

| ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ-ಜನರಲ್ ಕೆ.ಎಸ್. ತಿಮ್ಮಯ್ಯ ದೇಶ-ವಿದೇಶದಲ್ಲಿ ಕೊಡಗಿಗೆ ಹೆಸರು ತಂದುಕೊಟ್ಟ ಮಹಾನ್ ನಾಯಕರು. ಇಂದಿಗೂ ಈ ಇಬ್ಬರು ಮಹಾನ್ ಚೇತನಗಳ ಹೆಸರಿನಲ್ಲಿ ಕೊಡಗು ಗುರುತಿಸಲ್ಪಟ್ಟಿದೆ. ಕಾರ್ಯಪ್ಪಜ್ಜ, ತಿಮ್ಮಯ್ಯಜ್ಜ ಹೆಸರು ಹೇಳುವಾಗ, ಕೇಳುವಾಗ ಕೊಡಗಿನವರು ರೋಮಾಂಚನಗೊಳ್ಳುತ್ತಾರೆ. ಇದೀಗ ಸಜ್ಜುಗೊಂಡಿರುವ ಜನರಲ್ ಕೆ.ಎಸ್. ತಿಮ್ಮಯ್ಯ ಸ್ಮಾರಕ ಕೊಡಗಿಗೆ ಕಿರೀಟದಂತಿದೆ.
ಕೊಡಗು, ಕೊಡವರು, ಸೇನಾ ಪರಂಪರೆ, ಜನರಲ್ ಕೆ.ಎಸ್. ತಿಮ್ಮಯ್ಯ ಮತ್ತು ಅವರ ಕುಟುಂಬಸ್ಥರ ಬಗ್ಗೆ ತಿಳಿದುಕೊಳ್ಳಲು ಮ್ಯೂಸಿಯಂಗೆ ಒಮ್ಮೆ ಭೇಟಿ ನೀಡಿದರೆ ಸಾಕು. ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಧಾರ್ವಿುಕ ಕ್ಷೇತ್ರ ಹೊರತುಪಡಿಸಿದಂತೆ ವೀಕ್ಷಿಸಲು ವಿಶೇಷ ಸ್ಥಳ ಇಲ್ಲ ಎಂಬ ಕೊರಗನ್ನು ಮ್ಯೂಸಿಯಂ ದೂರ ಮಾಡಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ರಾಜ್ಯ ಸರ್ಕಾರ ಮ್ಯೂಸಿಯಂ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ವಿನಿಯೋಗಿಸಿದೆ. ಎಚ್.ಡಿ.ಕುಮಾರಸ್ವಾಮಿ ಮೊದಲು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜನರಲ್ ಕೆ.ಎಸ್.ತಿಮ್ಮಯ್ಯ ಜನಿಸಿದ ಮನೆ ಸನ್ನಿಸೈಡ್ ಅನ್ನು ಮ್ಯೂಸಿಯಂ ಮಾಡುವ ಘೊಷಣೆ ಮಾಡಿದರು. ಹಲವು ವರ್ಷಗಳ ಸತತ ಪ್ರಯತ್ನದಿಂದ ಸಾರಿಗೆ ಇಲಾಖೆಯಿಂದ ಸನ್ನಿಸೈಡ್ ಮನೆ ಮತ್ತು ಜಾಗ ವಶಕ್ಕೆ ತೆಗೆದುಕೊಳ್ಳಲಾಯಿತು. ಅಲ್ಲಿಂದ ಕಚೇರಿ, ವಸತಿಗೃಹ ಸ್ಥಳಾಂತರಿಸಲಾಯಿತು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ- ಜನರಲ್ ಕೆ.ಎಸ್.ತಿಮ್ಮಯ್ಯ ಫೋರಂ ಮ್ಯೂಸಿಯಂಗಾಗಿ ನಿರಂತರ ಪ್ರಯತ್ನ ನಡೆಸುತ್ತಾ ಬಂದಿತ್ತು. ಅದರಲ್ಲೂ ಫೋರಂ ಸಂಚಾಲಕ ಮೇಜರ್ ಬಿದ್ದಂಡ ನಂದ ನಂಜಪ್ಪ ತಮ್ಮ ಕನಸಿನ ಮ್ಯೂಸಿಯಂ ರೂಪಿಸಲು ನಿದ್ದೆಗೆಟ್ಟು ಶ್ರಮಿಸಿದರು. ಅದರ ಫಲವಾಗಿ ಈಗ ಅದ್ಭುತವಾದ ಮತ್ತು ಸಮಾಜಕ್ಕೆ ಮಾರ್ಗದರ್ಶನ ನೀಡುವ ಮ್ಯೂಸಿಯಂ ಸಜ್ಜುಗೊಂಡಿದೆ.
