ತಿಮ್ಮಲಾಪುರದಲ್ಲಿ ಬಳ್ಳಾರಿ ಡಿಸಿ ಪವನಕುಮಾರ್ ಮಾಲಪಾಟಿ ವಾಸ್ತವ್ಯ: ಜನರ ಸಮಸ್ಯೆಗಳಿಗೆ ಸ್ಪಂದನೆ

Thimmalapura Village DC Gramavastavyya
ತಿಮ್ಮಲಾಪುರದಲ್ಲಿ ವಿದ್ಯಾರ್ಥಿಗಳೊಂದಿಗೆ ಡಿಸಿ ಪವನಕುಮಾರ್ ಊಟ ಮಾಡಿದರು.
Published on

ಬಳ್ಳಾರಿ: ಸರ್ಕಾರದ ಸೂಚನೆಯಂತೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಶನಿವಾರ ಹೊಸಪೇಟೆ ತಾಲೂಕಿನ ತಿಮ್ಮಲಾಪುರದಲ್ಲಿ ಗ್ರಾಮವಾಸ್ತವ್ಯ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದರು. ಆಯಾ ತಾಲೂಕಿನ ತಹಸೀಲ್ದಾರ್ ಸೇರಿ ಇತರ ಅಧಿಕಾರಿಗಳು ವಿವಿಧ ಹಳ್ಳಿಗಳಿಗೆ ತೆರಳಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.

ತಿಮ್ಮಲಾಪುರಕ್ಕೆ ಡಿಸಿ ಆಗಮಿಸುತ್ತಲೇ ದಾರಿಯುದ್ದಕ್ಕೂ ನೆರೆದಿದ್ದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಖುಷಿಯಿಂದ ಸ್ವಾಗತಿಸಿದರು. ಅನೇಕ ಸಮಸ್ಯೆಗಳಿಗೆ ಡಿಸಿ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದರು. ಉಳಿದವುಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮಧ್ಯಾಹ್ನ ಅವರೊಂದಿಗೆ ಊಟವನ್ನೂ ಸವಿದರು.

ತದನಂತರ ಅಧಿಕಾರಿಗಳೊಂದಿಗೆ ತಾಳೆಬಸಾಪುರ ಗ್ರಾಮದ ಬಳಿ ನರೇಗಾ ಯೋಜನೆಯಡಿ ಅರಣ್ಯ ಇಲಾಖೆ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಿದರು. ತಾಳೆವನದಲ್ಲಿ ಇಂಗುಗುಂಡಿ ಕಾಮಗಾರಿ ಪರಿಶೀಲಿಸಿ, ಕಾರ್ಮಿಕರಾದ ನಾಗಮ್ಮ, ಅಡಿವೆಪ್ಪ ಸೇರಿ ಇತರ ಕಾರ್ಮಿಕರಿಂದ ಮಾಹಿತಿ ಪಡೆದರು. ಬಳಿಕ ಗ್ರಾಮದ ಜಂಬಯ್ಯನ ಕೆರೆ ಪರಿಶೀಲಿಸಿ, ಕೆರೆ ಸಂಬಂಧಿತ ಸಮಸ್ಯೆಗಳ ಕುರಿತು ಗ್ರಾಮಸ್ಥರ ಜತೆ ಚರ್ಚಿಸಿದರು. ಗ್ರಾಮಸ್ಥರು ನಾಲೆಯಿಂದ ಕೆರೆಗೆ ನೀರು ಹರಿಸಬೇಕೆಂದು ಮನವಿ ಮಾಡಿದರು.

ನಂತರ ಹುಲಿಕುಂಟೆ ಕ್ರಾಸ್ ಹಾಗೂ ತಿಮ್ಮಲಾಪುರ ಬಳಿಯ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಅಭಿವೃದ್ಧಿಗೆ ಕ್ರಮಕೈಗೊಳ್ಳುವುದಾಗಿ ಡಿಸಿ ತಿಳಿಸಿದರು. ತಿಮ್ಮಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದ ವೇದಿಕೆ ಬದಿ ವಿವಿಧ ಇಲಾಖೆಗಳ ಯೋಜನೆಗಳ ವಸ್ತು ಪ್ರದರ್ಶನ ಗಮನ ಸೆಳೆಯಿತು. ಎಡಿಸಿ ಪಿ.ಎಸ್.ಮಂಜುನಾಥ, ಎಸಿ ಸಿದ್ದರಾಮೇಶ್ವರ, ತಹಸೀಲ್ದಾರ್ ವಿಶ್ವನಾಥ, ತಾಪಂ ಇಒ ವಿಶ್ವನಾಥ ಸೇರಿ ವಿವಿಧ ಇಲಾಖೆ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net