

ಕುಷ್ಟಗಿ: ಗಳಿಸುವ ಅಂಕದ ಮೇಲೆ ಸಾಧನೆ ನಿರ್ಧಾರವಾಗುವುದಿಲ್ಲ ಎಂದು ದುಬೈನಲ್ಲಿ ನೆಲೆಸಿರುವ ಕುಷ್ಟಗಿ ಮೂಲದ ಉದ್ಯಮಿ ಗುಣಶೀಲ ಶೆಟ್ಟಿ ಉಡುಪಿ ಹೇಳಿದರು.
ಪಟ್ಟಣದ ಬುತ್ತಿಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಧಾರವಾಡದ ವಿದ್ಯಾಪೋಷಕ ಸಂಸ್ಥೆಯ ತಾಲೂಕು ಘಟಕ ಏರ್ಪಡಿಸಿದ್ದ ಶಿಕ್ಷಣಕ್ಕಾಗಿ ಆರ್ಥಿಕ ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಜತೆಗೆ ವಿಶೇಷ ಗುಣಗಳಿರಬೇಕು. ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಪಡೆದ ಬಹುತೇಕರು ಸಾಧನೆಯ ಉತ್ತುಂಗಕ್ಕೇರಿದ ಹಾಗೂ ಹೆಚ್ಚು ಅಂಕ ಪಡೆದವರು ಜೀವನದಲ್ಲಿ ಸೋಲುಂಡ ಉದಾಹರಣೆಗಳಿವೆ. ಸಕಾರಾತ್ಮಕ ಯೋಚನೆಯೊಂದಿಗೆ ಸಾಧನೆಗೆ ಮುಂದಾಗಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬಾಲಕಿಯರ ಸರ್ಕಾರಿ ಪಪೂ ಕಾಲೇಜು ನಿವೃತ್ತ ಪ್ರಾಚಾರ್ಯ ಡಿ.ಬಿ.ಗಡೇದ್ ಮಾತನಾಡಿ, ಹಲವು ವಿಧದ ದಾನಗಳಿಂದ ವ್ಯಕ್ತಿ ದೊಡ್ಡವನಾಗುತ್ತಾನೆ. ನೆರವು ನೀಡಿದವರಿಗೆ ಋಣಿಯಾಗಿರಬೇಕು. ಸಾಧಕರ ಜೀವನ ಸಾಧನೆಯ ಅಧ್ಯಯನ ಮಾಡುವ ಮೂಲಕ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ವಿದ್ಯಾಪೋಷಕ ಸಂಸ್ಥೆಯ ರತ್ನಾ ಹಿಪ್ಪರಗಿ ಮಾತನಾಡಿ, ವಿದ್ಯಾಪೋಷಕ ಸಂಸ್ಥೆ ದಾನಿಗಳ ಸಹಾಯದಿಂದ ರಾಜ್ಯದ 12 ಜಿಲ್ಲೆಗಳಲ್ಲಿ 18 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆರ್ಥಿಕ ನರವು ನೀಡಲಾಗುತ್ತಿದೆ ಎಂದರು. ರಾಜಸ್ಥಾನದಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಕಂದಕೂರಿನ ರಮೇಶ ಗುಮಗೇರಿ, ನಿವೃತ್ತ ಶಿಕ್ಷಕ ಈಶ್ವರಪ್ಪ ನಾಲ್ವಾಡ್, ರಾಯಚೂರು ಜಿಲ್ಲೆ ದೇವನಪಲ್ಲಿಯ ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ರಾಜಶೇಖರಯ್ಯ ಹಿರೇಮಠ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವಂದನಾ ಗೋಗಿ ಮಾತನಾಡಿದರು.
ಪ್ರಮುಖರಾದ ಭರತೇಶ ಜೋಶಿ, ಬಾಬು ಘೋರ್ಪಡೆ, ಶಾಂತರಾಜ ಗೋಗಿ, ವೀರೇಶ ಬಂಗಾರಶೆಟ್ಟರ್, ಬಸವರಾಜ ಕೋಳೂರು, ಅಮರೇಶ ಮುದೇನೂರು, ರವಿ ಪಾಲನಕರ್, ಬಸವರಾಜ ಕುಡತಿನಿ ಇತರರು ಇದ್ದರು. ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.