ಒಮ್ಮೆ ಮ್ಯೂಸಿಯಂಗೆ ಭೇಟಿ ನೀಡಿದರೆ ನೀವು ದೊಡ್ಡ ಇತಿಹಾಸ ತಿಳಿದುಕೊಂಡು ಹೊರಬರಬಹುದು. ತರಾತುರಿಯಲ್ಲಿ ಇಲ್ಲಿಗೆ ಭೇಟಿ ನೀಡುವುದಕ್ಕಿಂತ ನಾಲ್ಕೈದು ಗಂಟೆ ಬಿಡುವು ಮಾಡಿಕೊಂಡು ಮುಕ್ತ ಮನಸ್ಸಿನಿಂದ ಆಗಮಿಸಬೇಕು. ದೈನಂದಿನ ಬದುಕಿನ ಜಂಜಾಟ ಹೊತ್ತು ಇಲ್ಲಿಗೆ ಭೇಟಿ ನೀಡಿದರೆ ಪ್ರಯೋಜನವಾಗದು. ಪ್ರತಿಯೊಂದು ವಿಚಾರ ಆಸಕ್ತಿಯಿಂದ ತಿಳಿದುಕೊಂಡಲ್ಲಿ ನಿಮ್ಮ ಜ್ಞಾನ ವೃದ್ಧಿ ಆಗುವುದು ನಿಶ್ಚಿತ.
3.25 ಕೋಟಿ ರೂಪಾಯಿ ವಿನಿಯೋಗಿಸಿ ಮೊದಲ 2 ಹಂತದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಉದ್ಯಾನ, ವಸತಿಗೃಹ ಸೇರಿದಂತೆ 3ನೇ ಹಂತದ ಕಾಮಗಾರಿಗೆ ರಾಜ್ಯ ಸರ್ಕಾರ ಇನ್ನೂ 1.75 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕಾಗಿದೆ. ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವರಾಗಿದ್ದಾಗ ಅನುದಾನ ಬಿಡುಗಡೆ ಮಾಡಿಸಿದ್ದರು. ಆಡಳಿತಾರೂಢ ಬಿಜೆಪಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ 3ನೇ ಹಂತದ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಬೇಕೆಂದು ಮೇಜರ್ ಬಿದ್ದಂಡ ನಂದ ನಂಜಪ್ಪ ಹೇಳುತ್ತಾರೆ.
ಗಮನ ಸೆಳೆಯುವ ಟ್ಯಾಂಕರ್-ವಿಮಾನ
ಸ್ಮಾರಕ ಆವರಣ ಪ್ರವೇಶಿಸುತ್ತಿದ್ದಂತೆ ಪ್ರವೇಶ ದ್ವಾರದ ಸಮೀಪದಲ್ಲಿಯೇ ಯುದ್ಧ ಸ್ಮಾರಕ ನಿರ್ವಿುಸಲಾಗಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಿಗೆ ಇಲ್ಲಿ ಗೌರವ ಸೂಚಿಸಬಹುದು. ಯುದ್ಧ ಸ್ಮಾರಕದ ಸಮೀಪ ಭಾರತೀಯ ಸೇನೆ ಬಳಸಿದ್ದ ಯುದ್ಧ ಟ್ಯಾಂಕರ್ ಮತ್ತು ಯುದ್ಧ ವಿಮಾನ ಪ್ರದರ್ಶನಕ್ಕೆ ಇಡಲಾಗಿದೆ.
