತರ್ಜಲ ಹೆಚ್ಚಳದಿಂದ ರೈತರಿಗೆ ಸಮರ್ಪಕ ನೀರಾವರಿಯೊಂದಿಗೆ ಪರಿಸರ ಕಾಪಾಡಲು ಸಾಧ್ಯವಿದೆ ಎಂದರು.
ಮಂಜನಗೌಡ್ರ ಲಿಂಗನಗೌಡ್ರ, ಸುರೇಶಗೌಡ್ರ ಪಾಟೀಲ, ಪ್ರಭುಗೌಡ ಪಾಟೀಲ, ವೀರನಗೌಡ ಶಿವನಗೌಡ್ರ, ಗ್ರಾಪಂ ಸದಸ್ಯರಾದ ಬಸವರಾಜ ಕೋಣನವರ, ಜಯಪ್ಪ ಲಮಾಣಿ, ಮಾರುತಿ ಅಚ್ಚಿಗೇರಿ ಇದ್ದರು.