

ಎಂ.ಎನ್.ಕೋಟೆ: ಗುಬ್ಬಿ ತಾಲೂಕಿನ ತಿಮ್ಮಪ್ಪನಟ್ಟಿ ಗ್ರಾಮದ ಶ್ರೀ ತಿಮ್ಮಪ್ಪಸ್ವಾಮಿ ಜಾತ್ರಾ ಮಹೋತ್ಸವ ಬುಧವಾರ ಅದ್ದೂರಿಯಾಗಿ ನೆರವೇರಿತು.
ಮೂರು ದಿನಗಳ ಕಾಲ ನಡೆದ ಮಹೋತ್ಸವದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ, ಭಕ್ತರಿಗೆ ಪ್ರಸಾದ ವಿನಿಯೋಗ ಆಯೋಜಿಸಲಾಗಿತ್ತು. ರಾತ್ರಿ ತಿಮ್ಮಪ್ಪನಟ್ಟಿ ಗ್ರಾಮಸ್ಥರಿಂದ ಸ್ವಾಮಿಗೆ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಿಮ್ಮಪ್ಪ ಸ್ವಾಮಿ ಹಾಗೂ ಬೇವಿನಹಳ್ಳಿ ಕರಿಯಮ್ಮದೇವರ ಉತ್ಸವ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಲಿಂಗದ ವೀರರ ಕುಣಿತ, ಬಾಣ ಬಿರುಸು, ಚಿಟ್ಟಿಮೇಳ ಮೆರವಣಿಗೆಗೆ ಮೆರಗು ನೀಡಿತು. ಭಕ್ತರಿಗೆ ಮಹಾ ದಾಸೋಹ ಏರ್ಪಡಿಸಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ತಿಮ್ಮಪ್ಪಸ್ವಾಮಿ ದರ್ಶನ ಪಡೆದರು.
ಮುಖಂಡ ಶಶಿಧರ್ ಮಾತನಾಡಿ, ತಿಮ್ಮಪ್ಪಸ್ವಾಮಿಯ ದೀಪಾವಳಿ ಜಾತ್ರಾ ಮಹೋತ್ಸವನ್ನು ಪ್ರತಿವರ್ಷ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದು, ಊರಿನ ಗ್ರಾಮಸ್ಥರು ಸೇರಿ ದೀಪಾವಳಿ ಜಾತ್ರೆಯನ್ನು ಮಾಡುತ್ತೇವೆ ಎಂದು ತಿಳಿಸಿದರು.