ತಿಮ್ಮಯ್ಯ ಧ್ವನಿ ಮೂಲಕವೇ ವಿವರಣೆ!
ಜನರಲ್ ಕೆ.ಎಸ್.ತಿಮ್ಮಯ್ಯ ಮ್ಯೂಸಿಯಂನಲ್ಲಿ ತಮ್ಮ ಮನೆ ಬಗ್ಗೆ ತಿಮ್ಮಯ್ಯ ಅವರೇ ಮಾಹಿತಿ ನೀಡುವಂತೆ ರೂಪಿಸಲಾಗಿದೆ. ತಿಮ್ಮಯ್ಯ ಅವರ ಧ್ವನಿಯನ್ನೇ ಹೋಲುವ ಧ್ವನಿಯ ಮೂಲಕ ನಿರೂಪಣೆ ಮಾಡಲಾಗಿದೆ. ಮ್ಯೂಸಿಯಂ ಒಳ ಪ್ರವೇಶಿಸುತ್ತಿದ್ದಂತೆ ನಿಮಗೆ ಅದ್ಭುತ ಲೋಕಕ್ಕೆ ಪ್ರವೇಶಿಸಿದ ಅನುಭವ ನೀಡುತ್ತದೆ. ಸೇನಾ ಸಮವಸ್ತ್ರ, ಪದಕ ಸಹಿತ ಇರುವ ತಿಮ್ಮಯ್ಯ ಪುತ್ಥಳಿಗೆ ಕೈಮುಗಿದು ಒಳಪ್ರವೇಶಿಸಬಹುದು.
ಬ್ರಿಟಿಷ್ ಸೇನಾಧಿಕಾರಿ ಕ್ಲೌಡ್ ಜಾನ್ಐರ್ ಆಚಿನ್ಲೆಕ್, ಸನ್ನಿಸೈಡ್ನಲ್ಲಿ ತಿಮ್ಮಯ್ಯ ಅವರನ್ನು ಭೇಟಿ ಮಾಡಿದ್ದರು. ತಿಮ್ಮಯ್ಯ ಕುಟುಂಬದೊಂದಿಗೆ ಕ್ಲೌಡ್ ಇರುವ ಅಪರೂಪದ ಚಿತ್ರ ಗಮನ ಸೆಳೆಯುತ್ತದೆ. ಭಾರತೀಯ ಸೇನೆಯ ಅತ್ಯುನ್ನತ ಹುದ್ದೆಯಲ್ಲಿದ್ದ ಸಂದರ್ಭದಲ್ಲಿಯೂ ತಿಮ್ಮಯ್ಯ ಮನೆಯಿಂದ ಕಚೇರಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಇದು ಅವರ ಸರಳತೆಗೆ ಸಾಕ್ಷಿ. ಈ ಚಿತ್ರ ಇಲ್ಲಿನ ವಿಶೇಷ ಆಕರ್ಷಣೆ ಕೂಡ ಆಗಿದೆ.
ಸೇವಾ ಮಾಹಿತಿ
ತಿಮ್ಮಯ್ಯ ಅವರು ಭಾರತೀಯ ಸೇನಾಧಿಕಾರಿಯಾಗಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿದ ಸೇವೆಯನ್ನು 2 ಪ್ರತ್ಯೇಕ ಕೊಠಡಿಯಲ್ಲಿ ಪರಿಚಿಯಿಸಿದೆ. ಈ ಕೋಣೆಗಳು ಮ್ಯೂಸಿಯಂ ಪಾಲಿಗೆ ಹೃದಯ ಇದ್ದಂತೆ. ಬಹಳ ವಿಶೇಷವಾದ ಮಾಹಿತಿ, ಚಿತ್ರಗಳನ್ನು ಈ ಕೋಣೆಗಳಲ್ಲಿ ಗಮನಿಸಬಹುದಾಗಿದೆ. ಮತ್ತೊಂದು ಕೋಣೆಯಲ್ಲಿ ತಿಮ್ಮಯ್ಯ ಅವರ ಪರಿಚಯ ಮಾಡುವ 15 ನಿಮಿಷಗಳ ಸಾಕ್ಷ್ಯತ್ರ ವೀಕ್ಷಿಸಬಹುದು.
