

ಶ್ರೀರಂಗಪಟ್ಟಣ: ಕವಿಗಳು ಸಮಗ್ರ ಭಾರತ ನಿರ್ಮಾಣದ ಮನಸ್ಥಿತಿಯಲ್ಲಿ ನೂರು ಬಾರಿ ಯೋಚಿಸಿ ಕವಿತೆಗಳನ್ನು ರಚಿಸಬೇಕು ಎಂದು ಹಿರಿಯ ಸಾಹಿತಿ ಪ್ರದೀಪ್‌ಕುಮಾರ್ ಹೆಬ್ರಿ ತಿಳಿಸಿದರು.
ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ನಾಡಹಬ್ಬ ದಸರೆಯ ಪ್ರಯುಕ್ತ ಮಂಗಳವಾರ ಶ್ರೀರಂಗ ವೇದಿಕೆಯಲ್ಲಿ ಆಯೋಜಿಸಿದ್ದ ಪ್ರಧಾನ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಭಾರತವನ್ನು ಸಮಾನತೆ ಹಾಗೂ ಸೌಹಾರ್ದಯುತವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಕವಿತೆಗಳು ಕವಿಗಳ ಮನಸ್ಸಿನಲ್ಲಿ ಮೂಡಬೇಕು. ಪ್ರಾಥಮಿಕ ಶಾಲೆಯ ಹಂತದಿಂದಲೇ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಕವಿತೆ ಹಾಗೂ ಸಾಹಿತ್ಯಗಳಲ್ಲಿ ತೊಡಗಿಕೊಳ್ಳುವ ಕೆಲಸ ನಮ್ಮಲ್ಲಾಗಿ ಕನ್ನಡ ನುಡಿಯ ಶ್ರೀಮಂತಿಕೆ ಮೇಳೈಸಬೇಕಿದೆ ಎಂದರು.
ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ವೂಸ್ಕೂರು ಕೃಷ್ಣಮೂರ್ತಿ ಉದ್ಘಾಟಿಸಿದರು. ಕವಿಗಳಾದ ಮಂಡ್ಯದ ರೋಷನ್ ಚೋಪ್ರಾ, ನಿವೃತ್ತ ಶಿಕ್ಷಕ ಸಾವೇರಸ್ವಾಮಿ, ಚಿಂದಗಿರಿಕೊಪ್ಪಲು ಸಿ.ಸ್ವಾಮಿ, ಕ್ಷೇತ್ರ ಶಿಕ್ಷಣ ಸಂಯೋಜಕಿ ಡಾ.ಪ್ರತಿಮಾ, ಹಿರಿಯ ಪತ್ರಕರ್ತ ಗಣಂಗೂರು ನಂಜೇಗೌಡ, ಪೊಲೀಸ್ ಸಿಬ್ಬಂದಿ ಲೋಕೇಶ್ ಕಲ್ಕುಣಿ ಸೇರಿದಂತೆ ಹಲವರು ಕವಿತೆಗಳನ್ನು ವಾಚಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಎಂ.ಬಿ.ಕುಮಾರ್, ಕಾರ್ಯದರ್ಶಿ ಗೌಡಹಳ್ಳಿ ದೇವರಾಜು, ಹೋಬಳಿ ಅಧ್ಯಕ್ಷ ಚಂದಗಾಲು ಶಂಕರ್, ದರಸಗುಪ್ಪೆ ಲೋಕೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪ್ರಾಣೇಶ್ ಇತರರು ಉಪಸ್ಥಿತರಿದ್ದರು.
ವಿಗೋಷ್ಠಿಯಲ್ಲಿ ಅವ್ಯವಸ್ಥೆ: ನಾಡಹಬ್ಬ ಶ್ರೀರಂಗಪಟ್ಟಣ ದಸರಾ ಪ್ರಯುಕ್ತ ಆಯೋಜಿಸಿದ್ದ ದಸರಾ ಪ್ರಧಾನ ಕವಿಗೋಷ್ಠಿ ಅಧ್ವಾನದಲ್ಲಿ ಆಯೋಜನೆಗೊಂಡು ಮುಜುಗರದ ನಡುವೆ ಮುಕ್ತಾಯವಾಯಿತು.