ವಿವಾಹ, ಕುಟುಂಬಸ್ಥರ ಚಿತ್ರ ಅನಾವರಣ
2ನೇ ಕೋಣೆಯಲ್ಲಿ ತಿಮ್ಮಯ್ಯ ಅವರ ಮೂಲವಾಗಿರುವ ಕೊಡಗು, ಕೊಡವ ಸಂಸ್ಕೃತಿ ಪರಿಚಯಿಸಲಾಯಿದೆ. ಸನ್ನಿಸೈಡ್ನಲ್ಲಿ ನಡೆದ ತಿಮ್ಮಯ್ಯ ಅವರ ವಿವಾಹ, ರಾಜಾಸೀಟ್ ಉದ್ಯಾನಕ್ಕೆ ಭೇಟಿ, ತಿಮ್ಮಯ್ಯ ಕುಟುಂಬಸ್ಥರ ಚಿತ್ರಗಳನ್ನು ಹಾಕಲಾಗಿದೆ. ಕೊಡವ ಸಂಸ್ಕೃತಿಯ ಹೆಗ್ಗುರುತು ಒಡಿಕತ್ತಿ, ಪೀಚೆಕತ್ತಿ, ಕಡತಲೆ, ಕೊಡವತಿ ಧರಿಸುವ ಆಭರಣಗಳಾದ ಪತ್ತಾಕ್, ಪೀಚೆಕತ್ತಿ ಇಡಲಾಗಿದೆ. ಕೊಡವ ಸಂಸ್ಕೃತಿಯನ್ನು ಟಿವಿ ಪರದೆ ಮೂಲಕ ಸೂಕ್ಷ್ಮವಾಗಿ ಪರಿಚಯಿಸುವ ವ್ಯವಸ್ಥೆ ಮಾಡಲಾಗಿದೆ.
ಪುರುಷ-ಮಹಿಳಾ ಕೋಣೆ
ಮ್ಯೂಸಿಯಂನಲ್ಲಿ ಪುರುಷ ಮತ್ತು ಮಹಿಳಾ ಕೋಣೆ ಪ್ರತ್ಯೇಕವಾಗಿವೆ. ಪುರುಷ ಕೋಣೆಯಲ್ಲಿ ತಿಮ್ಮಯ್ಯ ಅವರ ಬಗ್ಗೆ ಮಾಹಿತಿ ನೀಡಲಾಗಿದೆ. ಮಹಿಳಾ ಕೋಣೆಯಲ್ಲಿ ತಿಮ್ಮಯ್ಯ ಅವರ ಪತ್ನಿ ನೀನಾ ಅವರನ್ನು ಪರಿಚಯಿಸಲಾಗುತ್ತಿದೆ. ಈ ಕೋಣೆಯಲ್ಲಿ ಹಾಸಿಗೆ, ದಿಂಬು ಹಾಕಲಾಗಿದೆ. ತಿಮ್ಮಯ್ಯ ಅವರ ಅಜ್ಜ ಬಳಸುತ್ತಿದ್ದ ಬಾರ್ ಅನ್ನು ಇಲ್ಲಿ ಪರಿಚಯಿಸಲಾಗಿದೆ.
27 ರೀತಿಯ ಗನ್
ಭಾರತೀಯ ಸೇನೆಯಿಂದ ಪಡೆಯಲಾಗಿರುವ 27 ರೀತಿಯ ಸೇನಾ ಗನ್ ಇಲ್ಲಿರುವುದು ವಿಶೇಷ. ದೇಶ-ವಿದೇಶದಲ್ಲಿರುವ ಮ್ಯೂಸಿಯಂನಲ್ಲಿ ಯಾವ ವಸ್ತುಗಳನ್ನೂ ಮುಟ್ಟುವಂತಿಲ್ಲ. ಆದರೆ, ತಿಮ್ಮಯ್ಯ ಮ್ಯೂಸಿಯಂನಲ್ಲಿರುವ ಗನ್ಗಳನ್ನು ಕೈಯಲ್ಲಿ ಹಿಡಿದುಕೊಳ್ಳಬಹುದು. ನಿಮಗೆ ಬೇಕಾದಂತೆ ಫೋಟೋ ತೆಗೆದುಕೊಳ್ಳಬಹುದು. ಹಲವು ಕೋಣೆಗಳಲ್ಲಿ ಗನ್ಗಳು ಸಿಗುತ್ತವೆ. ಒಂದು ಕೋಣೆಯನ್ನು ಗನ್ಗಾಗಿ ಮೀಸಲಿಡಲಾಗಿದೆ. ಗನ್ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸುವ ಮತ್ತು ಅನುಭವಿಸುವ ಉದ್ದೇಶದಿಂದ ಮುಟ್ಟಲು ಮತ್ತು ಎತ್ತಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಮೇಜರ್ ಬಿದ್ದಂಡ ನಂದ ನಂಜಪ್ಪ ಹೇಳುತ್ತಾರೆ.
ಗಣ್ಯರ ಪರಿಚಯ
ಮ್ಯೂಸಿಯಂನಲ್ಲಿ ಸ್ಕಾ್ವಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ, ಮನೆಯಪಂಡ ಮುತ್ತಣ್ಣ ಸೋಮಯ್ಯ, ರಾಬ್ ಬಹದೂರ್ ಪೆಮ್ಮಂಡ ಕೆ. ಮೊಣ್ಣಪ್ಪ, ಮೊಳ್ಳೇರ ಪಿ. ಗಣೇಶ್, ಪಂದ್ಯಂಡ ಬೆಳ್ಯಪ್ಪ, ದಿವಾನ್ಬಹದೂರು ಕೇಟೋಳೀರ ಚಂಗಪ್ಪ ಸೇರಿದಂತೆ ಕೊಡಗಿನ ಕೀರ್ತಿ ಪತಾಕೆ ಎತ್ತಿಹಿಡಿದವರನ್ನು ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ.
ಬಾಲ್ಯದ ನೆನಪು
ತಿಮ್ಮಯ್ಯ ವಿದ್ಯಾಭ್ಯಾಸ, ಬಾಲ್ಯದ ಜೀವನಗಳನ್ನು ಪರಿಚಿಸುವ ಅಪರೂಪದ ಚಿತ್ರ, ದಾಖಲೆಗಳು ಮ್ಯೂಸಿಯಂನಲ್ಲಿವೆ. ಪ್ರಾಂಶುಪಾಲರು, ಶಿಕ್ಷಕರು ತಿಮ್ಮಯ್ಯ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯದ ಅಧಿಕೃತ ದಾಖಲೆ ಲಭ್ಯ. ತರಗತಿ ಹಾಜರಾಗಿ, ವಿಷಯವಾರು ಪಡೆದ ಅಂಕಗಳ ಮಾಹಿತಿಯೂ ಇದೆ.
15 ವರ್ಷಗಳ ಸತತ ಪರಿಶ್ರಮದಿಂದ ಮ್ಯೂಸಿಯಂ ರೂಪುಗೊಂಡಿದ್ದು, ನಮಗೆ ತೃಪ್ತಿ ತಂದಿದೆ. ಪ್ರಥಮ ಮತ್ತು ದ್ವಿತೀಯ ಹಂತದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಅನುದಾನ ಬಿಡುಗಡೆ ಆಗದ್ದರಿಂದ ಮೂರನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. | ಮೇಜರ್ ಬಿದ್ದಂಡ ನಂದ ನಂಜಪ್ಪ (ನಿವೃತ್ತ) ಸಂಚಾಲಕರು, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ-ಜನರಲ್ ಕೆ.ಎಸ್. ತಿಮ್ಮಯ್ಯ ಫೋರಂ.