ಶ್ರೀರಂಗ ವೇದಿಕೆಯಲ್ಲಿ ಆಯೋಜಿಸಿದ್ದ ಕವಿಗೋಷ್ಠಿ ನಿಗದಿಯಂತೆ ಮಧ್ಯಾಹ್ನ 2 ಗಂಟೆಗೆ ಶುರುವಾಗದೆ 2 ತಾಸು ತಡವಾಗಿ ಪ್ರಾರಂಭವಾಯಿತು. ಮಂಗಳವಾರ ಸಂಜೆ ನಡೆಯುವ ಮ್ಯೂಸಿಕಲ್ ರಸಸಂಜೆ ಕಾರ್ಯಕ್ರಮಕ್ಕಾಗಿ ಸಂಗೀತ ವಾದಕರು ತಂಡದವರು ವೇದಿಕೆಯಲ್ಲಿ 5 ತಾಸು ಮುಂಚೆಯೇ ಸಜ್ಜುಗೊಳಿಸುತ್ತಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಕವಿತೆ ವಾಚಿಸಲು ಆಗಮಿಸಿದ್ದ ಕವಿಗಳಿಗೆ ವೇದಿಕೆ ಬಿಟ್ಟುಕೊಡದ ಕಾರಣ ಕಾರ್ಯಕ್ರಮಗಳ ಆಯೋಜಕರ ನಡುವೆ ಗದ್ದಲ ಏರ್ಪಟ್ಟಿತ್ತು.
ಈ ವೇಳೆ ಮ್ಯೂಸಿಕಲ್ ರಸಸಂಜೆ ತಂಡದ ಪರವಾಗಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟೆಂಟ್ ಸುರೇಶ್ ವಾದಿಸಿ ಕವಿಗೋಷ್ಠಿ ವಾಚನಕ್ಕೆ ಕೆಲಗಂಟೆ ತಡವಾದರೂ ಪರವಾಗಿಲ್ಲ, ಸಂಗೀತ ತಂಡದವರು ಮೊದಲು ಸಿದ್ಧಪಡಿಸಿಕೊಳ್ಳಲಿ ಎಂದ ಕಾರಣ ಸ್ಥಳದಲ್ಲಿ ನೆರೆದಿದ್ದವರು ಏರುದನಿಯಲ್ಲಿ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಕವಿಗೋಷ್ಠಿಗೆ ಕೂಡಲೇ ವೇದಿಕೆ ಬಿಟ್ಟುಕೊಡುವಂತೆ ತಾಕೀತು ಮಾಡಿದರು.
ಮತ್ತೊಂದೆಡೆ ಕವಿಗೋಷ್ಠಿ ಉದ್ಘಾಟನೆಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಆಗಮನಕ್ಕಾಗಿ ಕಾದಿದ್ದ ತಾಲೂಕು ಕಸಾಪ ಕವಿತೆಗಳ ವಾಚನಕ್ಕೆ ಕವಿಗಳಿಗೆ ಅವಕಾಶ ಕಲ್ಪಿಸಿ ಉದ್ಘಾಟನೆ ಮುಂದೂಡಿದ್ದು, ಶಾಸಕರು ಬಾರದ ಸ್ಥಿತಿಯನ್ನು ಅರಿತು ಕೊನೆಗೆ ಮುಕ್ತಾಯ ಹಂತದ ವೇಳೆಗೆ ಮತ್ತೊಬ್ಬ ಗಣ್ಯರಿಂದ ಕವಿಗೋಷ್ಠಿ ಉದ್ಘಾಟನೆ ಮಾಡಿಸಿದ್ದು, ಚರ್ಚೆಗೆ ಗ್ರಾಸವಾಯಿತು.